IPL 2022: ಸನ್‌ರೈಸರ್ಸ್‌ ಎದುರು ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ RCB..!

* ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲು ಸಜ್ಜಾದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು

* ಸನ್‌ರೈಸರ್ಸ್ ಹೈದರಾಬಾದ್ ಎದುರು ಗ್ರೀಸ್‌ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ ಆರ್‌ಸಿಬಿ

* Go Green ಅಭಿಯಾನದಡಿ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ ಬೆಂಗಳೂರು ತಂಡ

IPL 2022 Go Green initiative RCB To Sport Green Jersey In Game Against Sunrisers Hyderabad kvn

ಬೆಂಗಳೂರು(ಮೇ.07): ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ತಂಡವು ಅಮೋಘ ಪ್ರದರ್ಶನದ ಮೂಲಕ ಕೇವಲ ಮನರಂಜನೆ ಮಾತ್ರ ನೀಡುತ್ತಿಲ್ಲ, ಇದರ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯುತ್ತಲೇ ಬಂದಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡಾ ಆರ್‌ಸಿಬಿ (RCB) ತಂಡವು ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ದ ಮೇ 08ರಂದು ನಡೆಯಲಿರುವ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಪಡೆಯು ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ.

ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆಯಲಿರುವ ಹೈವೋಲ್ಟೇಜ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 'Go Green' ಅಭಿಯಾನದಡಿಯಲ್ಲಿ ('Go Green' initiative) ಹಸಿರು ಜೆರ್ಸಿ ತೊಟ್ಟು ಮೈದಾನಕ್ಕಿಳಿಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2011ರಿಂದಲೂ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಹಸಿರು ಜೆರ್ಸಿ ತೊಟ್ಟು ಜನರಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದೆ. ಆರ್‌ಸಿಬಿ ತಂಡವು ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿಯುವ ಮೂಲಕ ಮುಂದಿನ ತಲೆಮಾರಿಗೆ ಸ್ವಚ್ಛ ಹಾಗೂ ಹಸಿರಿನಿಂದ ಕೂಡಿದ ಪರಿಸರವನ್ನು ಉಳಿಸಲು ಜಾಗೃತಿ ಮೂಡಿಸುವುದಾಗಿದೆ.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 2011ರಲ್ಲಿ ಮೊದಲ ಬಾರಿಗೆ ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿದಿತ್ತು. ಕೊಚ್ಚಿ ಟಸ್ಕರ್ಸ್‌ ಕೇರಳ ವಿರುದ್ದ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡವು 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು 2020 ಕೊನೆಯ ಬಾರಿಗೆ ಆರ್‌ಸಿಬಿ ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿದಿತ್ತು. ಅದರೆ ಸಾಂಪ್ರದಾಯಿಕ ಚೆನ್ನೈ ಸೂಪರ್ ಕಿಂಗ್ಸ್‌ ಎದುರು 8 ವಿಕೆಟ್‌ಗಳ ಅಂತರದ ಸೋಲು ಕಂಡಿತ್ತು. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಕೋವಿಡ್ ವಾರಿಯರ್ಸ್‌ಗೆ ಗೌರವ ಸೂಚಿಸುವ ಸಲುವಾಗಿ ಆರ್‌ಸಿಬಿ ಬೂದು ಬಣ್ಣದ ಜೆರ್ಸಿಯೊಂದಿಗೆ ಕಣಕ್ಕಿಳಿದಿತ್ತು. 

IPL 2022: ಸಿಎಸ್‌ಕೆ ಬಗ್ಗುಬಡಿದ ಆರ್‌ಸಿಬಿ, ಪಂದ್ಯದ ವೇಳೆ ವೈರಲ್ ಆದ ಟಾಪ್ ಮೀಮ್ಸ್‌ಗಳಿವು..!

ಇನ್ನು ಗ್ರೀನ್‌ ಜೆರ್ಸಿಯು ಆರ್‌ಸಿಬಿ ಪಾಲಿಗೆ ಅಷ್ಟೇನು ಅದೃಷ್ಟದ ಜೆರ್ಸಿ ಎನಿಸಿಲ್ಲ. ಇದುವರೆಗೂ ಆರ್‌ಸಿಬಿ 9 ಬಾರಿ ಗ್ರೀನ್‌ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದು, ಈ ಪೈಕಿ ಕೇವಲ 2 ಬಾರಿ ಮಾತ್ರ ಗೆಲುವಿನ ನಗೆ ಬೀರಿದೆ. ಒಮ್ಮೆ ಕೊಚ್ಚಿ ಟಸ್ಕರ್ಸ್‌ ಎದುರು ಜಯಿಸಿದರೆ, ಮತ್ತೊಮ್ಮೆ 2016ರಲ್ಲಿ ಗುಜರಾತ್ ಲಯನ್ಸ್ ಎದುರು 144 ರನ್‌ಗಳ ಅಂತರದ ಗೆಲುವು ದಾಖಲಿಸಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್‌ ದಾಖಲಿಯ 229 ರನ್‌ಗಳ ಜತೆಯಾಟವಾಡಿದ್ದರು. ವಿರಾಟ್ ಕೊಹ್ಲಿ 109 ರನ್ ಸಿಡಿಸಿದರೆ, ಎಬಿ ಡಿವಿಲಿಯರ್ಸ್‌ 129 ರನ್ ಚಚ್ಚಿದ್ದರು.  

ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 11 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 5 ಸೋಲುಗಳೊಂದಿಗೆ 12 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಕೇನ್ ವಿಲಿಯಮ್ಸನ್‌ ನೇತೃತ್ವದ ಸನ್‌ರೈಸರ್ಸ್‌ ಹೈದರಾಬಾದ್ ತಂಡವು 10 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 5 ಸೋಲು ಸಹಿತ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

Latest Videos
Follow Us:
Download App:
  • android
  • ios