Asianet Suvarna News Asianet Suvarna News

IPL 2022: ಲಖನೌ ತಂಡಕ್ಕೆ ವಿಜಯ್ ದಹಿಯಾ ಸಹಾಯಕ ಕೋಚ್

* 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಲಖನೌ ಫ್ರಾಂಚೈಸಿ ಭರದ ಸಿದ್ದತೆ

* ತಂಡದ ಸಹಾಯಕ ಕೋಚ್ ಆಗಿ ವಿಜಯ್ ದಹಿಯಾ ನೇಮಕ

* ಈಗಾಗಲೇ ಆ್ಯಂಡಿ ಫ್ಲವರ್ ಅವರನ್ನು ಹೆಡ್ ಕೋಚ್ ಆಗಿ ನೇಮಿಸಿಕೊಂಡಿರುವ ಲಖನೌ

 

IPL 2022 Former India Cricketer Vijay Dahiya Appointed as Lucknow Franchise Assistant Coach kvn
Author
Bengaluru, First Published Dec 23, 2021, 10:12 AM IST

ನವದೆಹಲಿ(ಡಿ.23): ಐಪಿಎಲ್ ನೂತನ ತಂಡವಾದ ಲಖನೌ ಫ್ರಾಂಚೈಸಿಯು (Lucknow Franchise) ಭಾರತ ಮಾಜಿ ವಿಕೆಟ್ ಕೀಪರ್ ಬ್ಯಾಟರ್‌ ವಿಜಯ್ ದಹಿಯಾ (Vijay Dahiya) ಅವರನ್ನು ಸಹಾಯಕ ಕೋಚ್ ಆಗಿ ನೇಮಕ ಮಾಡಿಕೊಂಡಿದೆ. ಹರ್ಯಾಣ ಮೂಲದ ವಿಜಯ್ ದಹಿಯಾ, ಭಾರತ ಪರ 2 ಟೆಸ್ಟ್ ಹಾಗೂ 19 ಏಕದಿನ ಪಂದ್ಯಗಳನ್ನಾಡಿದ್ದು, ಈ ಮೊದಲು ಎರಡು ಬಾರಿಯ ಐಪಿಎಲ್ (IPL) ಚಾಂಪಿಯನ್‌ ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ತಂಡದ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. 

ಲಖನೌ ಫ್ರಾಂಚೈಸಿಯ ಜತೆ ಕೆಲಸ ಮಾಡುವ ಅವಕಾಶ ನೀಡಿದ್ದಕ್ಕೆ ನನಗೆ ಸಂತಸವಾಗುತ್ತಿದೆ.ಹೊಸ ಸವಾಲನ್ನು ಸ್ವೀಕರಿಸಲು ಎದುರು ನೋಡುತ್ತಿರುವುದಾಗಿ ವಿಜಯ್ ದಹಿಯಾ ತಿಳಿಸಿದ್ದಾರೆ. 48 ವರ್ಷದ ವಿಜಯ್ ದಹಿಯಾ, ಸದ್ಯ ಉತ್ತರ ಪ್ರದೇಶ ಕ್ರಿಕೆಟ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಡಾ. ಆರ್‌.ಪಿ. ಸಂಜೀವ್ ಗೋಯೆಂಕಾ (RP Sanjiv Goenka) ಮಾಲೀಕತ್ವದ ಲಖನೌ ಫ್ರಾಂಚೈಸಿಯು ತನ್ನ ಪ್ರಧಾನ ಕೋಚ್ ಆಗಿ ಜಿಂಬಾಬ್ವೆಯ ದಿಗ್ಗಜ ಕ್ರಿಕೆಟಿಗ ಆ್ಯಂಡಿ ಫ್ಲವರ್ (Andy Flower) ಅವರನ್ನು ನೇಮಕ ಮಾಡಿಕೊಂಡಿದೆ. ಇನ್ನು ಮೆಂಟರ್ ಆಗಿ ಗೌತಮ್ ಗಂಭೀರ್ (Gautam Gambhir) ಅವರನ್ನು ಆಯ್ಕೆ ಮಾಡಿಕೊಂಡಿದೆ. 

ಜನಾಂಗೀಯ ತಾರತಮ್ಯ: ಸ್ಮಿತ್‌, ಬೌಚರ್‌ ವಿರುದ್ಧ ತನಿಖೆ

ಜೋಹಾನ್ಸ್‌ಬರ್ಗ್‌: ಜನಾಂಗೀಯ ತಾರತಮ್ಯದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗರಾದ ಗ್ರೇಮ್‌ ಸ್ಮಿತ್‌ (Graeme Smith) ಹಾಗೂ ಮಾರ್ಕ್ ಬೌಚರ್‌ (Mark Boucher) ವಿರುದ್ಧ ತನಿಖೆ ನಡೆಸುವುದಾಗಿ ಕ್ರಿಕೆಟ್‌ ದಕ್ಷಿಣ ಆಫ್ರಿಕಾ(ಸಿಎಸ್‌ಎ) ತಿಳಿಸಿದೆ. ಇತ್ತೀಚೆಗೆ ಸಾಮಾಜಿಕ ನ್ಯಾಯ ಹಾಗೂ ರಾಷ್ಟ್ರ ನಿರ್ಮಾಣ(ಎಸ್‌ಜೆಎನ್‌) ಆಯೋಗ ಸಲ್ಲಿಸಿದ್ದ ವರದಿಯಲ್ಲಿ ಸ್ಮಿತ್‌, ಬೌಚರ್‌ ಹಾಗೂ ಎಬಿ ಡಿ ವಿಲಿಯರ್ಸ್ (Ab de Villiers) ವಿರುದ್ಧ ಜನಾಂಗೀಯ ತಾರತಮ್ಯದ ಆರೋಪ ಹೊರಿಸಲಾಗಿತ್ತು. 

