* ಭರ್ಜರಿಯಾಗಿ ಸಾಗುತ್ತಿದೆ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ * ಈ ಐಪಿಎಲ್‌ ಲೀಗ್‌​ನಲ್ಲಿ ಫ್ರೆಂಡ್ಸ್, ದುಷ್ಮನ್​ಗಳಾಗಿದ್ದಾರೆ* IPL ಸ್ನೇಹ ಬೆಸುಗೆ ಮೂಡಿಸೋ ಲೀಗ್ ಆಗಿದೆ 

ಮುಂಬೈ(ಮಾ.31): IPL ವಿಶ್ವದ ಅತ್ಯಂತ ಶ್ರೀಮಂತ ಟಿ20 ಕ್ರಿಕೆಟ್‌ ಲೀಗ್ ಆಗಿದೆ. ಈ ಐಪಿಎಲ್‌ ಲೀಗ್‌​ನಲ್ಲಿ ಫ್ರೆಂಡ್ಸ್, ದುಷ್ಮನ್​ಗಳಾಗಿದ್ದಾರೆ. ದುಷ್ಮನ್ಸ್,​ ಫ್ರೆಂಡ್ಸ್ ಆಗಿದ್ದಾರೆ. ಈ ಕಲರ್ ಫುಲ್ ಟೂರ್ನಿಯಲ್ಲಿ ಎಲ್ಲವೂ ಸಾಧ್ಯ. ಇಂಟರ್​ ನ್ಯಾಷನಲ್ ಮತ್ತು ಡೊಮೆಸ್ಟಿಕ್​ ಕ್ರಿಕೆಟ್ ಟೂರ್ನಿ ವೇಳೆ ಕಿತ್ತಾಡಿಕೊಂಡಿದ್ದ ಆಟಗಾರರು, IPL ಮೂಲಕ ಫ್ರೆಂಡ್ಸ್​ ಆಗಿದ್ದಾರೆ. IPL ಸ್ನೇಹ ಬೆಸುಗೆ ಮೂಡಿಸೋ ಲೀಗ್ ಆಗಿದೆ. ಹಳೆ ದ್ವೇಷವನ್ನ ಮರೆತು IPL​ನಲ್ಲಿ ಒಂದಾಗ್ತಾರೆ. ಇದೇ IPLನಲ್ಲಿ ಬೇರೆ ಬೇರೆ ತಂಡದ ಪರ ಆಡುವಾಗ ಕಿತ್ತಾಡಿಕೊಂಡಿದ್ದ ಆಟಗಾರರು, ಒಂದೇ ಫ್ರಾಂಚೈಸಿಗಳ ಪರ ಆಡಿ ದೋಸ್ತಿಗಳಾಗಿದ್ದಾರೆ.

ಕಳೆದ ವರ್ಷ ಕೃನಾಲ್-ದೀಪಕ್ ಕಿತ್ತಾಟ. ಈ ಐಪಿಎಲ್‌ನಲ್ಲಿ ಜೊತೆಯಾಟ:

ಕಳೆದ ವರ್ಷದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ವೇಳೆ ಬರೋಡ ಪರ ಆಡುವಾಗ ಕೃನಾಲ್ ಪಾಂಡ್ಯ (Krunal Pandya) ಮತ್ತು ದೀಪಕ್ ಹೂಡ (Deepak Hooda) ಕಿತ್ತಾಡಿಕೊಂಡಿದ್ದರು. ಅದು ಯಾವ ಮಟ್ಟಕ್ಕೆ ಅಂದ್ರೆ ಕೃನಾಲ್ ವಿರುದ್ಧ ಸಾಲುಸಾಲು ಆರೋಪ ಮಾಡಿ ಬರೋಡ ಕ್ರಿಕೆಟ್ ಸಂಸ್ಥೆಗೆ ಮೇಲ್ ಮಾಡಿದ್ದ ದೀಪಕ್, ಬರೋಡ ತಂಡವನ್ನೂ ತೊರೆದಿದ್ದರು. ಆದರೆ ಈ ಸಲದ ಐಪಿಎಲ್ ಪ್ಲೇಯರ್ಸ್ ಬಿಡ್​ನಲ್ಲಿ ಈ ಇಬ್ಬರು ಆಟಗಾರರನ್ನ ಲಕ್ನೋ ಸೂಪರ್ ಜೈಂಟ್ಸ್ ಖರೀದಿಸಿತ್ತು.

