IPL 2022 ಮೊದಲ ಜಯಕ್ಕೆ ಲಖನೌ ಸೂಪರ್ ಜೈಂಟ್ಸ್-ಚೆನ್ನೈ ಸೂಪರ್ ಕಿಂಗ್ಸ್ ಕಾತರ..!
* ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಿಂದು ಲಖನೌ ಸೂಪರ್ ಜೈಂಟ್ಸ್ ಸವಾಲು
* ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯಲು ಸಜ್ಜಾದ ಉಭಯ ತಂಡಗಳು
* ಚೆನ್ನೈ ಬಲ ಹೆಚ್ಚಿಸಲಿರುವ ಸ್ಟಾರ್ ಆಲ್ರೌಂಡರ್ ಮೋಯಿನ್ ಅಲಿ
ಮುಂಬೈ(ಮಾ.31): ಸೋಲಿನೊಂದಿಗೆ 15ನೇ ಆವೃತ್ತಿಯ ಐಪಿಎಲ್ (IPL 2022) ಅಭಿಯಾನವನ್ನು ಆರಂಭಿಸಿದ್ದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಹೊಸ ತಂಡ ಲಖನೌ ಸೂಪರ್ ಜೈಂಟ್ಸ್ (Lucknow Supergiants) ಗುರುವಾರ ಪರಸ್ಪರ ಎದುರಾಗಲಿದ್ದು, ಮೊದಲ ಜಯಕ್ಕಾಗಿ ಕಾತರಿಸುತ್ತಿವೆ. ತಾರಾ ಆಲ್ರೌಂಡರ್, ಇಂಗ್ಲೆಂಡ್‌ನ ಮೋಯಿನ್ ಅಲಿ (Moeen Ali) ಆಯ್ಕೆಗೆ ಲಭ್ಯವಿದ್ದು, ಚೆನ್ನೈ ತಂಡದ ಬಲ ಹೆಚ್ಚಿಸಲಿದೆ. ಮೋಯಿನ್ ಅಲಿ ವೀಸಾ ಸಮಸ್ಯೆಯಿಂದ ಕೊಂಚ ತಡವಾಗಿ ಭಾರತಕ್ಕೆ ಬಂದಿಳಿದು ಕ್ವಾರಂಟೈನ್‌ನಲ್ಲಿ ಇದ್ದಿದ್ದರಿಂದ ಕೋಲ್ಕತಾ ನೈಟ್ ರೈಡರ್ಸ್ ಎದುರಿನ ಉದ್ಘಾಟನಾ ಪಂದ್ಯದಲ್ಲಿ ಆಯ್ಕೆಗೆ ಲಭ್ಯವಿರಲಿಲ್ಲ.
ಮೊದಲ ಪಂದ್ಯದಲ್ಲಿ ಎರಡೂ ತಂಡಗಳು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ವೈಫಲ್ಯ ಕಂಡಿದ್ದವು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟರ್ ಋುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ರಾಬಿನ್ ಉತ್ತಪ್ಪ ಅವರನ್ನೊಳಗೊಂಡ ಚೆನ್ನೈನ ಅಗ್ರ ಕ್ರಮಾಂಕ ವೈಫಲ್ಯ ಕಂಡಿತ್ತು. ಇನ್ನು ಲಖನೌ ತಂಡದಲ್ಲಿ ನಾಯಕ ಕೆ.ಎಲ್. ರಾಹುಲ್ (KL Rahul), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ (Manish Pandey), ಎವಿನ್ ಲೆವಿಸ್‌ರಂತಹ ಟಿ20 ತಜ್ಞ ಬ್ಯಾಟರ್‌ಗಳಿದ್ದರೂ ಮೊದಲ ಪಂದ್ಯದಲ್ಲಿ ತತ್ತರಿಸಿತ್ತು.
ಎರಡೂ ತಂಡಗಳು ಸುಧಾರಿತ ಬೌಲಿಂಗ್ ಪ್ರದರ್ಶನ ತೋರಲು ಸಹ ಶ್ರಮ ವಹಿಸಬೇಕಿದೆ. ಈ ನಡುವೆ ಎಂ.ಎಸ್.ಧೋನಿಯ (MS Dhoni) ಬ್ಯಾಟಿಂಗ್ ಲಯ, ಡ್ವೇನ್ ಬ್ರಾವೋ ಅವರ ಬೌಲಿಂಗ್ ಲಯ ಚೆನ್ನೈಗೆ ಲಾಭವೆನಿಸಿದ್ದು, ಯುವ ಆಟಗಾರರಾದ ದೀಪಕ್ ಹೂಡಾ(Deepak Hooda), ಆಯುಷ್ ಬದೋನಿ ಲಖನೌ ತಂಡಕ್ಕೆ ಭರವಸೆ ಮೂಡಿಸಿದ್ದಾರೆ.
