Asianet Suvarna News Asianet Suvarna News

IPL 2022: ಸಾಧ್ಯವಾದರೆ ಎಂದೆಂದಿಗೂ ನಾನು ಕೆಕೆಆರ್ ಪರವೇ ಆಡಬೇಕೆಂದಿದ್ದೇನೆಂದ ಶುಭ್‌ಮನ್‌ ಗಿಲ್‌

* ಎಂದೆಂದಿಗೂ ಕೆಕೆಆರ್ ಪರ ಆಡಲು ಬಯಸಿದ ಶುಭ್‌ಮನ್‌ ಗಿಲ್

* 2021ರ ಐಪಿಎಲ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದ ಕೆಕೆಆರ್

* ಆರಂಭಿಕ ಬ್ಯಾಟರ್‌ ಶುಭ್‌ಮನ್ ಗಿಲ್‌ರನ್ನು ರೀಟೈನ್ ಮಾಡಿಕೊಳ್ಳದ ಕೆಕೆಆರ್ ಫ್ರಾಂಚೈಸಿ

IPL 2022 I would play for Kolkata Knight Riders forever if possible Says Shubman Gill kvn
Author
Bengaluru, First Published Dec 25, 2021, 6:34 PM IST

ಬೆಂಗಳೂರು(ಡಿ.25): 2022ನೇ ಸಾಲಿನ ಐಪಿಎಲ್ (IPL 2022) ಟೂರ್ನಿಗೆ ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಭರದ ಸಿದ್ದತೆಗಳನ್ನು ನಡೆಸುತ್ತಿವೆ. ಮುಂಬರುವ 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ನಡೆಯಲಿರುವ ಮೆಗಾ ಹರಾಜಿಗೆ (IPL Mega Auction) ದಿನಗಣನೆ ಆರಂಭವಾಗಿದೆ. 2022ರ ಐಪಿಎಲ್ ಟೂರ್ನಿಯಲ್ಲಿ ಹೊಸದಾಗಿ ಎರಡು ತಂಡಗಳು ಸೇರ್ಪಡೆಯಾಗಿರುವುದರಿಂದ ಮೆಗಾ ಹರಾಜಿಗೂ ಮುನ್ನ ಈಗಿರುವ 8 ಫ್ರಾಂಚೈಸಿಗಳಿಗೆ ಗರಿಷ್ಠ ನಾಲ್ವರು ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ನೀಡಿತ್ತು. ಆದರೆ ಕೋಲ್ಕತ ನೈಟ್‌ ರೈಡರ್ಸ್‌ (Kolkata Knight Riders) ಫ್ರಾಂಚೈಸಿಯು ತನ್ನ ಆರಂಭಿಕ ಬ್ಯಾಟರ್‌ ಶುಭ್‌ಮನ್ ಗಿಲ್ (Shubman Gill) ಅವರನ್ನು ರೀಟೈನ್‌ ಮಾಡಿಕೊಂಡಿರಲಿಲ್ಲ.

