* ಗುಜರಾತ್ ಟೈಟಾನ್ಸ್‌ಗೆ ಸಾಧಾರಣ ಗುರಿ ನೀಡಿದ ಚೆನ್ನೈ ಸೂಪರ್ ಕಿಂಗ್ಸ್‌* ಸಮಯೋಚಿತ ಅರ್ಧಶತಕ ಸಿಡಿಸಿ ಸಿಎಸ್‌ಕೆ ತಂಡಕ್ಕೆ ಆಸರೆಯಾದ ಗಾಯಕ್ವಾಡ್‌* ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಹಾರ್ದಿಕ್ ಪಾಂಡ್ಯ ಪಡೆ

ಮುಂಬೈ(ಮೇ.15): ಋತುರಾಜ್ ಗಾಯಕ್ವಾಡ್ (Ruturaj Gaikwad) ಬಾರಿಸಿದ ಆಕರ್ಷಕ ಅರ್ಧಶತಕದ ಹೊರತಾಗಿಯೂ ಗುಜರಾತ್ ಟೈಟಾನ್ಸ್ (Gujarat Titans) ತಂಡದ ಶಿಸ್ತುಬದ್ದ ದಾಳಿಗೆ ತತ್ತರಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು (Chennai Super Kings) ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 133 ರನ್ ಬಾರಿಸಿದ್ದು, ಹಾರ್ದಿಕ್ ಪಾಂಡ್ಯ (Hardik Pandya) ಪಡೆಗೆ ಗೆಲ್ಲಲು ಸಾಧಾರಣ ಗುರಿ ನೀಡಿದೆ.

ಇಲ್ಲಿನ ವಾಂಖೇಡೆ ಮೈದಾನದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಸಿಎಸ್‌ಕೆ ತಂಡವು ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಉತ್ತಮ ಫಾರ್ಮ್‌ನಲ್ಲಿದ್ದ ಚೆನ್ನೈ ಆರಂಭಿಕ ಬ್ಯಾಟರ್‌ ಡೆವೊನ್ ಕಾನ್‌ವೇ ಕೇವಲ 5 ರನ್ ಬಾರಿಸಿ ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ವೃದ್ದಿಮಾನ್ ಸಾಹಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದ ಚೆನ್ನೈ ತಂಡಕ್ಕೆ ಎರಡನೇ ವಿಕೆಟ್‌ಗೆ ಮೋಯಿನ್ ಅಲಿ ಹಾಗೂ ಋತುರಾಜ್ ಗಾಯಕ್ವಾಡ್ ಆಸರೆಯಾದರು. ಈ ಜೋಡಿ ಎರಡನೇ ವಿಕೆಟ್‌ಗೆ 57 ರನ್‌ಗಳ ಜತೆಯಾಟವಾಡುವ ಮೂಲಕ ಸಿಎಸ್‌ಕೆ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿತು. ಚುರುಕಿನ ಬ್ಯಾಟಿಂಗ್ ನಡೆಸುವ ಮೂಲಕ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ಮೋಯಿನ್ ಅಲಿಯನ್ನು ಸ್ಪಿನ್ನರ್ ಸಾಯಿ ಕಿಶೋರ್ ಪೆವಿಲಿಯನ್‌ಗಟ್ಟಿದ್ದರು. ಮೋಯಿನ್ ಅಲಿ (Moeen Ali) 17 ಎಸೆತಗಳನ್ನು ಎದುರಿಸಿ 2 ಸಿಕ್ಸರ್ ಸಹಿತ 21 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಗಾಯಕ್ವಾಡ್ ಸಮಯೋಚಿತ ಅರ್ಧಶತಕ: ಆರಂಭದಲ್ಲೇ ಕಾನ್‌ವೇ ವಿಕೆಟ್ ಕಳೆದುಕೊಂಡಿದ್ದರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಲು ಮುಂದಾಯಿತು. ಆರಂಭಿಕ ಬ್ಯಾಟರ್‌ ಋತುರಾಜ್ ಗಾಯಕ್ವಾಡ್‌, ಮೋಯಿನ್ ಅಲಿ ಜತೆಗೂಡಿ ತಂಡಕ್ಕೆ ಆಸರೆಯಾಗುವ ಯತ್ನ ನಡೆಸಿದರು. ಸಾಕಷ್ಟು ಜವಾಬ್ದಾರಿಯುತ ನಡೆಸಿದ ಋತುರಾಜ್ ಗಾಯಕ್ವಾಡ್‌ 49 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 53 ರನ್ ಗಳಿಸಿ ರಶೀದ್‌ ಖಾನ್‌ಗೆ ವಿಕೆಟ್ ಒಪ್ಪಿಸಿದರು.

Scroll to load tweet…

ವಿರಾಟ್ ಕೊಹ್ಲಿಯ ಘನಘೋರ ವೈಫಲ್ಯಕ್ಕೆ ಮರಗುತ್ತಿದೆ ಕ್ರಿಕೆಟ್​​​​ ಜಗತ್ತು..!

ಇನ್ನು ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದರೆ, ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಕೇವಲ 7 ರನ್‌ಗಳಿಗೆ ಸೀಮಿತವಾಯಿತು. 10 ಎಸೆತಗಳನ್ನು ಎದುರಿಸಿದ ಧೋನಿ ಒಂದೇ ಒಂದು ಬೌಂಡರಿ ಬಾರಿಸಲು ಯಶಸ್ವಿಯಾಗಲಿಲ್ಲ. ಇನ್ನು ರಾಬಿನ್ ಉತ್ತಪ್ಪ ಬದಲಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದ ಎನ್ ಜಗದೀಶನ್ 32 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 37 ರನ್‌ ಬಾರಿಸಿ ಅಜೇಯರಾಗುಳಿದರು.

ಕೊನೆಯ 5 ಓವರ್‌ಗಳಲ್ಲಿ ಒಂದೇ ಒಂದು ಬೌಂಡರಿ ಬಾರಿಸದ ಚೆನ್ನೈ ಸೂಪರ್ ಕಿಂಗ್ಸ್‌: ಹೌದು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಒಂದು ಹಂತದಲ್ಲಿ ಅನಾಯಾಸವಾಗಿ 150+ ರನ್ ಬಾರಿಸಬಹುದು ಎಂದು ಭಾವಿಸಲಾಗಿತ್ತು. ಆದರೆ ಕೊನೆಯ 5 ಓವರ್‌ಗಳಲ್ಲಿ ಅತ್ಯಂತ ಶಿಸ್ತುಬದ್ದ ದಾಳಿ ನಡೆಸಿದ ಗುಜರಾತ್ ಟೈಟಾನ್ಸ್ ಬೌಲರ್‌ಗಳು ಚೆನ್ನೈ ತಂಡದ ಬ್ಯಾಟರ್‌ಗಳಿಗೆ ಬೌಂಡರಿ ಬಾರಿಸಲು ಅವಕಾಶ ನೀಡಲಿಲ್ಲ. ಕೊನೆಯ 30 ಎಸೆತಗಳಲ್ಲಿ ಶಿವಂ ದುಬೆ, ಧೋನಿ ಜಗದೀಶನ್ ಅವರಂತಹ ಬ್ಯಾಟರ್‌ಗಳಿದ್ದರೂ ಸಹಾ ಬೌಂಡರಿ ಬಾರಿಸಲು ಯಶಸ್ವಿಯಾಗಲಿಲ್ಲ.