IPL 2022: ರಾಯಲ್ ಚಾಲೆಂಜರ್ಸ್‌ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಗೆಲ್ಲೋರು ಯಾರು..?

* ಚೆನ್ನೈ ಸೂಪರ್‌ ಕಿಂಗ್ಸ್‌ - ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮುಖಾಮುಖಿ

* ಹೈವೋಲ್ಟೇಜ್‌ ಪಂದ್ಯಕ್ಕೆ ಡಿವೈ ಪಾಟೀಲ್ ಮೈದಾನ ಆತಿಥ್ಯ

* ಟೂರ್ನಿಯಲ್ಲಿ ಮೊದಲ ಗೆಲುವಿಗೆ ಹಾತೊರೆಯುತ್ತಿದೆ ಚೆನ್ನೈ ಸೂಪರ್ ಕಿಂಗ್ಸ್

IPL 2022 Who will win today IPL match between Chennai Super Kings and Royal Challengers Bangalore kvn

ನವಿ ಮುಂಬೈ(ಏ.12): 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಡಿವೈ ಪಾಟೀಲ್ ಮೈದಾನ ಆತಿಥ್ಯವನ್ನು ವಹಿಸಲಿದೆ. ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟೂರ್ನಿಯಲ್ಲಿ ಸತತ 4 ಸೋಲು ಕಂಡಿದ್ದು, ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಇನ್ನೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಗೆಲುವಿನ ನಾಗಾಲೋಟ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ವೈಫಲ್ಯವನ್ನು ಅನುಭವಿಸುತ್ತಿದೆ. ಇದೇ ಮೊದಲ ಬಾರಿಗೆ ಐಪಿಎಲ್‌ನ ಆರಂಭಿಕ 4 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಸೋಲು ಅನುಭವಿಸಿದೆ. ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಲಂಕಾದ ಮಿಸ್ಟ್ರಿ ಸ್ಪಿನ್ನರ್ ಮಹೀಶ್ ತೀಕ್ಷಣ ಅವರಿಗೆ ಅಡುವ ಹನ್ನೊಂದರ ಬಳಗದಲ್ಲಿ ಮಣೆ ಹಾಕಿತ್ತು. ಆದರೆ ಆ ಪ್ರಯೋಗ ಕೂಡಾ ಕೈಹಿಡಿದಿರಲಿಲ್ಲ. ಆರ್‌ಸಿಬಿ ಎದುರಿನ ಇಂದಿನ ಪಂದ್ಯಕ್ಕೆ ಚೆನ್ನೈ ತಂಡದಲ್ಲಿ ಅಂಡರ್ 19 ವಿಶ್ವಕಪ್ ಹೀರೋ ರಾಜವರ್ಧನ್ ಹಂಗಾರ್ಗೆಕರ್‌ಗೆ ಅವಕಾಶ ದೊರೆಯುವ ಸಾಧ್ಯತೆಯಿದೆ. 

ಇನ್ನೊಂದೆಡೆ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಪಂದ್ಯದಲ್ಲೇ ಆಘಾತಕಾರಿ ಸೋಲು ಕಂಡಿತ್ತಾದರೂ ಆ ಬಳಿಕ ಸತತ 3 ಪಂದ್ಯಗಳಲ್ಲಿ ಗೆಲುವು ದಾಖಲಿಸುವ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಕಳೆದ ಕೆಲ ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿಯಾಗಿ ಗುರುತಿಸಿಕೊಂಡಿದ್ದ ಫಾಫ್ ಡು ಪ್ಲೆಸಿಸ್ ಇದೀಗ ಮೊದಲ ಬಾರಿಗೆ ಸಿಎಸ್‌ಕೆ ಎದುರು ಕಣಕ್ಕಿಳಿಯುತ್ತಿದ್ದು, ಈ ಕಾದಾಟವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ ಅವರಂತಹ ಟಿ20 ಸ್ಪೆಷಲಿಸ್ಟ್ ಬ್ಯಾಟರ್‌ಗಳು ಪಂದ್ಯದ ದಿಕ್ಕನ್ನೇ ಬದಲಿಸುವ ಕ್ಷಮತೆ ಹೊಂದಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಇಂದಿನ ಪಂದ್ಯಕ್ಕೆ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್‌ ಆಯ್ಕೆಗೆ ಲಭ್ಯವಿದ್ದು, ಬಹುತೇಕ ಕಣಕ್ಕಿಳಿಯುವುದು ಖಚಿತ ಎನಿಸಿದೆ. ಇನ್ನು ಶಾಬಾಜ್ ಅಹಮ್ಮದ್ ಹಾಗೂ ವನಿಂದು ಹಸರಂಗ ಕೂಡಾ ಭರ್ಜರಿ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.

