ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯ ಐಪಿಎಲ್ 2022 ಲೀಗ್ ಟೂರ್ನಿಯ ಎರಡನೇ ಪಂದ್ಯ ಡೆಲ್ಲಿ ತಂಡಕ್ಕೆ ರೋಚಕ 4 ವಿಕೆಟ್ ಗೆಲುವು
ಮುಂಬೈ(ಮಾ.27): ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳನ್ನು ಸೋಲುವ ಮುಂಬೈ ಇಂಡಿಯನ್ಸ್ ಸಂಪ್ರದಾಯ ಈ ಬಾರಿಯೂ ಮುಂದುವರಿದಿದೆ. 178 ರನ್ ಟಾರ್ಗೆಟ್ ನೀಡಿ ಗೆಲುವಿನ ನಿರೀಕ್ಷೆಯಲ್ಲಿದ್ದ ಮುಂಬೈ ತಂಡಕ್ಕೆ ಲಲಿತ್ ಯಾದವ್ ಹಾಗೂ ಅಕ್ಸರ್ ಪಟೇಲ್ ಶಾಕ್ ನೀಡಿದ್ದಾರೆ. ಅಂತಿಮ ಹಂತದಲ್ಲಿ ದಿಟ್ಟ ಹೋರಾಟ ನೀಡಿ ಡೆಲ್ಲಿ ತಂಡಕ್ಕೆ 4 ವಿಕೆಟ್ ಗೆಲುವು ತಂದುಕೊಟ್ಟಿದ್ದಾರೆ. 4 ವಿಕೆಟ್ ರೋಚಕ ಗೆಲುವಿನ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
178 ರನ್ ಟಾರ್ಗೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಪೃಥ್ವಿ ಶಾ ಹಾಗೂ ಟಿಮ್ ಸೈಫರ್ಟ್ ಜೊತೆಯಾಟ 30 ರನ್‌ಗಳಿಗೆ ಅಂತ್ಯವಾಯಿತು. 14 ಎಸೆತದಲ್ಲಿ 21 ರನ್ ಸಿಡಿಸಿದ ಸೈಫರ್ಟ್, ಮುರುಗನ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ಮೊದಲ ವಿಕೆಟ್ ಪತನದ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ದಿಢೀರ್ ಎರಡು ವಿಕೆಟ್ ಕಳೆದುಕೊಂಡಿತು.
ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ ಪಂಜಾಬ್, ಡುಪ್ಲೆಸಿಸ್ ತಂಡದಲ್ಲಿ ಯಾರಿಗೆ ಸ್ಥಾನ?
ಮನ್ದೀಪ್ ಸಿಂಗ್ ಹಾಗೂ ನಾಯಕ ರಿಷಭ್ ಪಂತ್ ಅಬ್ಬರಿಸಿದೆ ವಿಕೆಟ್ ಕೈಚೆಲ್ಲಿದರು. ಇದು ಡೆಲ್ಲಿ ತಂಡಕ್ಕೆ ತೀವ್ರ ಹಿನ್ನಡೆ ತಂದಿತು. ಮನ್ದೀಪ್ ಸಿಂಗ್ ಶೂನ್ಯ ಸುತ್ತಿದರೆ, ಪಂತ್ 1 ರನ್ ಸಿಡಿಸಿ ಔಟಾದರು. 32 ರನ್‌ಗೆ ಡೆಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಪೃಥ್ವಿ ಶಾ ದಿಟ್ಟ ಹೋರಾಟ ನೀಡಿದರು. ಆದರೆ 24 ಎಸೆತದಲ್ಲಿ 38 ರನ್ ಸಿಡಿಸಿದ ಪೃಥ್ವಿ ಶಾ, ಬಸಿಲ್ ಥಂಪಿಗೆ ವಿಕೆಟ್ ಒಪ್ಪಿಸಿದರು. ದಿಢೀರ್ ವಿಕೆಟ್ ಪತನದಿಂದ ಲಲಿತ್ ಯಾದವ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ರೋವ್ಮನ್ ಪೊಲೆಲ್ ಡಕೌಟ್ ಆಗುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಆತಂಕ ಮತ್ತಷ್ಟು ಹೆಚ್ಚಿಸಿದರು.
ಶಾರ್ದೂಳ್ ಠಾಕೂರ್ ಹಾಗೂ ಲಲಿತ್ ಯಾದವ್ ಹೋರಾಟದಿಂದ ಡೆಲ್ಲಿ ಕ್ಯಾಪಿಟಲ್ಸ್ ಚೇತರಿಸಿಕೊಂಡಿತು.ಶಾರ್ದೂಲ್ ಠಾಕೂರ್ 11 ಎಸೆತದಲ್ಲಿ 22 ರನ್ ಸಿಡಿಸಿ ಔಟಾದರು. 104 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಡೆಲ್ಲಿ ಗೆಲುವಿಗೆ 40 ಎಸೆತದಲ್ಲಿ 74 ರನ್‌ಗಳ ಅವಶ್ಯಕತೆ ಇತ್ತು.
