* 15ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್‌ 26ರಿಂದ ಆರಂಭ* ಗುಜರಾತ್ ಟೈಟಾನ್ಸ್‌ ತಂಡ ಕೂಡಿಕೊಂಡ ಅಫ್ಘಾನಿಸ್ತಾನದ ಸ್ಪೋಟಕ ಬ್ಯಾಟರ್* ಜೇಸನ್‌ ರಾಯ್ ಬದಲಿಗೆ ಆಫ್ಘಾನ್ ಅಟಗಾರ ಗುಜರಾತ್ ಟೈಟಾನ್ಸ್ ತಂಡ ಸೇರ್ಪಡೆ

ಬೆಂಗಳೂರು(ಮಾ.08): ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿಯ ಐಪಿಎಲ್‌ (IPL 2022) ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳುತ್ತಿವೆ. ಟೂರ್ನಿ ಆರಂಭಕ್ಕೂ ಮುನ್ನವೇ ಗುಜರಾತ್ ಟೈಟಾನ್ಸ್ (Gujarat Titans) ತಂಡದ ಆಟಗಾರ ಜೇಸನ್ ರಾಯ್ (Jason Roy) ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿದ್ದರು. ಹೀಗಾಗಿ ಗುಜರಾತ್ ಫ್ರಾಂಚೈಸಿಯು ಹೊಸ ಆಟಗಾರನ ಹುಡುಕಾಟದಲ್ಲಿತ್ತು. ಇದೀಗ ಜೇಸನ್‌ ರಾಯ್ ಬದಲಿಗೆ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಆಫ್ಘಾನಿಸ್ತಾನದ ಸ್ಪೋಟಕ ಬ್ಯಾಟರ್ ರೆಹಮನ್ನುಲ್ಲಾ ಗುರ್ಬಾಜ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ ಎಂದು ವರದಿಯಾಗಿದೆ.

ಕುಟುಂಬದೊಟ್ಟಿಗೆ ಕೆಲಕಾಲ ಅಮೂಲ್ಯ ಸಮಯವನ್ನು ಕಳೆಯುವ ಉದ್ದೇಶದಿಂದ ಹಾಗೂ ದೀರ್ಘಕಾಲದ ವರೆಗೆ ಬಯೋ ಬಬಲ್‌ನಲ್ಲಿರಲು ಹಿಂದೇಟು ಹಾಕಿ ಜೇಸನ್‌ ರಾಯ್ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿದ್ದರು. ಇವರ ಬದಲಿಗೆ ವಿಕೆಟ್‌ ಕೀಪರ್ ಆಗಿಯೂ ತಂಡಕ್ಕೆ ನೆರವಾಗಬಲ್ಲ ರೆಹಮನುಲ್ಲಾ ಗುರ್ಬಾಜ್ (Rahmanullah Gurbaz) ಅವರನ್ನು ಗುಜರಾತ್ ಫ್ರಾಂಚೈಸಿಯು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. 20 ವರ್ಷದ ಸ್ಪೋಟಕ ಅಗ್ರಕ್ರಮಾಂಕದ ಬ್ಯಾಟರ್‌ ರೆಹಮನುಲ್ಲಾ ಗುರ್ಬಾಜ್‌ ಇದುವರೆಗೂ 69 ಟಿ20 ಪಂದ್ಯಗಳನ್ನಾಡಿ 113 ಸಿಕ್ಸರ್ ಸಿಡಿಸಿದ್ದಾರೆ. ಇದಷ್ಟೇ ಅಲ್ಲದೇ ಆಫ್ಘಾನಿಸ್ತಾನ ತಂಡದ ಪರ 9 ಏಕದಿನ ಹಾಗೂ 12 ಟಿ20 ಪಂದ್ಯಗಳನ್ನಾಡಿದ್ದಾರೆ.

