IPL 2022 ಮಿಸ್ಟರ್ 360 ಎಬಿಡಿ ನೆನಪಿಸಿದ 22ರ ಹುಡುಗ ಆಯುಷ್ ಬದೋನಿ..!
* 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಬ್ಬರಿಸಿದ ಆಯುಷ್ ಬದೋನಿ
* ಲಖನೌ ಸೂಪರ್‌ಜೈಂಟ್ಸ್ ಪರ ಮೊದಲ ಪಂದ್ಯದಲ್ಲೇ ಅರ್ಧಶತಕ ಚಚ್ಚಿದ ಮರಿ ಎಬಿಡಿ
* ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಎಲ್ಲರ ಚಿತ್ತ ಬದೋನಿ ಮೇಲೆ
ಮುಂಬೈ(ಮಾ.31): 15ನೇ ಐಪಿಎಲ್ (IPL 2022) ಪಂದ್ಯಾವಳಿ ಆರಂಭದಿಂದಲೇ ಭರ್ಜರಿ ಮನರಂಜನೆ ಉಣಬಡಿಸ್ತಿದೆ. ಇನ್ನೊಂದೆಡೆ ಯಂಗ್ ಕ್ರಿಕೆಟರ್ಸ್ ಅಸಲಿ ಟ್ಯಾಲೆಂಟ್ ಕೂಡ ಅನಾವರಣಗೊಳ್ತಿದೆ. ಹೊಸ ತಂಡವಾದ ಲಖನೌ ಸೂಪರ್ ಜೈಂಟ್ಸ್ನಲ್ಲಿ ಯುವ ಕ್ರಿಕೆಟಿಗ ಆಯುಷ್ ಬದೋನಿ (Ayush Badoni) ಪಾದಾರ್ಪಣೆ ಪಂದ್ಯದಲ್ಲಿ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಡೆಬ್ಯು ಪಂದ್ಯದಲ್ಲಿ ತಾನೇನು, ತನ್ನ ತಾಕತ್ತೇನು ಅನ್ನೋದನ್ನ ಪ್ರೂವ್ ಮಾಡೋದ್ರ ಜೊತೆ ರಾತ್ರೋ ರಾತ್ರಿ ಕ್ರಿಕೆಟ್ ಪ್ರೇಮಿಗಳ ಹೃದಯಕ್ಕೆ ಲಗ್ಗೆಯಿಟ್ಟು, ಹೀರೋ ಆಗಿದ್ದಾನೆ.
ಐಪಿಎಲ್ ಒಂದು ಸ್ಫರ್ಧಾತ್ಮಕ ಮತ್ತು ಜನಪ್ರಿಯ ಟಿ20 ಲೀಗ್. ಇಲ್ಲಿ ಸಕ್ಸಸ್ ಅನ್ನೋದು ಕಬ್ಬಿಣದ ಕಡಲೆ. ಆದ್ರೆ ಅದ್ಭುತ ಟ್ಯಾಲೆಂಟ್ ಇದ್ರೆ ಎಂತಹ ಇನ್ನಿಂಗ್ಸ್ ಬೇಕಾದ್ರು ಕಟ್ಟಬಹುದು ಅನ್ನೋದನ್ನ 22ರ ಚಿಗುರು ಮೀಸೆಯ ಹುಡುಗ ತೋರಿಸಿದ್ದಾನೆ. ಲಖನೌ ಸೂಪರ್ ಜೈಂಟ್ಸ್ (Lucknow Super Giants) ತಂಡವು 29 ರನ್ಗೆ 4 ವಿಕೆಟ್ ಪತನವಾದಾಗ್ಲು ಎದೆಗುಂದದೇ ದಿಟ್ಟ ಇನ್ನಿಂಗ್ಸ್ ಕಟ್ಟಿದ ಡೆಲ್ಲಿ ಬಾಯ್, 41 ಎಸೆತಗಳಲ್ಲಿ ಸ್ಪೋಟಕ 51 ರನ್ ಗಳಿಸಿ ಮಿಂಚಿದ್ರು. ಇವರ ಇನ್ನಿಂಗ್ಸ್ ನ ಪ್ರತಿಯೊಂದು ಹೊಡೆತ ನೋಡುಗರ ಕಣ್ಣು ಕಟ್ಟಿತ್ತು.
ಫಸ್ಟ್ ಮ್ಯಾಚ್ನಲ್ಲೇ ಜೂನಿಯರ್ ಎಬಿಡಿ ಬಿರುದು:
ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ (AB de Villiers) ಇಲ್ಲದ ಮೊದಲ ಐಪಿಎಲ್ ಹಲವರಿಗೆ ಬೇಸರ ತರಿಸಿತ್ತು. ಆದ್ರೆ ಬದೋನಿ ರೂಪದಲ್ಲಿ ಸ್ಫೋಟಕ ಎಬಿಡಿ ಮತ್ತೆ ಎಂಟ್ರಿಕೊಟ್ಟಿದ್ದಾನೆ. ಹೌದು, ಬದೋನಿ ಎಬಿಡಿ ಶೈಲಿಯಲ್ಲೇ ಅಂಗಳದ ಎಲ್ಲಾ ದಿಕ್ಕಿಗೂ ಚೆಂಡು ಮುಟ್ಟಿಸಬಲ್ಲ ಕೆಪಾಸಿಟಿ ಹೊಂದಿದ್ದಾರೆ. ಅದ್ರಲ್ಲೂ ಹಾರ್ದಿಕ್ ಪಾಂಡ್ಯ ಓವರ್ನಲ್ಲಿ ಬಾರಿಸಿದ ಓವರ್ ಮಿಡ್ ವಿಕೆಟ್ ಸಿಕ್ಸ್ ಅಂತೂ ಎಬಿಡಿಯನ್ನ ನೆನಪಿಸಿ ಬಿಡ್ತು.
