* 15ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಇಂದಿನಿಂದ ಆರಂಭ* ಹಲವು ವಿಶೇಷಗಳಿಗೆ ಸಾಕ್ಷಿಯಾಗಲಿದೆ ಈ ಬಾರಿಯ ಐಪಿಎಲ್* 10 ತಂಡಗಳು ಈ ಬಾರಿ ಪ್ರಶಸ್ತಿಗಾಗಿ ಕಾದಾಟ

ಬೆಂಗಳೂರು(ಮಾ.26): ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) 15ನೇ ಸೀಸನ್​ ಶನಿವಾರದಿಂದ ಆರಂಭವಾಗುತ್ತಾ ಇದೆ. ಕೋವಿಡ್​-19ನಿಂದಾಗಿ (COVID 19) 2020ರಲ್ಲಿ ಯುಎಇ, 2021ರಲ್ಲಿ ಅರ್ಧ ಭಾರತ, ಇನ್ನಾರ್ಧ ಯುಎಇನಲ್ಲಿ ನಡೆದಿತ್ತು. ಈಗ ಎರಡು ವರ್ಷದ ನಂತರ ಪೂರ್ಣಪ್ರಮಾಣದಲ್ಲಿ ಭಾರತದಲ್ಲೇ ನಡೆಯುತ್ತಿದೆ. ಕಳೆದ 14 ಸೀಸನ್​​ನಲ್ಲಿ 2009ರಲ್ಲಿ ದಕ್ಷಿಣ ಆಫ್ರಿಕಾ ಮತ್ತು 2020ರಲ್ಲಿ ಯುಎಇನಲ್ಲಿ ಪೂರ್ಣ ಪ್ರಮಾಣದ ಐಪಿಎಲ್ ನಡೆದಿತ್ತು. ಈ ಎರಡು ವರ್ಷ ಬಿಟ್ರೆ ಉಳಿದ 12 ಸೀಸನ್​ಗಳು ಭಾರತದಲ್ಲಿ ನಡೆದಿವೆ. ಮತ್ತೆ ಇಂಡಿಯನ್ ಪ್ರೀಮಿಯರ್ ಲೀಗ್ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದೆ.

ಈ ಸಲ ಎರಡು ರಾಜ್ಯಕ್ಕೆ ಸೀಮಿತವಾದ ಐಪಿಎಲ್​​​:

ಭಾರತದಲ್ಲಿ IPL ನಡೆದಾಗಲೆಲ್ಲಾ 8ರಿಂದ 10 ನಗರಗಳಲ್ಲಿ ಪಂದ್ಯಗಳು ನಡೆಯುತ್ತಿದ್ದವು. ಆದ್ರೆ ಈ ಸಲ ಕೋವಿಡ್​ನಿಂದಾಗಿ ಮಹಾರಾಷ್ಟ್ರ ಮತ್ತು ಗುಜರಾತ್​​ನಲ್ಲಿ ಮಾತ್ರ IPL ಮ್ಯಾಚ್​​ಗಳು ನಡೆಯಲಿವೆ. ಮರಾಠರ ನಾಡಿನಲ್ಲಿ ಲೀಗ್ ಮತ್ತು ಅಹಮದಾಬಾದ್​ನಲ್ಲಿ ಕ್ವಾಲಿಫೈಯರ್​, ಎಲಿಮಿನೇಟರ್ ಮತ್ತು ಫೈನಲ್ ಫೈಟ್​ ಸೇರಿದಂತೆ ಒಟ್ಟು 4 ನಾಕೌಟ್ ಪಂದ್ಯಗಳು ನಡೆಯಲಿವೆ. ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡಿರೋದ್ರಿಂದ ಕಲರ್ ಫುಲ್ ಟೂರ್ನಿ ಮತ್ತಷ್ಟು ಕಲರ್​ ಫುಲ್ ಆಗಿರಲಿದೆ.

10 ತಂಡಗಳು, 5 ಸ್ಟೇಡಿಯಂ, 74 ಪಂದ್ಯಗಳು

ಮಾರ್ಚ್​ 26ರಿಂದ ಅಂದರೆ ಇಂದಿನಿಂದ ಆರಂಭವಾಗೋ 15ನೇ IPL, ಮೇ 29ರಂದು ಕೊನೆಗೊಳ್ಳಲಿದೆ. 62 ದಿನಗಳ ಕಾಲ 74 ಪಂದ್ಯಗಳು ಅಂದರೆ 70 ಲೀಗ್, 4 ನಾಕೌಟ್ ಮ್ಯಾಚ್​​ಗಳು ನಡೆಯಲಿವೆ. ಲೀಗ್ ಪಂದ್ಯಗಳು ಮಹಾರಾಷ್ಟ್ರದ ನಾಲ್ಕು ಸ್ಟೇಡಿಯಂನಲ್ಲಿ ಮತ್ತು ಫೈನಲ್ ಸೇರಿದಂತೆ ನಾಲ್ಕು ನಾಕೌಟ್ ಮ್ಯಾಚ್​ಗಳು ಅಹಮದಾಬಾದ್​ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿವೆ. ಅಲ್ಲಿಗೆ ಅಹಮದಾಬಾದ್​, ಮುಂಬೈ ಮತ್ತು ಪುಣೆ ನಗರಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಈ ಸಲ 10 ತಂಡಗಳು ಐಪಿಎಲ್ ಆಡುತ್ತಿವೆ.

