Asianet Suvarna News Asianet Suvarna News

IPL 2022 ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ 10ನೇ ಗೆಲುವು ಕಂಡ ಗುಜರಾತ್ ಟೈಟಾನ್ಸ್!

ಅಗ್ರ ಎರಡು ಸ್ಥಾನಗಳನ್ನು ಪಡೆಯುವ ಗುರಿಯೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿದ್ದ ಗುಜರಾತ್ ಟೈಟಾನ್ಸ್ ತಂಡ ಅದರಲ್ಲಿ ಯಶಸ್ವಿಯಾಗಿದೆ. ಚೆನ್ನೈ ತಂಡಕ್ಕೆ ಲೀಗ್ ನ 9ನೇ ಸೋಲನ್ನು ನೀಡುವ ಮೂಲಕ ಗುಜರಾತ್ ಟೈಟಾನ್ಸ್ ತಂಡ ಅಗ್ರ 2 ತಂಡಗಳಲ್ಲಿ ಸ್ಥಾನ ಪಡೆಯುವುದು ಖಚಿತಗೊಂಡಿದೆ.
 

IPL 2022 CSK vs GT Bowlers and Wriddhiman Saha Half Century Helps Gujarat Titans to Beat Chennai Super Kings san
Author
Bengaluru, First Published May 15, 2022, 7:11 PM IST

ಮುಂಬೈ (ಮೇ. 15): ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings ) ತಂಡದ ಬ್ಯಾಟಿಂಗ್ ವಿಭಾಗವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ ಗುಜರಾತ್ ಟೈಟಾನ್ಸ್ (Gujarat Titans ) ತಂಡ ಐಪಿಎಲ್ 2022 (IPL 2022) ಅಲ್ಲಿ ತನ್ನ 10ನೇ ಗೆಲುವು ಕಂಡಿದೆ. ಆ ಮೂಲಕ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳೊಂದಿಗೆ ಪ್ಲೇ ಆಫ್ (Play Off) ಪ್ರವೇಶವನ್ನು ಖಚಿತ ಮಾಡಿಕೊಂಡಿದೆ.

ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಮುಖಾಮುಖಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ (CSK), ರುತುರಾಜ್ ಗಾಯಕ್ವಾಡ್ (53ರನ್, 49 ಎಸೆತ, 4 ಬೌಂಡರಿ, 1 ಸಿಕ್ಸರ್) ಬಾರಿಸಿದ ಲೀಗ್ ನ 2ನೇ ಅರ್ಧಶತಕದ ಹೊರತಾಗಿಯೂ ಪರದಾಟ ನಡೆಸಿ 5 ವಿಕೆಟ್ ಗೆ 133 ರನ್ ಗಳ ಸಾಧಾರಣ ಮೊತ್ತ ಪೇರಿಸಿತು. ಪ್ರತಿಯಾಗಿ ಗುಜರಾತ್ ಟೈಟಾನ್ಸ್ (GT) ತಂಡ ವೃದ್ಧಿಮಾನ್ ಸಾಹ  (67*ರನ್, 57 ಎಸೆತ, 8 ಬೌಂಡರಿ, 1 ಸಿಕ್ಸರ್) ಬಾರಿಸಿದ ಅರ್ಧಶತಕದ ಸಹಾಯದಿಂದ 19.1 ಓವರ್ ಗಳಲ್ಲಿ 3 ವಿಕೆಟ್ ಗೆ 137 ರನ್ ಬಾರಿಸಿ ಗೆಲುವು ಕಂಡಿತು. ಆ ಮೂಲಕ 7 ವಿಕೆಟ್ ಗಳಿಂದ ಚೆನ್ನೈ ತಂಡವನ್ನು ಸೋಲಿಸಿತು.

ಸಾಧಾರಣ ಮೊತ್ತದ ಗುರಿ ಬೆನ್ನಟ್ಟಲು ಗುಜರಾತ್ ಟೈಟಾನ್ಸ್ ತಂಡ ಭರ್ಜರಿ ಆರಂಭ ಪಡೆದುಕೊಂಡಿತು. ಪವರ್ ಪ್ಲೇ ಅವಧಿಯ ಆಟದಲ್ಲಿ ವಿಕೆಟ್ ನಷ್ಟವಿಲ್ಲದೆ 53 ರನ್ ಗಳನ್ನು ಬಾರಿಸಿದ ಗುಜರಾತ್ ತಂಡ  ಅದಾಗಲೇ ಗೆಲುವು ನಿಶ್ಚಯ ಮಾಡಿಕೊಂಡಿತ್ತು. ಮುಖೇಶ್ ಚೌಧರಿ ಎಸೆತಗಳಲ್ಲಿ ವೃದ್ಧಿ ಮಾನ್ ಸಾಹ ಆಕರ್ಷಕವಾಗಿ ಬೌಂಡರಿಗಳನ್ನು ಬಾರಿಸಿದರು. ಇದರ ನಡುವೆ ರುತುರಾಜ್ ಗಾಯಕ್ವಾಡ್, ವೃದ್ಧಿಮಾನ್ ಸಾಹ ಅವರ ಸುಲಭದ ಕ್ಯಾಚ್ ಅನ್ನು ಕೈಚೆಲ್ಲಿದರು. ಒಂದೆಡೆ ಶುಭಮನ್ ಗಿಲ್ (18 ರನ್, 17 ಎಸೆತ, 3 ಬೌಂಡರಿ) ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರೆ, ವೃದ್ಧಿಮಾನ್ ಸಾಹ ಸ್ಫೋಟಕವಾಗಿ ಬ್ಯಾಟಿಂಗ್ ನಡೆಸಿದರು.

