* ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಕೋಲ್ಕತಾ ನೈಟ್ ರೈಡರ್ಸ್‌* ಬಲಿಷ್ಠ ಲಖನೌ ಸೂಪರ್ ಜೈಂಟ್ಸ್ ತಂಡಕ್ಕಿಂದು ಕೆಕೆಆರ್ ಸವಾಲು* ಅಂಕಪಟ್ಟಿಯಲ್ಲಿ ಟಾಪ್ 2ನೊಳಗೆ ಸ್ಥಾನ ಪಡೆಯಲು ಎದುರು ನೋಡುತ್ತಿದೆ ಲಖನೌ ಸೂಪರ್ ಜೈಂಟ್ಸ್

ನವಿ ಮುಂಬೈ(ಮೇ.18): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ ಲೀಗ್‌ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದಿದ್ದು, ಪ್ಲೇ-ಆಫ್‌ ರೇಸ್‌ನಲ್ಲಿರುವ ತಂಡಗಳ ನಡುವಿನ ಪೈಪೋಟಿ ಮತ್ತಷ್ಟು ಹೆಚ್ಚಾಗಿದೆ. ಬುಧವಾರ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ (Lucknow Super Giants) ಹಾಗೂ ಕೋಲ್ಕತಾ ನೈಟ್‌ ರೈಡ​ರ್ಸ್‌ (Kolkata Knight Riders) ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಡಿವೈ ಪಾಟೀಲ್ ಕ್ರಿಕೆಟ್ ಅಕಾಡೆಮಿ ಆತಿಥ್ಯವನ್ನು ವಹಿಸಿದೆ

ಕೆ.ಎಲ್‌.ರಾಹುಲ್‌ (KL Rahul) ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ಆಡಿದ 13 ಪಂದ್ಯಗಳಲ್ಲಿ 8ರಲ್ಲಿ ಗೆದ್ದಿದ್ದು, 16 ಅಂಕದೊಂದಿಗೆ ಪ್ಲೇ-ಆಫ್‌ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿದೆ. ಆದರೆ ಸ್ಥಾನ ಅಧಿಕೃತಗೊಳಿಸುವ ಕಾತರದಲ್ಲಿರುವ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಸೋತರೂ ನೆಟ್‌ ರನ್‌ರೇಟ್‌ ಆಧಾರದಲ್ಲಿ ಅಗ್ರ 4ರಲ್ಲೇ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚು. ಗೆದ್ದು ಅಗ್ರ 2ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ತಂಡದ ಮುಂದಿರುವ ಗುರಿ.

ಕಳೆದ ವಾರ ಲಖನೌ ಸೂಪರ್‌ ಜೈಂಟ್ಸ್‌ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತ್ತು. ಆದರೆ ಸತತ ಸೋಲುಗಳಿಂದ ಕೆ.ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್‌ ತಂಡವು ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಾರುವಂತೆ ಮಾಡಿದೆ. ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲಿರುವುದರಿಂದ ಲಖನೌ ತಂಡವು ಈ ಪಂದ್ಯದಲ್ಲಿ ಶತಾಯಗತಾಯ ಗೆಲುವು ಸಾಧಿಸಲು ಎದುರು ನೋಡುತ್ತಿದೆ. ಕ್ವಿಂಟನ್ ಡಿ ಕಾಕ್, ಕೆ ಎಲ್ ರಾಹುಲ್ ಹಾಗೂ ದೀಪಕ್ ಹೂಡಾ ಅವರನ್ನು ಬ್ಯಾಟಿಂಗ್‌ನಲ್ಲಿ ಲಖನೌ ತಂಡವು ನೆಚ್ಚಿಕೊಂಡಿದೆ. ಇನ್ನು ಬೌಲಿಂಗ್‌ನಲ್ಲಿ ದುಸ್ಮಂತ್ ಚಮೀರಾ, ಮೊಯ್ಸಿನ್ ಖಾನ್, ಆವೇಶ್ ಖಾನ್ ಹಾಗೂ ಕೃನಾಲ್ ಪಾಂಡ್ಯ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. 

ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ವೇಗಿ ಜಸ್ಪ್ರೀತ್ ಬುಮ್ರಾ..!

ಮತ್ತೊಂದೆಡೆ 13 ಪಂದ್ಯಗಳಲ್ಲಿ ಕೇವಲ 6ರಲ್ಲಿ ಗೆದ್ದಿರುವ ಕೆಕೆಆರ್‌ಗೆ ಇದು ನಿರ್ಣಾಯಕ ಪಂದ್ಯ. ಕಳೆದ ಬಾರಿ ರನ್ನರ್‌-ಅಪ್‌ ತಂಡಕ್ಕೆ ಪ್ಲೇ-ಆಫ್‌ ಆಸೆ ಜೀವಂತವಾಗಿರಬೇಕಾದರೆ ಈ ಪಂದ್ಯದಲ್ಲಿ ಭಾರೀ ಅಂತರದಲ್ಲಿ ಗೆಲ್ಲುವುದರ ಜೊತೆಗೆ ಇತರ ತಂಡಗಳ ಪಂದ್ಯಗಳ ಫಲಿತಾಂಶ ತನ್ನ ಪರವಾಗಿ ಬರಬೇಕು. ಸೋತರೆ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡವು ಪ್ಲೇ ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ. ಕೆಕೆಆರ್ ತಂಡವು ಮೇಲ್ನೋಟಕ್ಕೆ ಬಲಿಷ್ಠವಾಗಿ ಗುರುತಿಸಿಕೊಂಡರು, ತಂಡದ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ನಿತೀಶ್ ರಾಣಾ, ಶ್ರೇಯಸ್ ಅಯ್ಯರ್, ಆಂಡ್ರೆ ರಸೆಲ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸಬೇಕಿದೆ. ಇನ್ನು ಸುನಿಲ್ ನರೈನ್ ಎದುರಾಳಿ ತಂಡದ ರನ್ ವೇಗಕ್ಕೆ ಕಡಿವಾಣ ಹಾಕುತ್ತಿದ್ದು, ಉಳಿದ ಬೌಲರ್‌ಗಳು ಸಂಘಟಿತ ಪ್ರದರ್ಶನ ತೋರಿದರೆ ಲಖನೌ ತಂಡಕ್ಕೆ ಮತ್ತೊಂದು ಸೋಲುಣಿಸುವುದು ಕಷ್ಟಸಾಧ್ಯವೇನಲ್ಲ.

ಸಂಭಾವ್ಯ ತಂಡಗಳು ಹೀಗಿದೆ ನೋಡಿ

ಲಖನೌ ಸೂಪರ್ ಜೈಂಟ್ಸ್‌:
ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೆ ಎಲ್ ರಾಹುಲ್(ನಾಯಕ), ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಆಯುಷ್ ಬದೋನಿ, ಮಾರ್ಕಸ್‌ ಸ್ಟೋನಿಸ್, ಜೇಸನ್ ಹೋಲ್ಡರ್, ಮೊಯ್ಸಿನ್ ಖಾನ್, ರವಿ ಬಿಷ್ಣೋಯಿ, ದುಸ್ಮಂತ ಚಮೀರಾ, ಆವೇಶ್ ಖಾನ್

ಕೋಲ್ಕತಾ ನೈಟ್ ರೈಡರ್ಸ್‌:
ವೆಂಕಟೇಶ್ ಅಯ್ಯರ್, ಬಾಬಾ ಅಪರಾಜಿತ್, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್(ನಾಯಕ), ಸ್ಯಾಮ್ ಬಿಲ್ಲಿಂಗ್ಸ್(ವಿಕೆಟ್ ಕೀಪರ್), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಉಮೇಶ್ ಯಾದವ್, ಟಿಮ್ ಸೌಥಿ, ವರುಣ್ ಚಕ್ರವರ್ತಿ. 

ಸ್ಥಳ: ನವಿ ಮುಂಬೈ, ಡಿ.ವೈ.ಪಾಟೀಲ್‌ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