ದುಷ್ಮನ್​ಗಳಿಬ್ಬರು ಲಖನೌ ಟೀಂ​ನಲ್ಲಿ ಹೇಗೆ ಆಡ್ತಾರೆ ಅನ್ನೋ ಕುತೂಹಲವಿತ್ತು. ಆದರೆ ಹಳೆ ದ್ವೇಷವನ್ನೆಲ್ಲಾ ಮರೆತು ಈ ಇಬ್ಬರು ಪ್ಲೇಯರ್ಸ್ ಫ್ರೆಂಡ್ಸ್ ಆಗಿದ್ದಾರೆ. ಅದು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಜಗಜ್ಜಾಹಿರವಾಯ್ತು. ದೀಪಕ್ ಹೂಡ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಡಗೌಟ್​ನಲ್ಲಿ ಕೂತಿದ್ದ ಕೃನಾಲ್, ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದರು. ದೀಪಕ್ ಔಟಾಗಿ ವಾಪಾಸ್ ಬರುವಾಗ ಬ್ಯಾಟಿಂಗ್ ಮಾಡಲು ಹೋಗ್ತಿದ್ದ ಕೃನಾಲ್, ಕೈ ಕುಲುಕಿದರು. ಗುಜರಾತ್ ಬ್ಯಾಟ್ಸ್​ಮನ್ ಮ್ಯಾಥ್ಯೂ ವೇಡ್ ಕ್ಯಾಚನ್ನು ಹೂಡ ಹಿಡಿದರು. ಆಗ ಕೃನಾಲ್ ಹೋಗಿ ಹೂಡ​ನನ್ನ ತಪ್ಪಿಕೊಂಡು ಸಂಭ್ರಮಿಸಿದರು. ಈ ಮೂಲಕ ಡೊಮೆಸ್ಟಿಕ್ ದುಷ್ಮನ್​ಗಳು ಐಪಿಎಲ್​ನಲ್ಲಿ ದೋಸ್ತಿಗಳಾದ್ರು.

ಮಂಕಡ್ ರನೌಟ್​ ವಿಷಯವಾಗಿ ಅಶ್ವಿನ್​-ಬಟ್ಲರ್ ಜಗಳ: ರಾಯಲ್ಸ್​ನಲ್ಲಿ ದೋಸ್ತಿಗಳಾದ ದುಷ್ಮನ್ಸ್: 

ದೀಪಕ್ ಹೂಡಾ ​- ಕೃನಾಲ್ ಪಾಂಡ್ಯ ಮೈದಾನದಲ್ಲಿ ಕಿತ್ತಾಡಿಕೊಂಡು ಮೈದಾನದಲ್ಲಿ ಒಂದಾದ್ರೆ ರವಿಚಂದ್ರನ್ ಅಶ್ವಿನ್ (Ravichandran Ashwin) ಮತ್ತು ಜೋಸ್ ಬಟ್ಲರ್ (Jos Buttler) ಮೈದಾನದಲ್ಲಿ ಕಿತ್ತಾಡಿಕೊಂಡು ಡಕೌಟ್​ನಲ್ಲಿ ಒಂದಾಗಿದ್ದಾರೆ. ಹೌದು ಮೂರು ವರ್ಷದ ಹಿಂದೆ ಇದೇ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುವಾಗ ಬಟ್ಲರ್ ಅವರನ್ನ ಮಂಕಡ್ ರನೌಟ್ ಮಾಡಿದ್ದರು ಅಶ್ವಿನ್. ಅದು ದೊಡ್ಡ ವಿವಾದವೇ ಆಗಿತ್ತು. ಪಂದ್ಯ ಮುಗಿದ ನಂತರ ಒಬ್ಬರಿಗೊಬ್ಬರು ಹ್ಯಾಂಡ್ ಶೇಕ್ ಸಹ ಮಾಡಿರಲಿಲ್ಲ.

ಜೀವ ಬಾಯಿಗೆ ಬಂದಿತ್ತು.! RCB vs KKR ಪಂದ್ಯದಲ್ಲಿ ಟ್ರೆಂಡ್ ಆದ ಟಾಪ್ 10 ಮೀಮ್ಸ್‌ಗಳಿವು..!

