IPL 2022: ಸಿಎಸ್‌ಕೆ ಬಗ್ಗುಬಡಿದ ಆರ್‌ಸಿಬಿ, ಪಂದ್ಯದ ವೇಳೆ ವೈರಲ್ ಆದ ಟಾಪ್ ಮೀಮ್ಸ್‌ಗಳಿವು..!
* ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಗ್ಗುಬಡಿದ ಆರ್‌ಸಿಬಿ
* ಈ ಗೆಲುವಿನೊಂದಿಗೆ ಆರ್‌ಸಿಬಿ ತಂಡದ ಪ್ಲೇ ಆಫ್ ಕನಸು ಜೀವಂತ
* ಸಿಎಸ್‌ಕೆ ಮಣಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ವೈರಲ್
ಪುಣೆ(ಮೇ.05): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ 49ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡಗಳು ಮುಖಾಮುಖಿಯಾಗಿದ್ದವು. ಐಪಿಎಲ್‌ನ ಎರಡು ಸಾಂಪ್ರದಾಯಿಕ ಎದುರಾಳಿಗಳೆಂದೇ ಬಿಂಬಿಸಲ್ಪಟ್ಟಿರುವ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ (Faf du Plessis) ನೇತೃತ್ವದ ಆರ್‌ಸಿಬಿ ತಂಡವು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎದುರು 13 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಕಳೆದ ಪಂದ್ಯದ ಸೋಲಿನ ಲೆಕ್ಕಚುಕ್ತಾ ಮಾಡಿದೆ.
ಫಾಫ್ ಡು ಪ್ಲೆಸಿಸ್(38) ಹಾಗೂ ವಿರಾಟ್ ಕೊಹ್ಲಿ(30) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪವರ್ ಪ್ಲೇನಲ್ಲೇ ಭರ್ಜರಿ ಆರಂಭ ಒದಗಿಸಿಕೊಟ್ಟರು. ಆದರೆ ಮೋಯಿನ್ ಅಲಿ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಇನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು. 10 ಓವರ್ ಬಳಿಕ ಮಹಿಪಾಲ್ ಲೋಮ್ರಾರ್ ಹಾಗೂ ರಜತ್ ಪಾಟೀದಾರ್ ಸಮಯೋಚಿತ ಬ್ಯಾಟಿಂಗ್ ನಡೆಸಿದರು. ಮಹಿಪಾಲ್ ಲೋಮ್ರಾರ್ ಕೇವಲ 27 ಎಸೆತಗಳಲ್ಲಿ 42 ರನ್ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಪಂದ್ಯದ 19ನೇ ಓವರ್‌ನಲ್ಲಿ ಸಿಎಸ್‌ಕೆ ತಂಡದ ಮಿಸ್ಟ್ರಿ ಸ್ಪಿನ್ನರ್ ಮಹೀಶ್ ತೀಕ್ಷಣ ಆರ್‌ಸಿಬಿ ತಂಡದ ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ರನ್ ವೇಗಕ್ಕೆ ಕಡಿವಾಣ ಹಾಕಿದೆ. ಕೊನೆಯಲ್ಲಿ ದಿನೇಶ್ ಕಾರ್ತಿಕ್ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಆರ್‌ಸಿಬಿ ತಂಡವು ಸವಾಲಿನ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾದರು.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನೀಡಿದ್ದ 174 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಋತುರಾಜ್ ಗಾಯಕ್ವಾಡ್ ಹಾಗೂ ಡೆವೊನ್ ಕಾನ್‌ವೇ ಜೋಡಿ 54 ರನ್‌ಗಳ ಜತೆಯಾಟ ನಿಭಾಯಿಸಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಶಾಬಾಜ್ ಅಹಮ್ಮದ್ ಯಶಸ್ವಿಯಾದರು. ಋತುರಾಜ್ ಗಾಯಕ್ವಾಡ್ 28 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ರವೀಂದ್ರ ಜಡೇಜಾ ಹಾಗೂ ಮಹೇಂದ್ರ ಸಿಂಗ್ ಧೋನಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಡೆವೊನ್ ಕಾನ್‌ವೇ(56) ಹಾಗೂ ಮೋಯಿನ್ ಅಲಿ(34) ಆರ್‌ಸಿಬಿ ಎದುರು ಕೊಂಚ ಪ್ರತಿರೋಧ ತೋರಿದರಾದರೂ ಸಿಎಸ್‌ಕೆ ತಂಡವನ್ನು ಸೋಲಿನಿಂದ ಪಾರು ಮಾಡಲು ಯಶಸ್ವಿಯಾಗಲಿಲ್ಲ.
IPL 2022 ಆರ್ ಸಿಬಿ-ಚೆನ್ನೈ ಮ್ಯಾಚ್ ನಡುವೆ ಹುಡುಗಿಯಿಂದಲೇ ಹುಡುಗನಿಗೆ ಪ್ರಪೋಸ್!
ಈ ಗೆಲುವು ಆರ್‌ಸಿಬಿ ಪ್ಲೆ ಆಫ್ ಕನಸನ್ನು ಜೀವಂತವಾಗಿರಿಸಿದರೆ, ಈ ಸೋಲಿನೊಂದಿಗೆ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇ ಆಫ್ ಹಾದಿ ಭಗ್ನಗೊಳಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ಎದುರು ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳು ಹರಿದಾಡಲಾರಂಭಿಸಿವೆ.