Asianet Suvarna News Asianet Suvarna News

IPL 2022: ಸಿಎಸ್‌ಕೆ ತಂಡಕ್ಕೆ ಗಾಯದ ಮೇಲೆ ಬರೆ, ದೀಪಕ್‌ ಚಹರ್ ಈ ಐಪಿಎಲ್ ಆಡೋದು ಅನುಮಾನ..!

* ಚೆನ್ನೈ ಸೂಪರ್‌ ಕಿಂಗ್ಸ್‌ ಸತತ ಸೋಲುಗಳಿಂದ ಕಂಗೆಟ್ಟಿದೆ

* ಗಾಯದ ಸಮಸ್ಯೆಯಿಂದ ಬಳಲುತ್ತಿರುವ ದೀಪಕ್ ಚಹರ್, ಐಪಿಎಲ್‌ನಲ್ಲಿ ಪಾಲ್ಗೊಳ್ಳೋದು ಡೌಟ್

* ಬೆಂಗಳೂರಿನ ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿರುವ ದೀಪಕ್ ಚಹರ್

IPL 2022 Chennai Super Kings Cricketer Deepak Chahar return likely to get delayed with back injury kvn
Author
Bengaluru, First Published Apr 12, 2022, 5:43 PM IST

ಬೆಂಗಳೂರು(ಏ.12): ಮೊದಲೇ ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ತಂಡದ ಪಾಲಿಗೆ ಮತ್ತೊಂದು ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಸ್ಟಾರ್ ವೇಗಿ ದೀಪಕ್ ಚಹರ್ (Deepak Chahar) 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಮತ್ತಷ್ಟು ತಡವಾಗುವ ಸಾಧ್ಯತೆ ದಟ್ಟವಾಗಿದೆ. ಇಲ್ಲಿನ ನ್ಯಾಷನಲ್‌ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿರುವ ದೀಪಕ್ ಚಹರ್‌ಗೆ ಹೊಸದಾಗಿ ಬೆನ್ನು ನೋವು ಕಾಣಿಸಿಕೊಂಡಿರುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ತಲೆನೋವು ಹೆಚ್ಚುವಂತೆ ಮಾಡಿದೆ.

ಮುಖ್ಯವಾದ ವಿಚಾರವೆಂದರೆ, ದೀಪಕ್ ಚಹರ್ ಕಳೆದೊಂದು ತಿಂಗಳಿನಿಂದ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು ಅಭ್ಯಾಸ ನಡೆಸುತ್ತಿದ್ದಾರೆ. ಈ ವರ್ಷಾರಂಭದಲ್ಲೇ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯ ವೇಳೆ ದೀಪಕ್ ಚಹರ್ ತೊಡೆಸಂದು ಗಾಯಕ್ಕೆ ತುತ್ತಾಗಿದ್ದರು. ಇದಾದ ಬಳಿಕ ದೀಪಕ್ ಚಹರ್ 2022ರ ಐಪಿಎಲ್ ಟೂರ್ನಿಯ ಬಹುತೇಕ ಪಂದ್ಯಗಳಿಂದ ವಂಚಿತರಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದರು. ಆದರೆ ಚುರುಕಾಗಿ ದೀಪಕ್ ಚಹರ್ ಚೇತರಿಸಿಕೊಂಡಿದ್ದರಿಂದ ಆದಷ್ಟು ಬೇಗ ಸಿಎಸ್‌ಕೆ ತಂಡ ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಇದೀಗ ದೀಪಕ್ ಚಹರ್‌ಗೆ ಬೆನ್ನು ನೋವು ಕಾಣಿಸಿಕೊಂಡಿರುವುದರಿಂದ ಐಪಿಎಲ್‌ಗೆ (IPL 2022) ಎಂಟ್ರಿ ಕೊಡುವುದು ಈ ವರ್ಷ ಮತ್ತಷ್ಟು ತಡವಾಗುವ ಸಾಧ್ಯತೆಯಿದೆ.