ಕೀಪಿಂಗ್ ವೇಳೆ ಹೆಲ್ಮೆಟ್ ಧರಿಸಿ ಎಂದು ಶೆಲ್ಡನ್ ಜಾಕ್ಸನ್‌ಗೆ ಯುವಿ ಸಲಹೆ ನೀಡಿದ್ದೇಕೆ..?
ಅಕ್ಸರ್ ಪಟೇಲ್ ಜೊತೆ ಸೇರಿದ ಲಲಿತ್ ಯಾದವ್ ದಿಟ್ಟ ಹೋರಾಟ ನೀಡಿದರು. ಅಂತಿಮ ಹಂತದಲ್ಲಿನ ಡೆಲ್ಲಿ ಹೋರಾಟ ಮುಂಬೈ ತಂಡಕ್ಕೆ ತಲೆನೋವಾಗಿ ಪರಿಣಮಿಸಿತು. 18ನೇ ಓವರ್‌ಗೆ ಲಲಿತಾ ಯಾದವ್ ಸ್ಫೋಟಕ ಸಿಕ್ಸರ್‌ನಿಂದ ಡೆಲ್ಲಿ ತಂಡದ ಗೆಲುವಿನ ಹಾದಿ ಸುಗಮವಾಯಿತು. 18.2 ಓವರ್‌ಗಳಲ್ಲಿ ಡೆಲ್ಲಿ ತಂಡ 6 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಲಲಿತ್ ಅಜೇಯ 48 ರನ್ ಸಿಡಿಸಿದರೆ, ಅಕ್ಸರ್ ಪಟೇಲ್ ಅಜೇಯ 38 ರನ್ ಸಿಡಿಸಿದರು.
ಮುಂಬೈ ಸ್ಫೋಟಕ ಬ್ಯಾಟಿಂಗ್
ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನಡೆಸಿತು. ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಆರಂಭಕ್ಕೆ ಡೆಲ್ಲಿ ಬೆಚ್ಚಿ ಬಿದ್ದಿತು. ರೋಹಿತ್ ಶರ್ಮಾ 32 ಎಸೆತದಲ್ಲಿ 41 ರನ್ ಸಿಡಿಸಿದರು. ಇತ್ತ ಅಬ್ಬರಿಸಿದ ಇಶಾನ್ ಕಿಶನ್ 48 ಎಸೆತದಲ್ಲಿ ಅಜೇಯ 81 ರನ್ ಸಿಡಿಸಿದರು. ಇದರಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ಕೂಡ ಒಳಗೊಂಡಿದೆ.
ಅನ್ಮೋಲ್‌ಪ್ರೀತ್ ಸಿಂಗ್ ಕೇವಲ 8 ರನ್ ಸಿಡಿಸಿ ನಿರಾಸೆ ಅನುವಿಸಿದರು.ತಿಲಕ್ ವರ್ಮಾ 15 ಎಸೆತದಲ್ಲಿ 22 ರನ್ ಸಿಡಿಸಿದರು. ಕೀರನ್ ಪೊಲಾರ್ಡ್ ಕೇವಲ 3 ರನ್ ಸಿಡಿಸಿದರು. ಟಿಮ್ ಡೇವಿಡ್ 8 ಎಸೆತದಲ್ಲಿ 12 ರನ್ ಸಿಡಿಸಿದರು. ಇತ್ತ ಡೇನಿಯಲ್ ಸ್ಯಾಮ್ಸ್ ಅಜೇಯ 7 ರನ್ ಸಿಡಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 5 ವಿಕೆಟ್ ನಷ್ಟಕ್ಕೆ 177 ರನ್ ಸಿಡಿಸಿತು.
ಡೆಲ್ಲಿ ಕ್ಯಾಪಿಟಲ್ಸ್ ಪರ ಕುಲ್ದೀಪ್ ಯಾದವ್ 3 ವಿಕೆಟ್ ಕಬಳಿಸುವ ಮೂಲಕ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಕಳೆದ ಆವೃತ್ತಿಯಲ್ಲಿ ಕಳೆಪೆ ಫಾರ್ಮ್‌ನಿಂದ ಬಳಲಿದ್ದ ಕುಲ್ದೀಪ್ ಯಾದವ್ ಈ ಬಾರಿ ಅತ್ಯುತ್ತಮ ಪ್ರದರ್ಶನದ ಮೂಲಕ ಟೂರ್ನಿ ಆರಂಭಿಸಿದ್ದಾರೆ. ವೇಗಿ ಖಲೀಲ್ ಅಹಮ್ಮದ್ 2 ವಿಕೆಟ್ ಕಬಳಿಸಿದರು.