ತವರಿನ ಪಿಚ್​ನಲ್ಲಿ 4 ಪಂದ್ಯ ಆಡಲಿದೆ ಮುಂಬೈ ಇಂಡಿಯನ್ಸ್: 

ತಟಸ್ಥ ಸ್ಥಳದಲ್ಲಿ ಐಪಿಎಲ್ ನಡೆಯೋದ್ರಿಂದ ಯಾವ ತಂಡವೂ ತವರಿನಲ್ಲಿ ಪಂದ್ಯ ಆಡುತ್ತಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಟೂರ್ನಿ ನಡೆಯೋದ್ರಿಂದ ಮುಂಬೈ ಇಂಡಿಯನ್ಸ್​​ಗೆ (Mumbai Indians) ಹೋಮ್ ಗ್ರೌಂಡ್​ ವಾಂಖೆಡೆ ಸ್ಟೇಡಿಯಂನಲ್ಲಿ 4 ಪಂದ್ಯಗಳನ್ನ ಆಡಲು ಅವಕಾಶ ಮಾಡಿಕೊಡಲಾಗಿದೆ. ಇದರ ಲಾಭವನ್ನ ಮುಂಬೈ ಪಡೆಯುವ ಸಾಧ್ಯತೆಯೂ ಇದೆ. ಹಾಗೆ ಮುಂಬೈನ ಸ್ಟೇಡಿಯಂಗಳಲ್ಲಿ ಮತ್ತು ಪುಣೆಯಲ್ಲಿ ಮುಂಬೈ ಇಂಡಿಯನ್ಸ್ ಮ್ಯಾಚ್​​ಗಳನ್ನ ಆಡೋದ್ರಿಂದ ತವರಿನ ಪ್ರೇಕ್ಷಕರ ಬೆಂಬಲವೂ ಸಿಗುತ್ತದೆ. ಇನ್ನು ಗುಜರಾತ್ ಟೈಟಾನ್ಸ್ ತಂಡಕ್ಕೆ ಅಹಮದಾಬಾದ್​ ತವರು. ಆದ್ರೆ ಇದೇ ಮೊದಲ ಸಲ ಐಪಿಎಲ್ ಆಡುತ್ತಿರುವ ಟೈಟಾನ್ಸ್​, ಅಹಮದಾಬಾದ್​ನಲ್ಲಿ ಅಭ್ಯಾಸ ಸಹ ಮಾಡಿಲ್ಲ. ಗುಜರಾತ್ ನಾಕೌಟ್ ಹಂತಕ್ಕೇರಿದ್ರೆ ಮಾತ್ರ ಆ ತಂಡ ಅಹದಾಬಾದ್​ನಲ್ಲಿ ಪಂದ್ಯಗಳನ್ನಾಡಲಿದೆ. ಆಗ ತವರಿನ ಪ್ರೇಕ್ಷಕರ ಬೆಂಬಲ ಸಿಗುತ್ತದೆಯೇ ಹೊರತು, ಆ ಪಿಚ್​ನಲ್ಲಿ ಆಡೋದು ಆ ತಂಡಕ್ಕೂ ಹೊಸದು.

8 ತಂಡಗಳಿಗೆ ಭಾರತೀಯರು. 2 ತಂಡಕ್ಕೆ ವಿದೇಶಿಯರು ಕ್ಯಾಪ್ಟನ್.

ಇದೇ ಮೊದಲ ಸಲ ಅನಿಸುತ್ತೆ. 8 ಮಂದಿ ಭಾರತೀಯ ಆಟಗಾರರು ಐಪಿಎಲ್​​ ಟೀಮ್​​​​ಗಳಿಗೆ ಕ್ಯಾಪ್ಟನ್ ಆಗಿರೋದು. ಇಷ್ಟು ವರ್ಷ ವಿದೇಶಿಯರೇ ಹೆಚ್ಚು ಇರುತ್ತಿದ್ದರು. ಆದ್ರೆ ಈ ಸಲ 10 ತಂಡಗಳ ಪೈಕಿ 8 ತಂಡಗಳಿಗೆ ಭಾರತೀಯ ನಾಯಕರಾಗಿದ್ದಾರೆ. ಸನ್ ರೈಸರ್ಸ್ ಹೈದ್ರಾಬಾದ್​ ಮತ್ತು ಆರ್​ಸಿಬಿ (RCB) ತಂಡಗಳಿಗೆ ಮಾತ್ರ ವಿದೇಶಿ ಆಟಗಾರರು ಕ್ಯಾಪ್ಟನ್​ಗಳಾಗಿದ್ದಾರೆ. ಇನ್ನು ಸಿಎಸ್​ಕೆಯ ರವೀಂದ್ರ ಜಡೇಜಾ(Ravindra Jadeja), ಆರ್​ಸಿಬಿಯ ಫಾಫ್ ಡು ಪ್ಲೆಸಿಸ್, ಗುಜರಾತ್ ಟೈಟಾನ್ಸ್​ನ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಪಂಜಾಬ್ ಕಿಂಗ್ಸ್​ನ (Punjab Kings) ಮಯಾಂಕ್ ಅಗರ್ವಾಲ್ (Mayank Agarwal) ಫಸ್ಟ್ ಟೈಮ್ ಐಪಿಎಲ್​ನಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಉಳಿದ 6 ಮಂದಿ ಈಗಾಗಲೇ ಐಪಿಎಲ್​​ನಲ್ಲಿ ನಾಯಕರಾಗಿ ಅನುಭವ ಹೊಂದಿದ್ದಾರೆ.

