* 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಇಂದಿನಿಂದ ಭರ್ಜರಿ ಚಾಲನೆ* ಉದ್ಘಾಟನಾ ಪಂದ್ಯಕ್ಕೆ ಮುಂಬೈನ ವಾಂಖೆಡೆ ಮೈದಾನ ಆತಿಥ್ಯ* ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಕಣ್ತುಂಬಿಕೊಳ್ಳಲು ಸಜ್ಜಾದ ಐಪಿಎಲ್ ಅಭಿಮಾನಿಗಳು
ಮುಂಬೈ(ಮಾ.26) ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್ ಹಬ್ಬ ಮಾರ್ಚ್ 26ರಿಂದ ಆರಂಭವಾಗಲಿದೆ. 65 ದಿನಗಳ ಕಾಲ ಕ್ರಿಕೆಟ್ ರಸದೌತಣ ಅಭಿಮಾನಿಗಳಿಗೆ ಸಿಗಲಿದೆ. ಈ ಬಾರಿ ಎರಡು ತಂಡಗಳು ಹೊಸದಾಗಿ ಸೇರ್ಪಡೆಯಾಗಿದ್ದು ಒಟ್ಟು 10 ತಂಡಗಳು ಟ್ರೋಫಿಗಾಗಿ ಕಾದಾಡಲಿವೆ. ಕೋವಿಡ್ ಕಾರಣಕ್ಕಾಗಿ ಈ ಬಾರಿ ಐಪಿಎಲ್ ಪಂದ್ಯಗಳು ಕೇವಲ ಮುಂಬೈ ಮತ್ತು ಪುಣೆಯಲ್ಲಿ ಮಾತ್ರ ನಡೆಯಲಿವೆ. ಕೋವಿಡ್ ಸುರಕ್ಷತೆ ಕಾರಣಕ್ಕಾಗಿ ಆಟಗಾರರು ಬಯೋಬಬಲ್‌ನಲ್ಲಿ ಇರಲಿದ್ದಾರೆ.
ಇಂದು ಮೊದಲ ಪಂದ್ಯ : ಚೆನ್ನೈ ಸೂಪರ್ ಕಿಂಗ್ಸ್ ವರ್ಸಸ್ ಕೋಲ್ಕತಾ ನೈಟ್ ರೈಡರ್ಸ್
ಮುಂಬೈನಲ್ಲಿ ಸಂಜೆ 7.30ಕ್ಕೆ
ಚೆನ್ನೈಗೆ ಧೋನಿ ಬದಲು ಜಡೇಜಾ ಸಾರಥ್ಯ: ಚೆನ್ನೈ ಸೂಪರ್‌ಕಿಂಗ್ಸ್ ತಂಡದ ನಾಯಕತ್ವವನ್ನು ಧೋನಿ ತ್ಯಜಿಸಿದ್ದು ಜಡೇಜಾ ತಂಡವನ್ನು ಮುನ್ನಡೆಸಲಿದ್ದಾರೆ.
65 ದಿನ: ಒಟ್ಟಾರೆ 65 ದಿನಗಳ ಕಾಲ ಐಪಿಎಲ್ ಪಂದ್ಯಗಳು ನಡೆಯಲಿವೆ
70 ಲೀಗ್ ಪಂದ್ಯಗಳು: ಈ ಬಾರಿ ಐಪಿಎಲ್‌ನಲ್ಲಿ 70 ಲೀಗ್ ಪಂದ್ಯಗಳು ನಡೆಯಲಿವೆ.
10 ತಂಡಗಳು: ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಗುಜರಾತ್ ಸೂಪರ್ ಜೈಂಟ್ಸ್, ರಾಜಸ್ಥಾನ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಲಖನೌ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್
ಆರ್‌ಸಿಬಿಗೆ 14 ಪಂದ್ಯಗಳು: ಮಾ.27, ಮಾ.30, ಏ.5, ಏ.9, ಏ.12, ಏ.16, ಏ.19, ಏ.23, ಏ.26,ಏ.30, ಮೇ 4, ಮೇ 8, ಮೇ 13, ಮೇ 19
20 ಕೋಟಿ: ಗೆದ್ದ ತಂಡಕ್ಕೆ ಸಿಗುವ ಮೊತ್ತ
13 ಕೋಟಿ: ರನ್ನರ್ ಅಪ್ ತಂಡಕ್ಕೆ ಸಿಗುವ ಮೊತ್ತ
ಧೋನಿಗಿದು ಕೊನೆಯ ಐಪಿಎಲ್?