ರೆಹಮನುಲ್ಲಾ ಗುರ್ಬಾಜ್‌ ಅವರನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ತನ್ನ ತೆಕ್ಕೆಗೆ ಸೆಳೆದುಕೊಂಡಿರುವ ಬಗ್ಗೆ ಇದುವರೆಗೂ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿಲ್ಲ. ಬಿಸಿಸಿಐ ಗ್ರೀನ್ ಸಿಗ್ನಲ್‌ಗಾಗಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಎದುರು ನೋಡುತ್ತಿದೆ. ಈಗಾಗಲೇ ಗುಜರಾತ್ ಟೈಟಾನ್ಸ್ ತಂಡವನ್ನು ಕೂಡಿಕೊಂಡಿರುವ ಆಫ್ಘಾನಿಸ್ತಾನದ ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರಿಂದ ರೆಹಮನುಲ್ಲಾ ಗುರ್ಬಾಜ್‌ ಅವರ ಬಗ್ಗೆ ಗುಜರಾತ್ ಟೈಟಾನ್ಸ್ ಆಡಳಿತ ಮಂಡಳಿಯು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿದೆ ಎನ್ನಲಾಗಿದೆ. ರೆಹಮನುಲ್ಲಾ ಗುರ್ಬಾಜ್‌ ಕೂಡಾ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ತಾವು ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿರುವುದರ ಬಗ್ಗೆ ಸುಳಿವು ನೀಡಿದ್ದಾರೆ.

IPL 2022: ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್‌ಸಿಬಿ ನಾಯಕನಾಗಲಾರ ಎಂದ ಡೇನಿಯಲ್ ವೆಟ್ಟೋರಿ

ಇದೀಗ ರೆಹಮನುಲ್ಲಾ ಗುರ್ಬಾಜ್ ಅವರ ಸೇರ್ಪಡೆಯು ಗುಜರಾತ್ ಟೈಟಾನ್ಸ್ ತಂಡದ ವಿಕೆಟ್‌ ಕೀಪಿಂಗ್ ಸಮಸ್ಯೆಗೆ ಬಹುತೇಕ ತೆರೆ ಎಳೆದಂತೆ ಆಗಿದೆ. ಐಪಿಎಲ್‌ ಆಟಗಾರರ ಮೆಗಾ ಹರಾಜಿನಲ್ಲಿ ಗುಜರಾತ್ ಫ್ರಾಂಚೈಸಿಯು ಮ್ಯಾಥ್ಯೂ ವೇಡ್‌ ಅವರನ್ನು ಖರೀದಿಸಿತ್ತು. ಅದರೆ ಮ್ಯಾಥ್ಯೂ ವೇಡ್‌ ಐಪಿಎಲ್‌ ಮೊದಲ ವಾರದ ಕೆಲ ಪಂದ್ಯಗಳಿಂದ ವಂಚಿತರಾಗುವ ಸಾಧ್ಯತೆ ಬಹುತೇಕ ದಟ್ಟವಾಗಿದೆ. ಇನ್ನು ವೃದ್ದಿಮಾನ್ ಸಾಹ ಅವರನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ತನ್ನ ತೆಕ್ಕೆಗೆ ಸೆಳೆದುಕೊಂಡಿತಾದರೂ, ಸಾಹ ಅವರ ಟಿ20 ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ.

ರೆಹಮನುಲ್ಲಾ ಗುರ್ಬಾಜ್‌ ಅವರ ಸೇರ್ಪಡೆ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡಕ್ಕೆ ಆನೆ ಬಲ ತಂದಂತೆ ಆಗಿದೆ. ರೆಹಮನುಲ್ಲಾ ಗುರ್ಬಾಜ್‌ ಫ್ರಾಂಚೈಸಿ ಲೀಗ್‌ನಲ್ಲಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಮುಲ್ತಾನ್ ಸುಲ್ತಾನ್ಸ್‌, ಇಸ್ಲಾಮಾಬಾದ್‌ ಯುನೈಟೆಡ್‌ ತಂಡವನ್ನು ಪ್ರತಿನಿಧಿಸಿದ್ದಾರೆ. ಇನ್ನು ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಕ್ಯಾಂಡಿ ಟಸ್ಕರ್ಸ್‌ ಹಾಗೂ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಖುಲ್ನಾ ಟೈಗರ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್‌ 26ರಿಂದ ಮುಂಬೈನಲ್ಲಿ ಆರಂಭವಾಗಲಿದೆ. ಈಗಿರುವ ಎಂಟು ತಂಡಗಳ ಜತೆಗೆ ಹೊಸದಾಗಿ ಲಖನೌ ಸೂಪರ್‌ ಜೈಂಟ್ಸ್‌ ಹಾಗೂ ಗುಜರಾತ್ ಟೈಟಾನ್ಸ್ ಸೇರಿದಂತೆ ಒಟ್ಟು 10 ತಂಡಗಳು ಈ ಬಾರಿ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.