* ಟೀಂ ಇಂಡಿಯಾ ಕ್ಯಾಪ್ಟನ್ಸಿಗಾಗಿ ಮೂವರು ಯುವ ಕ್ರಿಕೆಟಿಗರ ನಡುವೆ ಪೈಪೋಟಿ* ಶ್ರೇಯಸ್‌ ಅಯ್ಯರ್-ಕೆ.ಎಲ್ ರಾಹುಲ್-ರಿಷಭ್ ಪಂತ್‌ ನಡುವೆ ಭವಿಷ್ಯದ ನಾಯಕತ್ವಕ್ಕಾಗಿ ಪೈಪೋಟಿ* ಮೊದಲ 3 ಐಪಿಎಲ್‌ ಪಂದ್ಯದಲ್ಲಿ ನಾಯಕತ್ವ ಗುಣಗಳ ಮೂಲಕ ಗಮನ ಸೆಳೆದ ಅಯ್ಯರ್

ಬೆಂಗಳೂರು(ಏ.05): ಈ ಸಲದ ಐಪಿಎಲ್ (IPL 2022) ಯುವ ಪ್ರತಿಭೆಗಳನ್ನ ಬೆಳಕಿಗೆ ಮಾತ್ರ ತರೋದಿಲ್ಲ. ಭವಿಷ್ಯದ ಟೀಂ ಇಂಡಿಯಾ (Team India) ನಾಯಕನನ್ನೂ ಬೆಳಕಿಗೆ ತರುತ್ತದೆ. ಹೌದು, 10 ಐಪಿಎಲ್ ಟೀಂ​ಗಳ ಪೈಕಿ 8 ತಂಡಗಳಿಗೆ ಭಾರತೀಯರೇ ನಾಯಕರು. ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕ. ಉಳಿದ 7ರಲ್ಲಿ ನಾಲ್ವರು ಟೀಂ ಇಂಡಿಯಾ ಕ್ಯಾಪ್ಟನ್ಸಿ ರೇಸ್​ನಲ್ಲಿಲ್ಲ. ಕೆಎಲ್ ರಾಹುಲ್ (KL Rahul), ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಟೀಂ ಇಂಡಿಯಾ ಭವಿಷ್ಯದ ಕ್ಯಾಪ್ಟನ್ ಆಗಲು ಕಾಯ್ತಿದ್ದಾರೆ. ಈ ಮೂವರ ನಡುವೆ ಐಪಿಎಲ್​ನಲ್ಲಿ ಆಗ್ಲೇ ಕ್ಯಾಪ್ಟನ್ಸಿ ರೇಸ್ ಶುರುವಾಗಿದೆ.

ಕೆ.ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ಮೂರು ಪಂದ್ಯಗಳನ್ನಾಡಿ 2 ಗೆಲುವು ಹಾಗೂ ಒಂದು ಸೋಲಿನೊಂದಿಗೆ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದರೆ, ರಿಷಭ್ ಪಂತ್ (Rishabh Pant) ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು 2 ಪಂದ್ಯಗಳನ್ನಾಡಿ ಒಂದು ಗೆಲುವು ಹಾಗೂ ಒಂದು ಸೋಲಿನೊಂದಿಗೆ 2 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇನ್ನು ಶ್ರೇಯಸ್ ಅಯ್ಯರ್ (Shreyas Iyer) ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಮೂರು ಪಂದ್ಯದಲ್ಲಿ ಗಮನ ಸೆಳೆದ ಶ್ರೇಯಸ್ ಕ್ಯಾಪ್ಟನ್ಸಿ:

ಕೆ.ಎಲ್ ರಾಹುಲ್-ರಿಷಭ್ ಪಂತ್ ಸೈಡಿಗಿರಲಿ. ಕ್ಯಾಪ್ಟನ್ಸಿ ರೇಸ್​ನಲ್ಲಿ ಮೂರನೇಯವರಾಗಿದ್ದ ಶ್ರೇಯಸ್ ಅಯ್ಯರ್, ಈಗ ರೇಸ್​ನಲ್ಲಿ ಫಸ್ಟ್​ನಲ್ಲಿದ್ದಾರೆ. ಹೌದು, ಈ ಸಲದ ಐಪಿಎಲ್​ನಲ್ಲಿ ಶ್ರೇಯಸ್, ಕೆಕೆಆರ್ ತಂಡವನ್ನ ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಮೂರು ಪಂದ್ಯದಲ್ಲಿ ಶ್ರೇಯಸ್ ಕ್ಯಾಪ್ಟನ್ಸಿಯಲ್ಲಿ KKR​ ಎರಡು ಗೆದ್ದು ಒಂದು ಸೋತಿದೆ. ಅಯ್ಯೋ ಆಡಿರೋದು ಮೂರೇ ಮ್ಯಾಚ್. ಆಗ್ಲೇ ಶ್ರೇಯಸ್ ದಿ ಬೆಸ್ಟ್ ಕ್ಯಾಪ್ಟನ್ ಅಂತಿದ್ದಾರೆ ಅನ್ನಬೇಡಿ. ನಡೆದಿರೋದು ಮೂರೇ ಮ್ಯಾಚ್ ಆದ್ರೂ ಆ ಮೂರಲ್ಲೂ ಅಯ್ಯರ್​ ನಾಯಕತ್ವ ಗುಣಗಳು ಬೆಳಕಿಗೆ ಬಂದಿವೆ.