IPL 2022 ಪರದಾಡುತ್ತಲೇ ಕೆಕೆಆರ್ ವಿರುದ್ಧ ಜಯದ ಗುರಿ ಮುಟ್ಟಿದ ಆರ್ ಸಿಬಿ!
ಪಿಚ್ ರಿಪೋರ್ಟ್
ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ದೊರೆತಿತ್ತು. ಇಬ್ಬನಿ ಬೀಳುವ ಸಾಧ್ಯತೆ ಹೆಚ್ಚಿರುವ ಕಾರಣ ಟಾಸ್ ಗೆಲ್ಲುವ ತಂಡ ಮೊದಲು ಫೀಲ್ಡ್ ಮಾಡಲು ಪ್ರಾಮುಖ್ಯತೆ ನೀಡುವುದು ಸಹಜ. ಹೀಗಾಗಿ ಟಾಸ್ ನಿರ್ಣಾಯಕ ಪಾತ್ರ ವಹಿಸಲಿದೆ.
ಸಂಭವನೀಯ ಆಟಗಾರರ ಪಟ್ಟಿ
ಚೆನ್ನೈ ಸೂಪರ್ ಕಿಂಗ್ಸ್: ಋುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮೋಯಿನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ(ನಾಯಕ), ಎಂ ಎಸ್ ಧೋನಿ, ಶಿವಂ ದುಬೆ, ಡ್ವೇನ್ ಬ್ರಾವೋ, ಮಿಚೆಲ್ ಸ್ಯಾಂಟ್ನರ್, ಆಡಂ ಮಿಲ್ನೆ, ತುಷಾರ್ ದೇಶಪಾಂಡೆ.
ಲಖನೌ ಸೂಪರ್ ಜೈಂಟ್ಸ್: ಕೆ.ಎಲ್ ರಾಹುಲ್(ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ಎವಿನ್ ಲೆವಿಸ್, ಕೃನಾಲ್ ಪಾಂಡ್ಯ, ದೀಪಕ್ ಹೂಡಾ, ಆಯುಷ್ ಬದೋನಿ, ಆವೇಶ್ ಖಾನ್, ಮೋಹ್ಸಿನ್ ಖಾನ್, ರವಿ ಬಿಷ್ಣೋಯ್, ದುಶ್ಮಂತ ಚಮೀರ.
ಸ್ಥಳ: ಮುಂಬೈ, ಬ್ರೆಬೋರ್ನ್ ಕ್ರೀಡಾಂಗಣ,
ಪಂದ್ಯ: ಸಂಜೆ 7.30ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಸನ್ರೈಸರ್ಸ್ ನಾಯಕ ಕೇನ್ ವಿಲಿಯಮ್ಸನ್‌ಗೆ 12 ಲಕ್ಷ ದಂಡ
ಪುಣೆ: ರಾಜಸ್ಥಾನ ರಾಯಲ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ತಮ್ಮ ತಂಡ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕೆ ಸನ್ರೈಸರ್ಸ್ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್‌ಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ಇದು ಮೊದಲ ಉಲ್ಲಂಘನೆಯಾಗಿರುವ ಕಾರಣ ದಂಡ ಹಾಕಲಾಗಿದ್ದು ಈ ಆವೃತ್ತಿಯಲ್ಲಿ ಇನ್ನೊಮ್ಮೆ ನಿಧಾನಗತಿ ಬೌಲಿಂಗ್ ಕಂಡುಬಂದರೆ ವಿಲಿಯಮ್ಸನ್ ಒಂದು ಪಂದ್ಯಕ್ಕೆ ನಿಷೇಧಗೊಳ್ಳುವ ಸಾಧ್ಯತೆ ಇರಲಿದೆ. ಈ ಆವೃತ್ತಿಯಲ್ಲಿ ನಿಧಾನಗತಿ ಬೌಲಿಂಗ್‌ಗೆ ದಂಡ ಹಾಕಿಸಿಕೊಂಡ 2ನೇ ನಾಯಕ ಕೇನ್ ವಿಲಿಯಮ್ಸನ್. ಮುಂಬೈ ತಂಡದ ರೋಹಿತ್ ಶರ್ಮಾ ಇತ್ತೀಚೆಗೆ ದಂಡಕ್ಕೆ ಗುರಿಯಾಗಿದ್ದರು.