ದೀಪಕ್ ಚಹರ್ ಎದುರಿಸುತ್ತಿರುವ ಬೆನ್ನು ನೋವು ಯಾವ ಪ್ರಮಾಣದ್ದೂ ಎನ್ನುವುದರ ಬಗ್ಗೆ ಬಿಸಿಸಿಐಯಾಗಲಿ ಅಥವಾ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯಾಗಲಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆಸ್ಟ್ರೇಲಿಯಾದಲ್ಲಿ ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಗೆ ಭಾರತ ತಂಡದ ಸ್ಥಾನ ಪಡೆಯಬಲ್ಲ ಆಟಗಾರ ದೀಪಕ್ ಚಹರ್ ಚೇತರಿಕೆಯ ಮೇಲೆ ಇದೀಗ ಎಲ್ಲರ ಚಿತ್ತ ನೆಟ್ಟಿದೆ.

IPL 2022: ರಾಯಲ್ ಚಾಲೆಂಜರ್ಸ್‌ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಗೆಲ್ಲೋರು ಯಾರು..?
 
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈಗಾಗಲೇ ತಾನಾಡಿದ ಮೊದಲ ನಾಲ್ಕೂ ಪಂದ್ಯಗಳಲ್ಲೂ ಆಘಾತಕಾರಿ ಸೋಲು ಅನುಭವಿಸುವ ಮೂಲಕ ಮುಖಭಂಗ ಅನುಭವಿಸಿದೆ. 4 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ ಬರೋಬ್ಬರಿ 14 ಕೋಟಿ ರುಪಾಯಿ ನೀಡಿ ದೀಪಕ್ ಚಹರ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಕಳೆದ ಕೆಲ ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ದೀಪಕ್ ಚಹರ್ ಮಿಂಚಿನ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಐಪಿಎಲ್‌ನಲ್ಲಿ ದೀಪಕ್ ಚಹರ್ 58 ಪಂದ್ಯಗಳನ್ನಾಡಿ 56 ವಿಕೆಟ್ ಕಬಳಿಸಿದ್ದಾರೆ.

ಚಹಲ್‌ ಆರೋಪ: ಡರ್ಹಮ್‌ ಕೋಚ್‌ ಫ್ರಾಂಕ್ಲಿನ್‌ಗೆ ಸಂಕಷ್ಟ

ಲಂಡನ್‌: ಆ್ಯಂಡ್ರೂ ಸೈಮಂಡ್ಸ್‌ ಹಾಗೂ ನ್ಯೂಜಿಲೆಂಡ್‌ನ ಜೇಮ್ಸ್‌ ಫ್ರಾಂಕ್ಲಿನ್‌ ಕುಡಿದ ಮತ್ತಿನಲ್ಲಿ ತಮ್ಮ ಕೈಕಾಲು ಕಟ್ಟಿ, ಬಾಯಿಗೆ ಟೇಪ್‌ ಅಂಟಿಸಿದ್ದರು ಎಂಬ 2011ರ ಘಟನೆಯನ್ನು ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಬಹಿರಂಗಪಡಿಸಿದ ಬೆನ್ನಲ್ಲೇ ಇಂಗ್ಲೆಂಡ್‌ ಕೌಂಟಿ ತಂಡ ಡರ್ಹಮ್‌ನ ಪ್ರಧಾನ ಕೋಚ್‌ ಆಗಿರುವ ಫ್ರಾಂಕ್ಲಿನ್‌ಗೆ ಸಂಕಷ್ಟ ಎದುರಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದಿರುವ ಡರ್ಹಮ್‌ ತಂಡ, ‘ನಮ್ಮ ಸಿಬ್ಬಂದಿ ಬಗ್ಗೆ ಸುದ್ದಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಅವರ ಜೊತೆ ಮಾತುಕತೆ ನಡೆಸುತ್ತೇವೆ’ ಎಂದಿದೆ. ಒಂದು ವೇಳೆ ಫ್ರಾಂಕ್ಲಿನ್‌ ತಪ್ಪಿತಸ್ಥ ಎಂದು ಗೊತ್ತಾದರೆ ಅವರನ್ನು ಹುದ್ದೆಯಿಂದಲೇ ವಜಾಗೊಳಿಸುವ ಸಾಧ್ಯತೆ ಇದೆ.

Follow Us:
Download App:
  • android
  • ios