ಮೂರು ತಂಡಗಳನ್ನೂ 140 ರನ್​ ಒಳಗೆ ಕಟ್ಟಿಹಾಕಿರುವ ಶ್ರೇಯಸ್:

ಮೂರರಲ್ಲಿ ಎರಡು ಪಂದ್ಯವನ್ನ ಚೇಸ್ ಮಾಡಿ ಗೆದ್ದಿದೆ ಕೆಕೆಆರ್​. ಸಿಎಸ್​ಕೆ ತಂಡವನ್ನ 131 ಮತ್ತು ಪಂಜಾಬ್ ತಂಡವನ್ನ 137 ರನ್​ಗೆ ಕಟ್ಟಿಹಾಕಿದ್ದಾರೆ KKR ಬೌಲರ್ಸ್​. KKR ಬೌಲರ್ಸ್ ಅನ್ನೋದಕ್ಕಿಂತ KKR ನಾಯಕ ಶ್ರೇಯಸ್ ಅಯ್ಯರ್ ಅಂದರೆ ಉತ್ತಮ. ಯಾಕಂದರೆ ತಂಡ ಎಷ್ಟೇ ಬಲಿಷ್ಠವಾಗಿದ್ದರೂ ನಾಯಕತ್ವ ಸರಿಯಿಲ್ಲ ಅಂದರೆ ತಂಡ ಸಕ್ಸಸ್​ ಆಗೋದು ಕಷ್ಟ. ಈ ಎರಡು ಪಂದ್ಯಗಳ ಗೆಲುವಿಗೆ ಬೌಲರ್ಸ್ ಕಾರಣರಾಗಿದ್ದರೂ ಕ್ಯಾಪ್ಟನ್ ಶ್ರೇಯಸ್​ ನಾಯಕತ್ವ ಅಷ್ಟೇ ಕಾರಣ.

IPL 2022: ಕ್ರಿಕೆಟ್‌ ಕಿಟ್ ಕೊಳ್ಳಲು ಪರದಾಡಿದ್ದ ತಿಲಕ್‌ ವರ್ಮಾ, ಈಗ ಮುಂಬೈ ಸೆನ್ಸೇಷನ್ ಪ್ಲೇಯರ್..!

129 ರನ್ ಚೇಸ್ ಮಾಡಲು ಪರದಾಡಿದ್ದ ಆರ್​ಸಿಬಿ:

ಆರ್​ಸಿಬಿ ವಿರುದ್ಧ ಕೆಕೆಆರ್ ಸೋತರೂ ಶ್ರೇಯಸ್ ನಾಯಕತ್ವದಿಂದ ಎಲ್ಲರ ಗಮನ ಸೆಳೆದರು. ಕೆಕೆಆರ್ ಹೊಡೆದಿದ್ದು 128 ರನ್ ಮಾತ್ರ. ಆರ್​ಸಿಬಿ 129 ರನ್​ ಗಳನ್ನ ಈಸಿಯಾಗಿ ಚೇಸ್ ಮಾಡಿ ಗೆಲ್ಲುತ್ತೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ ಅಯ್ಯರ್, ಅದ್ಭುತ ಕ್ಯಾಪ್ಟನ್ಸಿಯಿಂದಾಗಿ ಆರ್​​ಸಿಬಿ ಕೊನೆ ಓವರ್​ನಲ್ಲಿ ಪಂದ್ಯ ಗೆಲ್ಲಬೇಕಾಯ್ತು. ಕೊನೆ ಓವರ್​ ವರೆಗೂ ಪಂದ್ಯವನ್ನ ಡೋಲಾಯಮಾನವಾಗಿರಿಸಿದ್ದು ಶ್ರೇಯಸ್ ನಾಯಕತ್ವವಲ್ಲದೆ ಬೇರೆ ಯಾರೂ ಅಲ್ಲ. ಹಾಗಾಗಿ ಟೀಂ ಇಂಡಿಯಾ ಕ್ಯಾಪ್ಟನ್ಸಿ ರೇಸ್​ನಲ್ಲಿ ರಿಷಭ್​ ಹಾಗೂ ರಾಹುಲ್ ಹಿಂದಿಕ್ಕಿ ಶ್ರೇಯಸ್ ಅಯ್ಯರ್ ಮುನ್ನುಗ್ಗುತ್ತಿದ್ದಾರೆ. ಅವರ ನಾಯಕತ್ವ ಹೀಗೆ ಮುಂದುವರೆದ್ರೆ ರೋಹಿತ್ ಶರ್ಮಾ ನಂತರ ಅವರೇ ಟೀಂ ಇಂಡಿಯಾ ನಾಯಕ ಆಗೋದ್ರಲ್ಲಿ ಅನುಮಾನವಿಲ್ಲ.