ಲಖನೌಗೆ ಸಿಕ್ಕಿದ್ದಾನಂತೆ ಬೇಬಿ ಎಬಿಡಿ:
ಇನ್ನು ಬದೋನಿ ಡೆಬ್ಯು ಪಂದ್ಯವೆನ್ನದೇ ಈ ರೀತಿ ಡೇರಿಂಗ್ ಬ್ಯಾಟಿಂಗ್ ಮಾಡಿದ್ರೆ ಯಾರಿಗೆ ತಾನೇ ಇಷ್ಟ ಆಗೋಲ್ಲ ಹೇಳಿ. ಒತ್ತಡದಲ್ಲೂ ಸೂಪರ್ ಇನ್ನಿಂಗ್ಸ್ ಕಟ್ಟಿದ ಬದೋನಿ ಆಟಕ್ಕೆ ಕ್ಯಾಪ್ಟನ್ ರಾಹುಲ್ ಕ್ಲೀನ್ ಬೋಲ್ಡ್ ಆಗಿದ್ದು, ನಮಗೆ ಬೇಬಿ ಎಬಿಡಿ ಸಿಕ್ಕಿದ್ದಾನೆ ಎಂದು ಹೇಳಿದ್ದಾರೆ. ಮೊದಲ ಪಂದ್ಯದಲ್ಲೇ ಭರವಸೆ ಮೂಡಿಸಿರೋ ಬದೋನಿ ಬ್ಯಾಟಿಂಗ್ನಿಂದ ಇಂತಹ ಮತ್ತಷ್ಟು ಇನ್ನಿಂಗ್ಸ್ ಮೂಡಿಬಂದು ಅಭಿಮಾನಿಗಳನ್ನ ರಂಜಿಸುವಂತಾಗಲಿ.
ಚೆನ್ನೈ ಸೂಪರ್ ಕಿಂಗ್ಸ್ ಎದುರು ಅಬ್ಬರಿಸುತ್ತಾರಾ ಮರಿ ಎಬಿಡಿ..?
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ತನ್ನ ಪಾಲಿನ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಮುಂಬೈನ ಬ್ರೆಬೋರ್ನ್ ಮೈದಾನ ಸಾಕ್ಷಿಯಾಗಲಿದೆ. ಈಗಾಗಲೇ ಉಭಯ ತಂಡಗಳು ಟೂರ್ನಿಯ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದು, ಇದೀಗ ಗೆಲುವಿನ ಖಾತೆ ತೆರೆಯಲು ಹಾತೊರೆಯುತ್ತಿವೆ. ಹೀಗಿರುವಾಗಲೇ ಕ್ರಿಕೆಟ್ ಅಭಿಮಾನಿಗಳ ಚಿತ್ತ ಆಯುಷ್ ಬದೋನಿ ಅವರ ಮೇಲೆ ನೆಟ್ಟಿದೆ.
ಜೀವ ಬಾಯಿಗೆ ಬಂದಿತ್ತು.! RCB vs KKR ಪಂದ್ಯದಲ್ಲಿ ಟ್ರೆಂಡ್ ಆದ ಟಾಪ್ 10 ಮೀಮ್ಸ್‌ಗಳಿವು..!
ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯದಲ್ಲಿ ಆರಂಭದಲ್ಲೇ ಲಖನೌ ತಂಡವು 4 ವಿಕೆಟ್ ಕಳೆದುಕೊಂಡಿದ್ದರೂ ಸಹಾ, ನೀವು ಹೇಗೆ ಅಷ್ಟು ನಿರ್ಭೀತಿಯಿಂದ ಬ್ಯಾಟ್ ಬೀಸಿದಿರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಆಯುಷ್ ಬದೋನಿ, ಪಂದ್ಯದ ಪರಿಸ್ಥಿತಿಯ ಬಗ್ಗೆ ಯೋಚಿಸಲು ತಂಡದಲ್ಲಿ ಸಾಕಷ್ಟು ಹಿರಿಯ ಆಟಗಾರರಿದ್ದರು, ಹೀಗಾಗಿ ನಾನು ಯಾವುದೇ ಒತ್ತಡವಿಲ್ಲದೇ ಬ್ಯಾಟ್ ಬೀಸಿದೆ ಎಂದು ಪಂದ್ಯ ಮುಕ್ತಾಯದ ಬಳಿಕ ಡೆಲ್ಲಿ ಮೂಲದ ಆಟಗಾರ ಹೇಳಿದ್ದಾರೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲೂ ಸ್ಪೋಟಕ ಬ್ಯಾಟಿಂಗ್ ನಡೆಸುವ ಎಚ್ಚರಿಕೆಯನ್ನು ಆಯುಷ್ ಬದೋನಿ ನೀಡಿದ್ದಾರೆ.