ಇಂದಿನಿಂದ ಐಪಿಎಲ್‌ ಹಬ್ಬ, 10 ತಂಡಗಳು ಪ್ರಶಸ್ತಿಗೆ ಪೈಪೋಟಿ..!

ಮುಂಬೈ ದಾಖಲೆ ಸರಿಗಟ್ಟುತ್ತಾ ಚೆನ್ನೈ..?: 

ಹೌದು, 10 ತಂಡಗಳ ಪೈಕಿ ಎರಡು ತಂಡಗಳು ಮೊದಲ ಬಾರಿಗೆ ಐಪಿಎಲ್ ಆಡ್ತಿವೆ. ಆ ಎರಡು ತಂಡಗಳು ಸೇರಿದಂತೆ ಒಟ್ಟು 5 ತಂಡಗಳು​ ಒಮ್ಮೆಯೂ ಐಪಿಎಲ್ ಟ್ರೋಫಿ ಗೆದ್ದಿಲ್ಲ. ಆದ್ರೆ ಉಳಿದ ಐದು ಟೀಮ್ಸ್​ ಮಾಜಿ ಚಾಂಪಿಯನ್ಸ್​. ಮುಂಬೈ ಇಂಡಿಯನ್ಸ್ ದಾಖಲೆಯ ಐದು ಟ್ರೋಫಿ ಗೆದ್ದಿದೆ. 4 ಕಪ್​ ಗೆದ್ದಿರುವ ಸಿಎಸ್​ಕೆ (CSK) ಈ ಸಲ ಗೆದ್ದರೆ ಮುಂಬೈ ದಾಖಲೆ ಸರಿಗಟ್ಟಲಿದೆ.

ಮೊದಲ ಸಲ ಐಪಿಎಲ್ ಮಾದರಿಯಲ್ಲಿ ಬದಲಾವಣೆ..!

ಕಳೆದ 14 ವರ್ಷಗಳಿಂದ ಎಲ್ಲಾ ತಂಡಗಳು ಒಂದೇ ಗ್ರೂಪ್​ನಲ್ಲಿದ್ದು, ತಲಾ ಎರಡೆರಡು ಬಾರಿ ಮುಖಾಮುಖಿಯಾಗುತ್ತಿದ್ದವು. ಆದರೆ ಈ ಸಲ ತಲಾ ಐದು ತಂಡಗಳಿರುವ ಎರಡು ಗ್ರೂಪ್ ಮಾಡಲಾಗಿದೆ. ಒಂದು ತಂಡ ತನ್ನ ಗ್ರೂಪ್​​ನಲ್ಲಿರುವ 4 ತಂಡಗಳ ವಿರುದ್ಧ ಎರೆಡೆರಡು ಬಾರಿ ಮತ್ತು ಇನ್ನೊಂದು ಗ್ರೂಪ್​​ನಲ್ಲಿರುವ ಐದು ತಂಡಗಳಲ್ಲಿ 4 ತಂಡಗಳ ವಿರುದ್ಧ ತಲಾ ಒಂದು ಮತ್ತು ಒಂದು ತಂಡದ ವಿರುದ್ಧ ಎರಡು ಬಾರಿ ಮುಖಾಮುಖಿಯಾಗಲಿದೆ. ಅಲ್ಲಿಗೆ ಲೀಗ್​​ನಲ್ಲಿ ಒಂದು ತಂಡ 14 ಪಂದ್ಯಗಳನ್ನ ಆಡಲಿದೆ.

ಉದ್ಘಾಟನಾ ಸಮಾರಂಭ ಇಲ್ಲ:

ಕೋವಿಡ್​​-19 ಕಾರಣದಿಂದ ಈ ಸಲದ IPL ಉದ್ಘಾಟನಾ ಸಮಾರಂಭ ನಡೆಯುತ್ತಿಲ್ಲ. ಹೀಗಾಗಿ ಇಂದು ಸಮಾರಂಭವಿಲ್ಲದೆ ನೇರ ಪಂದ್ಯದೊಂದಿಗೆ 15ನೇ ಸೀಸನ್ ಕಿಕ್ ಆಫ್ ಆಗಲಿದೆ. ಇನ್ನು ಪಂದ್ಯಗಳು ಮಧ್ಯಾಹ್ನ 3.30 ಮತ್ತು ಸಂಜೆ 7.30ರಿಂದ ಆರಂಭವಾಗಲಿವೆ.