ಮೊದಲ ವಿಕೆಟ್ ಗೆ 59 ರನ್ ಜೊತೆಯಾಟವಾಡಿದ ಬಳಿಕ ಜೂನಿಯರ್ ಮಾಲಿಂಗ ಖ್ಯಾತಿಯ ಮಥೀಶಾ ಪಥಿರಣ ತಮ್ಮ ಪಾದಾರ್ಪಣೆ ಪಂದ್ಯದ ಮೊದಲ ಎಸೆತದಲ್ಲಿಯೇ ವಿಕೆಟ್ ಉರುಳಿಸಿ ಮಿಂಚಿದರು. ಗಿಲ್ ಎಸೆತದಲ್ಲಿ ಎಲ್ ಬಿ ಆದರು. ಇದನ್ನು ಗಿಲ್ ಡಿಆರ್ ಎಸ್ ಮೂಲಕ ಪರಿಶೀಲನೆ ಮಾಡಿದರೂ, ಪಥಿರಣ ಪರವಾಗಿಯೇ ತೀರ್ಪು ಬಂದಿತು. ಅದರೊಂದಿಗೆ ಶ್ರೀಲಂಕಾದ ಅಂಡರ್ 19 ಸ್ಟಾರ್ ಪಾದಾರ್ಪಣೆ ಪಂದ್ಯದಲ್ಲಿ ಗಮನಸೆಳೆದರು.

IPL 2022 ಲಖನೌ ವಿರುದ್ದ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್, 3 ಬದಲಾವಣೆ!

ಗಿಲ್ ಔಟಾದ ಬಳಿಕ ವೃದ್ಧಿಮಾನ್ ಸಾಹಗೆ ಜೊತೆಯಾದ ಮ್ಯಾಥ್ಯೂ ವೇಡ್ (20ರನ್, 15 ಎಸೆತ, 2 ಬೌಂಡರಿ) 31 ರನ್ ಗಳ ಜೊತೆಯಾಟವಾಡಿದರು. ಉತ್ತಮವಾಗಿ ಆಡುತ್ತಿದ್ದ  ವೇಡ್, ಮೋಯಿನ್ ಅಲಿ ಎಸೆತದಲ್ಲಿ ಶಿವಂ ದುಬೆಗೇ ಕ್ಯಾಚ್ ನೀಡಿದರೆ, ಮೈದಾನಕ್ಕಿಳಿದ ಹಾರ್ದಿಕ್ ಪಾಂಡ್ಯ ಮೋಡಿ ಮಾಡುವಲ್ಲಿ ವಿಫಲರಾದರು. 6 ಎಸೆತಗಳಲ್ಲಿ 1 ಬೌಂಡರಿ ಸಿಡಿಸಿದ ಹಾರ್ದಿಕ್ ಪಾಂಡ್ಯ 7 ರನ್ ಬಾರಿಸಿ  ಮಥೀಶಾ ಪಥಿರಣನಿಗೆ 2ನೇ ಬಲಿಯಾದರು.

ಗಾಯಕ್ವಾಡ್ ಫಿಫ್ಟಿ, ಗುಜರಾತ್ ಟೈಟಾನ್ಸ್‌ಗೆ ಸಾಧಾರಣ ಗುರಿ ನೀಡಿದ ಸಿಎಸ್‌ಕೆ..!

ಇದರ ನಡುವೆ 14ನೇ ಓವರ್ ನಲ್ಲಿ ವೃದ್ಧಿಮಾನ್ ಸಾಹ (Wriddhiman Saha) ತಮ್ಮ ಅರ್ಧಶತಕ ಪೂರೈಸಿಕೊಂಡರು. ಪವರ್ ಪ್ಲೇ ಅವಧಿಯಲ್ಲಿ ಬಿರುಸಿನ ಆಟವಾಡಿದ ಸಾಹ ಆ ಬಳಿಕ ತಮ್ಮ ಆಟದಲ್ಲಿ ತಾಳ್ಮೆ ತಂದುಕೊಂಡು ತಂಡವನ್ನು ಗೆಲುವಿನ ದಡ ಸೇರಿಸುವವರೆಗೂ ಮೈದಾನದಲ್ಲಿದ್ದರು. 4ನೇ ವಿಕೆಟ್ ಗೆ ಡೇವಿಡ್ ಮಿಲ್ಲರ್  (15 ರನ್, 20 ಎಸೆತ, 1 ಬೌಂಡರಿ) ಜೊತೆ 37 ರನ್ ಜೊತೆಯಾಟವಾಡುವ ಮೂಲಕ ತಂಡಕ್ಕೆ ಗೆಲುವು ನೀಡಿದರು.

Follow Us:
Download App:
  • android
  • ios