Ind vs SA Test Series: ಕೋವಿಡ್ ಬಂದರೂ ಭಾರತ-ದಕ್ಷಿಣ ಆಫ್ರಿಕಾ ಸರಣಿ ಮುಂದುವರಿಕೆ..!

ರಾಷ್ಟ್ರೀಯ ತಂಡಕ್ಕೆ ಆಯ್ಕೆ ವೇಳೆ ಅವರು ಕಪ್ಪು ವರ್ಣದ ಆಟಗಾರರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿದ್ದರು ಎಂದು ವರದಿಯಲ್ಲಿ ದೂರಲಾಗಿತ್ತು. ಆದರೆ ವಿಲಿಯ​ರ್ಸ್ ಆರೋಪಗಳನ್ನು ಅಲ್ಲಗೆಳೆದಿದ್ದರು. ಈ ಬಗ್ಗೆ ಸಿಎಸ್‌ಎ ಇಬ್ಬರ ವಿರುದ್ಧ ತನಿಖೆಗೆ ಸೂಚಿಸಿದ್ದು, ವಿಲಿಯ​ರ್ಸ್ ವಿರುದ್ಧ ತನಿಖೆ ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಿಲ್ಲ.

ರಾಷ್ಟ್ರೀಯ ಹಾಕಿ: 3ನೇ ಸ್ಥಾನ ಪಡೆದ ಕರ್ನಾಟಕ

ಪುಣೆ(ಡಿ.23): 11ನೇ ರಾಷ್ಟ್ರೀಯ ಪುರುಷರ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಉತ್ತರ ಪ್ರದೇಶವನ್ನು ಮಣಿಸಿದ ಪಂಜಾಬ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಮಹಾರಾಷ್ಟ್ರ ವಿರುದ್ಧ ಗೆದ್ದ ಕರ್ನಾಟಕ 3ನೇ ಸ್ಥಾನ ಪಡೆಯಿತು. ಮಂಗಳವಾರ ನಡೆದ ಫೈನಲ್‌ನಲ್ಲಿ ಪಂಜಾಬ್‌, ಉ.ಪ್ರದೇಶ ವಿರುದ್ಧ ಪೆನಾಲ್ಟಿಶೂಟೌಟ್‌ನಲ್ಲಿ 2-1 ಗೋಲುಗಳಿಂದ ಗೆಲುವು ಸಾಧಿಸಿತು.

ಇನ್ನು, 3ನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ರಾಜ್ಯ ತಂಡ ಮಹಾರಾಷ್ಟ್ರ ವಿರುದ್ಧ 5-2 ಗೋಲುಗಳಿಂದ ಗೆಲುವು ಸಾಧಿಸಿತು. ರಾಜ್ಯದ ಪರ ನಾಯಕ ರಾಹೀಲ್‌, ಯತೀಶ್‌, ಪವನ್‌, ಸೋಮಣ್ಣ ಹಾಗೂ ಲಿಖಿತ್‌ ತಲಾ 1 ಗೋಲು ಹೊಡೆದರೆ, ತಲಬ್‌ ಶಾ ಮಹಾರಾಷ್ಟ್ರ ಪರ 2 ಗೋಲು ಬಾರಿಸಿದರು.

ಯುಎಸ್‌ ಓಪನ್‌ ಸ್ಕ್ವಾಶ್‌: ಭಾರತದ ಅನಾಹತ್‌ಗೆ ಪ್ರಶಸ್ತಿ

ನವದೆಹಲಿ: ಪ್ರತಿಷ್ಠಿತ ಜೂನಿಯರ್‌ ಯುಎಸ್‌ ಓಪನ್‌ ಸ್ಕ್ವಾಶ್ ಟೂರ್ನಿಯಲ್ಲಿ ಭಾರತದ ಯುವ ಸ್ಕ್ವಾಶ್ ಪಟು, ಅನಾಹತ್‌ ಸಿಂಗ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಅಮೆರಿಕಾದ ಫಿಲಡೆಲ್ಫಿಯಾ ಎಂಬಲ್ಲಿ ಬುಧವಾರ ನಡೆದ ಅಂಡರ್‌-15 ವಿಭಾಗದ ಫೈನಲ್‌ನಲ್ಲಿ ದೆಹಲಿಯ 13 ವರ್ಷದ ಅನಾಹತ್‌, ಈಜಿಪ್ಟ್‌ನ ಜೈದಾ ಮರೀ ವಿರುದ್ಧ 11-9, 11-5, 8-11, 11-5 ಅಂತರದಲ್ಲಿ ಗೆಲುವು ಸಾಧಿಸಿದರು. 

ಸೆಮಿಫೈನಲ್‌ನಲ್ಲಿ ಅವರು ಯುಎಸ್‌ ಜೂನಿಯರ್‌ ರಾಷ್ಟ್ರೀಯ ಚಾಂಪಿಯನ್‌ ದಿಕ್ಸೋನ್‌ ಹಿಲ್‌ ವಿರುದ್ಧ ಗೆದ್ದಿದ್ದರು. ಟೂರ್ನಿಯಲ್ಲಿ 41 ದೇಶಗಳ ಸುಮಾರು 850ಕ್ಕೂ ಹೆಚ್ಚಿನ ಸ್ಪರ್ಧಿಗಳ ಭಾಗವಹಿಸಿದ್ದರು.
 

Follow Us:
Download App:
  • android
  • ios