* ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕಿಂದು ಬಲಿಷ್ಠ ಪಂಜಾಬ್ ಕಿಂಗ್ಸ್ ಸವಾಲು* ಆರ್‌ಸಿಬಿ ವಿರುದ್ದ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಪಂಜಾಬ್* ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ ಕೋಲ್ಕತಾ ನೈಟ್ ರೈಡರ್ಸ್
ಮುಂಬೈ(ಏ.01): ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ವಿರುದ್ಧದ ಗೆಲುವಿನೊಂದಿಗೆ 15ನೇ ಆವೃತ್ತಿಯ ಐಪಿಎಲ್ (IPL 2022) ಅಭಿಯಾನ ಅರಂಭಿಸಿದ್ದ ಪಂಜಾಬ್ ಕಿಂಗ್ಸ್ (Punjab Kings), ಶುಕ್ರವಾರ ಕಳೆದ ಬಾರಿ ರನ್ನರ್-ಅಪ್ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ವಿರುದ್ಧ ಸೆಣಸಾಡಲಿದೆ. ಕನ್ನಡಿಗ ಮಯಾಂಕ್ ಅಗರ್‌ವಾಲ್ (Mayank Agarwal) ನಾಯಕತ್ವದ ಪಂಜಾಬ್ ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಶ್ರೇಯಸ್ ಅಯ್ಯರ್ ಪಡೆ ಆರ್‌ಸಿಬಿ (RCB) ವಿರುದ್ಧದ ಸೋಲಿನ ಆಘಾತದಿಂದ ಹೊರಬರಲು ಎದುರು ನೋಡುತ್ತಿದೆ.
ಆರ್‌ಸಿಬಿ ವಿರುದ್ಧ ಮಿಂಚಿದ್ದ ಪಂಜಾಬ್ ಆರಂಭಿಕ ಆಟಗಾರರು ಲಯ ಮುಂದುವರಿಸುವ ಕಾತರದಲ್ಲಿದ್ದಾರೆ. ಮಯಾಂಕ್‌ಗೆ ಅನುಭವಿ ಬ್ಯಾಟರ್ ಶಿಖರ್ ಧವನ್ (Shikhar Dhawan) ಉತ್ತಮ ಬೆಂಬಲ ನೀಡುತ್ತಿದ್ದು, ಆರ್‌ಸಿಬಿ ವಿರುದ್ಧ 22 ಎಸೆತಗಳಲ್ಲಿ 43 ರನ್ ಸಿಡಿಸಿದ್ದ ಶ್ರೀಲಂಕಾದ ಭನುಕ ರಾಜಪಕ್ಸ ಮತ್ತೊಂದು ಆಕರ್ಷಕ ಇನ್ನಿಂಗ್ಸ್ ಕಟ್ಟುವ ನಿರೀಕ್ಷೆಯಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟರ್‌ಗಳಾದ ಲಿಯಾಮ್ ಲಿವಿಂಗ್‌ಸ್ಟೋನ್, ಶಾರುಖ್ ಖಾನ್, ಒಡೆಯನ್ ಸ್ಮಿತ್ ತಂಡಕ್ಕೆ ಬಲ ಒದಗಿಸಲಿದ್ದಾರೆ. ಕಳೆದ ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದ ಅಂಡರ್-19 ತಾರೆ ರಾಜ್ ಬಾವ ಮತ್ತೊಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ತಂಡದ ಬೌಲಿಂಗ್ ಪಡೆ ಕಳೆದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿತ್ತು. ಭಾರತೀಯ ವೇಗಿಗಳಾದ ಸಂದೀಪ್ ಶರ್ಮಾ ಹಾಗೂ ಆರ್ಶದೀಪ್ ಸಿಂಗ್ ದುಬಾರಿಯಾಗಿದ್ದರು. ಒಡೆಯನ್ ಸ್ಮಿತ್ ಬರೋಬ್ಬರಿ 52 ರನ್ ಬಿಟ್ಟುಕೊಟ್ಟಿದ್ದರು. ರಾಹುಲ್ ಚಹರ್ ಮಾತ್ರ ಉತ್ತಮ ಪ್ರದರ್ಶನ ತೋರಿದ್ದರು. ಕೆಕೆಆರ್‌ನ ತಾರಾ ಬ್ಯಾಟರ್‌ಗಳನ್ನು ಕಟ್ಟಿಹಾಕಬೇಕಾದರೆ ಬೌಲರ್‌ಗಳು ಸುಧಾರಿತ ಪ್ರದರ್ಶನ ನೀಡಬೇಕಿದೆ.