ಇದೀಗ ಶುಭ್‌ಮನ್‌ ಗಿಲ್‌, ಕೆಕೆಆರ್ ಫ್ರಾಂಚೈಸಿ (KKR Franchise) ಜತೆಗಿನ ಭಾವನಾತ್ಮಕ ಸಂಬಂಧದ ಕುರಿತಂತೆ ತುಟಿಬಿಚ್ಚಿದ್ದು, ಒಂದು ವೇಳೆ ಸಾಧ್ಯವಾದರೆ ಇಂಡಿಯನ್‌ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಎಂದೆಂದಿಗೂ ಕೋಲ್ಕತ ನೈಟ್‌ ರೈಡರ್ಸ್‌ ತಂಡದ ಪರವೇ ಆಡಲು ಬಯಸುವುದಾಗಿ ಬಲಗೈ ಬ್ಯಾಟರ್‌ ಶುಭ್‌ಮನ್ ಗಿಲ್ ಹೇಳಿದ್ದಾರೆ. ಅಂಡರ್ 19 ವಿಶ್ವಕಪ್ ಹೀರೋ ಶುಭ್‌ಮನ್‌ ಗಿಲ್‌, 2018ರಲ್ಲಿ ಐಪಿಎಲ್‌ಗೆ ಕೆಕೆಆರ್ ಪರ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಕೆಕೆಆರ್ ತಂಡದ ಪರ ಸ್ಪೋಟಕ ಬ್ಯಾಟಿಂಗ್ ಮೂಲಕ ಗಿಲ್ ಗಮನ ಸೆಳೆದಿದ್ದಾರೆ. ಇದೆಲ್ಲದರ ಹೊರತಾಗಿಯೂ ಕೆಕೆಆರ್ ಫ್ರಾಂಚೈಸಿ ಗಿಲ್‌ ಅವರನ್ನು ರೀಟೈನ್ ಮಾಡಿಕೊಳ್ಳದೇ ಇರುವುದಕ್ಕೆ ಹಲವು ಮಂದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಎರಡು ಬಾರಿಯ ಐಪಿಎಲ್‌ ಚಾಂಪಿಯನ್‌ ಕೋಲ್ಕತ ನೈಟ್ ರೈಡರ್ಸ್‌ ತಂಡವು ತನಗಿರುವ ನಾಲ್ಕು ರೀಟೈನ್ ಅವಕಾಶದಲ್ಲಿ ಆ್ಯಂಡ್ರೆ ರಸೆಲ್‌(Andre Russell), ಸುನಿಲ್ ನರೈನ್(Sunil Narine), ವೆಂಕಟೇಶ್ ಅಯ್ಯರ್ (Venkatesh Iyer) ಹಾಗೂ ವರುಣ್ ಚಕ್ರವರ್ತಿ (Varun Chakravarthy) ಅವರನ್ನು ರೀಟೈನ್ ಮಾಡಿಕೊಂಡಿದೆ. ಇದೀಗ ಮುಂಬರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಕೆಕೆಆರ್ ಫ್ರಾಂಚೈಸಿಯು 22 ವರ್ಷದ ಆಟಗಾರರನ್ನು ಮತ್ತೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಕೆಕೆಆರ್ ಫ್ರಾಂಚೈಸಿಯೊಂದಿಗಿನ ನನ್ನ ಒಡನಾಟ, ನನ್ನ ಪಾಲಿಗಂತೂ ಅತ್ಯಂತ ವಿಶೇಷವಾದದ್ದು. ಒಮ್ಮೆ ನೀವು ಈ ಫ್ರಾಂಚೈಸಿಯ ಜತೆ ಒಡನಾಟ ಅನುಭವಿಸಿದರೆ, ಖಂಡಿತವಾಗಿಯೂ ನಾವು ಇದೇ ಫ್ರಾಂಚೈಸಿ ಜತೆ ಮುಂದುವರೆಯಬೇಕು ಎನಿಸುತ್ತದೆ. ಮತ್ತೆ ನನಗೆ ಕೆಕೆಆರ್ ಪರ ಆಡಲು ಅವಕಾಶ ಸಿಕ್ಕರೆ, ಎಂದೆಂದಿಗೂ ಇದೇ ತಂಡದ ಪರ ಆಡಲು ಇಷ್ಟಪಡುವುದಾಗಿ ಶುಭ್‌ಮನ್ ಗಿಲ್ ಹೇಳಿದ್ದಾರೆ.

IPL 2022: ಸನ್‌ರೈಸರ್ಸ್‌ ತಂಡದಲ್ಲಿ ಮೇಜರ್ ಸರ್ಜರಿ, ದಿಗ್ಗಜ ಕ್ರಿಕೆಟಿಗರು ಹೈದರಾಬಾದ್‌ ಪಡೆಗೆ ಕೋಚ್..!

2018ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಕೋಲ್ಕತ ನೈಟ್‌ ರೈಡರ್ಸ್‌ ಫ್ರಾಂಚೈಸಿಯು 1.8 ಕೋಟಿ ರುಪಾಯಿ ನೀಡಿ ಶುಭ್‌ಮನ್ ಗಿಲ್ ಅವರನ್ನು ಖರೀದಿಸಿತ್ತು. ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೇ ಗಿಲ್‌ 146.04 ಸ್ಟ್ರೈಕ್‌ರೇಟ್‌ನಲ್ಲಿ 203 ರನ್‌ ಬಾರಿಸಿದ್ದರು. ಗಿಲ್‌ ಇದುವರೆಗೂ ಕೆಕೆಆರ್ ತಂಡದ 58 ಪಂದ್ಯಗಳನ್ನಾಡಿ 123ರ ಸ್ಟ್ರೈಕ್‌ರೇಟ್‌ನಲ್ಲಿ 1,417 ರನ್‌ ಬಾರಿಸಿದ್ದಾರೆ. 

ಗೌತಮ್ ಗಂಭೀರ್ ನೇತೃತ್ವದ ಕೋಲ್ಕತ ನೈಟ್ ರೈಡರ್ಸ್ ತಂಡವು 2012 ಹಾಗೂ 2014ರಲ್ಲಿ ಐಪಿಎಲ್ ಚಾಂಪಿಯನ್ ಅಗಿ ಹೊರಹೊಮ್ಮಿತ್ತು. ಇದಾದ ಬಳಿಕ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಇಯಾನ್‌ ಮಾರ್ಗನ್ ನೇತೃತ್ವದ ಕೆಕೆಆರ್ ತಂಡವು ಫೈನಲ್‌ ಪ್ರವೇಶಿಸಿತ್ತಾದರೂ, ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಎದುರು ಆಘಾತಕಾರಿ ಸೋಲು ಕಾಣುವ ಮೂಲಕ ಮೂರನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕುವ ಅವಕಾಶವನ್ನು ಕೈಚೆಲ್ಲಿತು.

Follow Us:
Download App:
  • android
  • ios