ಪಿಚ್ ರಿಪೋರ್ಟ್‌: ಇಲ್ಲಿನ ಪಿಚ್‌ ಬ್ಯಾಟರ್‌ ಹಾಗೂ ಬೌಲರ್‌ಗಳಿಗೆ ಸಮಾನ ಅವಕಾಶ ಒದಗಿಸಿತ್ತು. ಒಂದು ರೀತಿಯ ಸ್ಪರ್ಧಾತ್ಮಕ ಪಿಚ್ ಇದಾಗಿದೆ. ಕಳೆದೆರಡು ಪಂದ್ಯಗಳಲ್ಲಿ ಗುರಿ ಬೆನ್ನತ್ತಿದ ತಂಡವು ಗೆಲುವು ದಾಖಲಿಸಿದೆ. ಇದರ ಜತೆಗೆ ಎರಡನೇ ಇನಿಂಗ್ಸ್‌ ವೇಳೆಗೆ ಇಬ್ಬನಿ ಬೀಳುವುದರಿಂದ ಟಾಸ್ ಗೆದ್ದಂತಹ ತಂಡವು ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರೆ ಅಚ್ಚರಿ ಪಡುವಂತಿಲ್ಲ. 

ಇಂದಿನ ಪಂದ್ಯ ಗೆಲ್ಲೋರು ಯಾರು: ಮೇಲ್ನೋಟಕ್ಕೆ ಎರಡು ತಂಡಗಳು ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿವೆಯಾದರೂ, ಜೋಶ್ ಹೇಜಲ್‌ವುಡ್ ಸೇರ್ಪಡೆ ಆರ್‌ಸಿಬಿ ತಂಡವನ್ನು ಮತ್ತಷ್ಟು ಬಲಿಷ್ಠವನ್ನಾಗಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮತ್ತೊಂದು ಗೆಲುವು ಸಾಧಿಸಿದರೆ ಅಚ್ಚರಿ ಪಡುವಂತಿಲ್ಲ.

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಫಾಫ್ ಡು ಪ್ಲೆಸಿಸ್(ನಾಯಕ), ಅನೂಜ್ ರಾವತ್‌, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್‌, ದಿನೇಶ್ ಕಾರ್ತಿಕ್‌, ಮಹಿಪಾಲ್ ಲೊಮ್ರೊರ್‌, ಶಾಬಾಜ್ ಅಹಮ್ಮದ್‌, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್‌, ಆಕಾಶ್‌ದೀಪ್ ಸಿಂಗ್‌, ಜೋಶ್ ಹೇಜಲ್‌ವುಡ್‌,

ಚೆನ್ನೈ: ಋುತುರಾಜ್ ಗಾಯಕ್ವಾಡ್‌, ರಾಬಿನ್ ಉತ್ತಪ್ಪ, ಮೋಯಿನ್ ಅಲಿ, ಅಂಬಟಿ ರಾಯುಡು, ಎಂ ಎಸ್ ಧೋನಿ, ರವೀಂದ್ರ ಜಡೇಜಾ(ನಾಯಕ), ಶಿವಂ ದುಬೆ, ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡನ್‌, ಡ್ವೇನ್ ಪ್ರಿಟೋರಿಯಸ್‌, ಮುಕೇಶ್ ಚೌಧರಿ‌.

ಸ್ಥಳ: ನವಿ ಮುಂಬೈ, ಡಿ.ವೈ.ಪಾಟೀಲ್‌ ಸ್ಟೇಡಿಯಂ
ಪಂದ್ಯ: ಸಂಜೆ 7.30ಕ್ಕೆ, 
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Latest Videos
Follow Us:
Download App:
  • android
  • ios