ಇನ್ನು, ಕೆಕೆಆರ್ ಆರಂಭಿಕ ಪಂದ್ಯದಲ್ಲಿ ಚೆನ್ನೈಗೆ ಸೋಲುಣಿಸಿದ್ದರೂ, ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಕಳಪೆ ಬ್ಯಾಟಿಂಗ್‌ನಿಂದಾಗಿ ಪರಾಭವಗೊಂಡಿತ್ತು. ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಜೊತೆ ತಾರಾ ಆಟಗಾರ ವೆಂಕಟೇಶ್ ಅಯ್ಯರ್ ಜವಾಬ್ದಾರಿ ಅರಿತು ಆಡಬೇಕಿದೆ. ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಜೊತೆ ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್ ಕೂಡಾ ಉತ್ತಮ ಪ್ರದರ್ಶನ ನೀಡಬೇಕಿದೆ. ಸ್ಫೋಟಕ ಬ್ಯಾಟರ್ ಆ್ಯಂಡ್ರೆ ರಸೆಲ್, ಸುನಿಲ್ ನರೈನ್ ಮಿಂಚಿದರೆ ತಂಡಕ್ಕೆ ಗೆಲುವು ಸುಲಭವಾಗಲಿದೆ. ತಂಡದ ಬೌಲಿಂಗ್ ಪಡೆ ಎರಡೂ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದು, ಮತ್ತೊಮ್ಮೆ ಎದುರಾಳಿ ತಂಡಕ್ಕೆ ಕಂಟಕವಾಗುವ ನಿರೀಕ್ಷೆ ಇದೆ. ಉಮೇಶ್ ಯಾದವ್ ಭರ್ಜರಿ ಲಯದಲ್ಲಿದ್ದು, ಅನುಭವಿ ಟಿಮ್ ಸೌಥಿ, ರಸೆಲ್ ಕೂಡಾ ಉತ್ತಮ ಬೆಂಬಲ ನೀಡಬೇಕಿದೆ. ನರೈನ್ ಮತ್ತು ವರುಣ್ ಚಕ್ರವರ್ತಿ ಮೇಲೆ ನಾಯಕ ಶ್ರೇಯಸ್ ಹೆಚ್ಚಿನ ನಿರೀಕ್ಷೆ ಇರಿಸಿದ್ದಾರೆ.
IPL 2022: ಲಖನೌಗೆ ಶರಣಾದ ಚೆನ್ನೈ ಸೂಪರ್ ಕಿಂಗ್ಸ್, ರಾಹುಲ್ ಪಡೆಗೆ ಮೊದಲ ಗೆಲುವು
ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಉಭಯ ತಂಡಗಳು ಒಟ್ಟು 29 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. ಕೋಲ್ಕತಾ ನೈಟ್ ರೈಡರ್ಸ್ ತಂಡವು 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಪಂಜಾಬ್ ಕಿಂಗ್ಸ್ ತಂಡವು 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.
ಸಂಭವನೀಯ ಆಟಗಾರರ ಪಟ್ಟಿ
ಪಂಜಾಬ್: ಶಿಖರ್ ಧವನ್, ಮಯಾಂಕ್ ಅಗರ್‌ವಾಲ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಭನುಕ ರಾಜಪಕ್ಸ, ಶಾರುಖ್ ಖಾನ್, ರಾಜ್ ಬಾವಾ, ಒಡೆಯನ್ ಸ್ಮಿತ್, ಹಪ್ರೀತ್ ಬ್ರಾರ್, ಸಂದೀಪ್ ಶರ್ಮಾ, ರಾಹುಲ್ ಚಹರ್, ಅಶ್‌ರ್‍ದೀಪ್ ಸಿಂಗ್.
ಕೆಕೆಆರ್: ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಶೆಲ್ಡನ್ ಜಾಕ್ಸನ್, ಟಿಮ್ ಸೌಥಿ, ವರುಣ್ ಆರನ್, ಉಮೇಶ್ ಯಾದವ್.
ಸ್ಥಳ: ಮುಂಬೈ, ವಾಂಖೇಡೆ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
