Asianet Suvarna News Asianet Suvarna News

IPL 2022: ಬಯೋಬಬಲ್‌ ಉಲ್ಲಂಘಿಸಿದರೆ 1 ಕೋಟಿ ರುಪಾಯಿ ದಂಡ, ಬಿಸಿಸಿಐನಿಂದ ಖಡಕ್ ನಿರ್ಧಾರ..!

* 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಮಾರ್ಚ್ 26ರಿಂದ ಆರಂಭ

* ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಬಯೋಬಬಲ್ ಉಲ್ಲಂಘಿಸಿದವರಿಗೆ ಕಾದಿದೆ ಭಾರೀ ಶಿಕ್ಷೆ

* ಫ್ರಾಂಚೈಸಿಗೆ ಬಿಸಿಸಿಐ ಭಾರೀ ಪ್ರಮಾಣದ ದಂಡ ವಿಧಿಸಲು ನಿರ್ಧರಿಸಿದೆ

IPL 2022 BCCI Strict Sanctions for Bio Bubble Breach Player will receive a heavy fine of up to Rs 1 crore kvn
Author
Bengaluru, First Published Mar 16, 2022, 1:18 PM IST

ಮುಂಬೈ(ಮಾ.16): ಈ ಬಾರಿ ಐಪಿಎಲ್‌ನಲ್ಲಿ ಬಯೋಬಬಲ್‌ (IPL Bio Bubble) ನಿಯಮ ಉಲ್ಲಂಘನೆ ಹಾಗೂ ಕೋವಿಡ್‌ ಪರೀಕ್ಷೆಗೆ ಗೈರಾಗುವ ಆಟಗಾರರು, ಫ್ರಾಂಚೈಸಿಗೆ ಬಿಸಿಸಿಐ ಭಾರೀ ಪ್ರಮಾಣದ ದಂಡ ವಿಧಿಸಲು ನಿರ್ಧರಿಸಿದೆ. ಕಳೆದ ಬಾರಿ ಬಬಲ್‌ನೊಳಗೇ ಕೋವಿಡ್‌ ಪತ್ತೆಯಾಗಿದ್ದರಿಂದ ಈ ಬಾರಿ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಲಿದೆ. ಯಾವುದೇ ಆಟಗಾರ, ಅಧಿಕಾರಿ ಬಯೋಬಬಲ್‌ ನಿಯಮ ಉಲ್ಲಂಘಿಸಿದರೆ ಅವರನ್ನು 7 ದಿನ ಕ್ವಾರಂಟೈನ್‌ ಮಾಡಲಾಗುತ್ತದೆ ಮತ್ತು ಅಷ್ಟು ದಿನಗಳ ಸಂಭಾವನೆ ನೀಡಲಾಗುವುದಿಲ್ಲ ಎನ್ನುವ ತೀರ್ಮಾನಕ್ಕೆ ಬಿಸಿಸಿಐ ಬಂದಿದೆ. 

2ನೇ ಬಾರಿ ಬಯೋಬಬಲ್‌ ನಿಯಮ ಉಲ್ಲಂಘಿಸಿದರೆ ಒಂದು ಪಂದ್ಯಕ್ಕೆ ಅಮಾನತು, 3ನೇ ಬಾರಿ ತಪ್ಪು ಮಾಡಿದರೆ ಅವರನ್ನು ಐಪಿಎಲ್‌ ಬಯೋಬಬಲ್‌ನಿಂದ ಹೊರಹಾಕಲಾಗುತ್ತದೆ ಮತ್ತು ಯಾವುದೇ ಬದಲಿ ಆಟಗಾರನನ್ನು ಸೇರಿಸುವ ಅವಕಾಶ ನೀಡದಿರಲು ಬಿಸಿಸಿಐ ನಿರ್ಧರಿಸಿದೆ. ಅಲ್ಲದೇ, ಸಂಬಂಧಿಸಿದ ಫ್ರಾಂಚೈಸಿಯು ಮೊದಲ ತಪ್ಪಿಗೆ 1 ಕೋಟಿ ರುಪಾಯಿ ದಂಡ ಪಾವತಿಸಬೇಕಿದ್ದು, 2ನೇ ಬಾರಿ ತಪ್ಪಿಗೆ ತಂಡದ 1 ಅಂಕ ಕಡಿತ ಮಾಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ಇನ್ನು ಕೋವಿಡ್‌ ಪರೀಕ್ಷೆ ತಪ್ಪಿಸಿಕೊಂಡರೆ ಮೊದಲ ಬಾರಿ ಎಚ್ಚರಿಕೆ ನೀಡಲಿದ್ದು, ಬಳಿಕ 75 ಸಾವಿರ ರುಪಾಯಿ ದಂಡ ವಿಧಿಸಲು ಬಿಸಿಸಿಐ ನಿರ್ಧರಿಸಿದೆ.