ಮುಂಬೈ: ದಿಢೀರನೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದ ಎಂ.ಎಸ್.ಧೋನಿ, ಈ ಆವೃತ್ತಿಯ ಬಳಿಕ ಐಪಿಎಲ್ ವೃತ್ತಿಬದುಕಿಗೂ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ಆವೃತ್ತಿಯಲ್ಲೇ ಅವರು ಎಲ್ಲಾ ಪಂದ್ಯಗಳಲ್ಲೂ ಆಡುವುದಿಲ್ಲ ಎಂದು ತಂಡದ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಮುಂಬರುವ ಜುಲೈಗೆ 41 ವರ್ಷ ಪೂರೈಸಲಿರುವ ಧೋನಿ, ಮುಂಬರುವ ಆವೃತ್ತಿಯಲ್ಲಿ ಚೆನ್ನೈ ತಂಡದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿಕೊಳ್ಳಲಿದ್ದಾರೆ. ಸಿಎಸ್‌ಕೆ ತಂಡದೊಂದಿಗಿನ ಅವರ ಒಡನಾಟ ಮುಂದುವರಿಯಲಿದೆ ಎನ್ನಲಾಗಿದೆ.
ಒಂದೇ ರಾಜ್ಯದ 4 ಕ್ರೀಡಾಂಗಣಗಳ ಆತಿಥ್ಯ
ಪ್ರತೀ ಬಾರಿ ಭಾರತದಲ್ಲಿ ಐಪಿಎಲ್ ನಡೆದಾಗ ಟೂರ್ನಿಗೆ ವಿವಿಧ ನಗರಗಳು ಅತಿಥ್ಯ ವಹಿಸುತ್ತವೆ. ಆದರೆ ಈ ಬಾರಿ ಕೋವಿಡ್‌ನಿಂದಾಗಿ ಬಿಸಿಸಿಐ ಕೇವಲ ಮುಂಬೈ ಹಾಗೂ ಪುಣೆಯಲ್ಲಿ ಲೀಗ್ ಹಂತವನ್ನು ಆಯೋಜಿಸುತ್ತಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣ, ಬ್ರಬೋರ್ನ್ ಕ್ರೀಡಾಂಗಣ, ನವ ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣ ಹಾಗೂ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿವೆ.
IPL 2022: ಚೆನ್ನೈ vs ಕೆಕೆಆರ್ ಒಪನಿಂಗ್ ಫೈಟ್..!
ಪ್ರೇಕ್ಷಕರಿಗೆ ಅವಕಾಶ; ಹೆಚ್ಚಿದ ಟೂರ್ನಿಯ ಕಳೆ
ಕೋವಿಡ್‌ನಿಂದಾಗಿ ಕಳೆದೆರಡು ಆವೃತ್ತಿಗಳಲ್ಲಿ ಪಂದ್ಯಗಳನ್ನು ಟಿವಿಯಲ್ಲಿ ನೋಡುತ್ತಿದ್ದ ಕ್ರೀಡಾಭಿಮಾನಿಗಳಿಗೆ ಈ ಬಾರಿ ನೇರವಾಗಿ ಪಂದ್ಯ ವೀಕ್ಷಿಸುವ ಸೌಭಾಗ್ಯ ಒದಗಿಬಂದಿದೆ. ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಟೂರ್ನಿಯಲ್ಲಿ ಈ ಬಾರಿ ಪ್ರೇಕ್ಷಕರಿಗೆ ಅನುಮತಿ ನೀಡಲಾಗಿದ್ದು, ಕ್ರೀಡಾಂಗಣದಲ್ಲಿ ಅಭಿಮಾನಿಗಳ ಕೇಕೆ, ಜೈಕಾರದಿಂದಾಗಿ ಟೂರ್ನಿಯ ಕಳೆ ಹೆಚ್ಚಲಿದೆ. ಮಹಾರಾಷ್ಟ್ರ ಸರ್ಕಾರ ಪಂದ್ಯಗಳಿಗೆ ಈಗಾಗಲೇ ಕ್ರೀಡಾಂಗಣದ ಸಾಮರ್ಥ್ಯದ ಶೇ.25 ಪ್ರೇಕ್ಷಕರಿಗೆ ಅವಕಾಶ ನೀಡಿದ್ದು, ಮುಂದೆ ಹೆಚ್ಚಿನ ಪ್ರೇಕ್ಷಕರಿಗೆ ಕ್ರೀಡಾಂಗಣಗಳಿಗೆ ಅನುಮತಿ ಸಿಗುವ ಸಾಧ್ಯತೆ ಇದೆ.