ಆದರೆ ಈ ಐಪಿಎಲ್​ನಲ್ಲಿ ಅಶ್ವಿನ್ ಸಹ ರಾಯಲ್ಸ್ ಪಡೆ ಸೇರಿಕೊಂಡಿದ್ದಾರೆ. ಹಾಗಾಗಿ ಈಗ ಬಟ್ಲರ್​-ಅಶ್ವಿನ್ ಟೀಂಮೇಟ್ಸ್​. ಅಲ್ಲಿಗೆ ದುಷ್ಮನ್​ಗಳು ದೋಸ್ತಿಗಳಾಗದೆ ವಿಧಿಯಿಲ್ಲ. ಐಪಿಎಲ್ ಆರಂಭಕ್ಕೂ ಮುನ್ನವೇ ಈ ಇಬ್ಬರು ಡ್ರೆಸ್ಸಿಂಗ್ ರೂಮ್ ಮತ್ತು ಡಗೌಟ್​​ನಲ್ಲೇ ಫ್ರೆಂಡ್ಸ್​ ಆಗಿ ಬಿಟ್ಟಿದ್ದರು. ಜೊತೆಯಲ್ಲಿ ಕೂತು ಗಂಟೆಗಟ್ಟಲೆ ಹರಟೆ ಹೊಡೆದಿದ್ದು ಉಂಟು. ಅಲ್ಲಿಗೆ ದ್ವೇಷ ಮರೆತು ದೋಸ್ತಿಗೆ ಜೈ ಅಂದಿದ್ದಾರೆ.

ದುಷ್ಮನ್​ಗಳೆಲ್ಲಾ ಐಪಿಎಲ್​​ನಲ್ಲಿ ಫ್ರೆಂಡ್ಸ್:

ಈ ಇಬ್ಬರು ಆಟಗಾರರು ಮಾತ್ರವಲ್ಲ, ಇನ್ನೂ ಅನೇಕ ಆಟಗಾರರು ದುಷ್ಮನ್​ಗಳಾಗಿದ್ದವರು ಐಪಿಎಲ್ ಮೂಲಕ ಫ್ರೆಂಡ್ಸ್ ಆಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಮಂಕಿಗೇಟ್ ಪ್ರಕರಣ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಹರ್ಭಜನ್ ಸಿಂಗ್ ಮತ್ತು ಆಂಡ್ರ್ಯೂ ಸೈಮಂಡ್ಸ್ ದುಷ್ಮನ್​ಗಳಾಗಿದ್ದವರು, 2011ರಲ್ಲಿ ಮುಂಬೈ ಇಂಡಿಯನ್ಸ್ ಪರ ಜೊತೆಯಾಗಿ ಆಡೋ ಮೂಲಕ ದೋಸ್ತಿಗಳಾದ್ರು. ಹರ್ಭಜನ್​-ರಿಕಿ ಪಾಂಟಿಂಗ್ ಟೆಸ್ಟ್ ಪಂದ್ಯವೊಂದಲ್ಲಿ ಕಿತ್ತಾಡಿಕೊಂಡು, 2013ರಲ್ಲಿ ಮುಂಬೈ ಇಂಡಿಯನ್ಸ್​ನಲ್ಲಿ ಫ್ರೆಂಡ್ಸ್ ಆದ್ರು. ಡೇವಿಡ್ ವಾರ್ನರ್​ ಹಾಗೂ ಜಾನಿ ಬೇರ್​​ಸ್ಟೋವ್ ಆ್ಯಷಸ್ ಟೆಸ್ಟ್ ಸರಣಿ ವೇಳೆ ಜಗಳವಾಡಿದ್ದರು. ಆದರೆ ಸನ್‌ರೈಸರ್ಸ್ ಹೈದ್ರಾಬಾದ್​ ಪರ 2019ರಲ್ಲಿ 185 ರನ್​ಗಳ ಜೊತೆಯಾಟವಾಡಿ ದಾಖಲೆ ಬರೆದಿದ್ದರು. ಹಾಗಾಗಿಯೇ IPL ಸ್ನೇಹತ್ವ ಬೆಸೆಯುವ ವೇದಿಕೆಯಾಗಿರೋದು.