2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯನ್ನು ಬಿಸಿಸಿಐ (BCCI) ಭಾರತದಲ್ಲೇ ಆಯೋಜಿಸಿತ್ತು. ಆದರೆ ಟೂರ್ನಿಯ ಮಧ್ಯದಲ್ಲೇ ಕೆಲವು ಆಟಗಾರರಿಗೆ ಹಾಗೂ ಸಿಬ್ಬಂದಿಗಳಿಗೆ ಕೋವಿಡ್ 19 (COVID 19) ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಟೂರ್ನಿಯನ್ನು ಬಿಸಿಸಿಐ ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. ಇದಾದ ಬಳಿಕ ಇನ್ನುಳಿದ ಪಂದ್ಯಗಳನ್ನು ಬಿಸಿಸಿಐ ಯುಎಇನಲ್ಲಿ ಆಯೋಜಿಸಿತ್ತು. ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮಣಿಸಿದ ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ತಂಡವು ನಾಲ್ಕನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

IPL 2022: ಐಪಿಎಲ್‌ಗೆ ಸಿದ್ದತೆ ಶುರು, ಮುಂಬೈಗೆ ಬಹುತೇಕ ಆಟಗಾರರ ಆಗಮನ..!

ಇದೇ ಮಾರ್ಚ್ 26ರಿಂದ ಆರಂಭವಾಗಲಿರುವ 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಲೀಗ್‌ ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿದ್ದು, ಪ್ಲೇ-ಆಫ್‌ ಹಂತದಲ್ಲಿ 4 ಪಂದ್ಯಗಳು ಇರಲಿವೆ. ಮುಂಬೈನಲ್ಲಿರುವ ವಾಂಖೆಡೆ ಮೈದಾನ, ಡಿ.ವೈ. ಪಾಟೀಲ್ ಮೈದಾನ ಹಾಗೂ ಬ್ರಬೋರ್ನ್‌ ಮೈದಾನದಲ್ಲಿ ಒಟ್ಟು 55 ಐಪಿಎಲ್ ಲೀಗ್ ಪಂದ್ಯಗಳು ನಡೆದರೆ, ಇನ್ನುಳಿದ 15 ಲೀಗ್ ಪಂದ್ಯಗಳಿಗೆ ಪುಣೆ ಮೈದಾನ ಆತಿಥ್ಯವನ್ನು ವಹಿಸಲಿದೆ. 2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಹೊಸದಾಗಿ ಲಖನೌ ಸೂಪರ್‌ಜೈಂಟ್ಸ್‌ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಸೇರಿದಂತೆ ಒಟ್ಟು 10 ತಂಡಗಳು ಪಾಲ್ಗೊಳ್ಳುತ್ತಿವೆ.

ಫಿಟ್ನೆಸ್‌ ಟೆಸ್ಟ್‌ ಪಾಸಾದರಷ್ಟೇ ಐಪಿಎಲ್‌ಗೆ ಹಾರ್ದಿಕ್‌ ಪಾಂಡ್ಯ?

ಗುಜರಾತ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಅವರಿಗೆ ಐಪಿಎಲ್‌ನಲ್ಲಿ ಆಡುವುದಕ್ಕೂ ಮುನ್ನ ಫಿಟ್ನೆಸ್‌ ಪರೀಕ್ಷೆಯಲ್ಲಿ ಪಾಸಾಗುವಂತೆ ಬಿಸಿಸಿಐ ತಾಕೀತು ಮಾಡಿದೆ. ಬೆಂಗಳೂರಿನ ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿರುವ ಅವರಿಗೆ ಕನಿಷ್ಠ 10 ಓವರ್‌ ಬೌಲ್‌ ಮಾಡಬೇಕು, ಯೋ-ಯೋ ಟೆಸ್ಟ್‌ನಲ್ಲಿ ಉತ್ತೀರ್ಣರಾಗಬೇಕು. ಆಗ ಮಾತ್ರ ಐಪಿಎಲ್‌ನಲ್ಲಿ ಆಡಲು ಅನುಮತಿ ನೀಡುವುದಾಗಿ ಎನ್‌ಸಿಎ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಬಿಸಿಸಿಐ ಕೇಂದ್ರ ಗುತ್ತಿಗೆ ಹೊಂದಿರುವ ಆಟಗಾರರು ಐಪಿಎಲ್‌ನಲ್ಲಿ ಆಡುವ ಮೊದಲು ಫಿಟ್ನೆಸ್‌ ಪರೀಕ್ಷೆಯಲ್ಲಿ ಪಾಸಾಗುವುದು ಕಡ್ಡಾಯ.

Follow Us:
Download App:
  • android
  • ios