Asianet Suvarna News Asianet Suvarna News

IPL 2022: ಐಪಿಎಲ್‌ಗೆ ಸಿದ್ದತೆ ಶುರು, ಮುಂಬೈಗೆ ಬಹುತೇಕ ಆಟಗಾರರ ಆಗಮನ..!

* 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಭರದ ಸಿದ್ದತೆ 

* ಬಹುತೇಕ ಎಲ್ಲಾ ಆಟಗಾರರು ಮುಂಬೈಗೆ ಆಗಮನ

* 3 ದಿನಗಳ ಕಠಿಣ ಕ್ವಾರಂಟೈನ್ ಬಳಿಕ ಬಯೋ ಬಬಲ್ ಪ್ರವೇಶ

 

IPL 2022 Preparation begins All 10 Teams To Undergo Mandatory 3 day Hard Quarantine Before Entering Bio bubble kvn
Author
Bengaluru, First Published Mar 16, 2022, 8:35 AM IST

ಮುಂಬೈ(ಮಾ.16): 15ನೇ ಆವೃತ್ತಿಯ ಐಪಿಎಲ್‌ (IPL 2022) ಟಿ20 ಟೂರ್ನಿ ಆರಂಭಗೊಳ್ಳಲು ಇನ್ನು 10 ದಿನ ಮಾತ್ರ ಬಾಕಿ ಇದೆ. ಈಗಾಗಲೇ ಎಲ್ಲಾ ತಂಡಗಳು ಮುಂಬೈನಲ್ಲಿ ತಮಗೆ ನಿಗದಿ ಮಾಡಿರುವ ಹೋಟೆಲ್‌ ತಲುಪಿವೆ. ಲಭ್ಯರಿದ್ದ ಆಟಗಾರರೊಂದಿಗೆ ವಾರದ ಹಿಂದೆಯೇ ಅಭ್ಯಾಸ ಆರಂಭಿಸಿದ್ದ ತಂಡಗಳಿಗೆ ಒಬ್ಬೊಬ್ಬರೆ ತಾರಾ ಆಟಗಾರರು ಸೇರಿಕೊಳ್ಳುತ್ತಿದ್ದು, ತಂಡಗಳ ಸಿದ್ಧತೆ ಇನ್ನು ತೀವ್ರತೆ ಪಡೆದುಕೊಳ್ಳಲಿದೆ. ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯು ಮಾರ್ಚ್‌ 26ರಿಂದ ಆರಂಭವಾಗಲಿದ್ದು, ಮುಂಬೈನ ವಾಂಖೆಡೆ ಮೈದಾನದಲ್ಲಿ ಆರಂಭವಾಗಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ಹಾಗೂ ಕೋಲ್ಕತಾ ನೈಟ್ ರೈಡರ್ಸ್‌ (Kolkata Knight Riders) ತಂಡಗಳು ಸೆಣಸಾಟ ನಡೆಸಲಿವೆ

ವಿದೇಶಗಳಿಂದ ಆಗಮಿಸಿದ ಆಟಗಾರರಿಗೆ 5 ದಿನ, ಭಾರತೀಯ ಆಟಗಾರರಿಗೆ 3 ದಿನಗಳ ಕಠಿಣ ಕ್ವಾರಂಟೈನ್‌ ಸೂಚಿಸಲಾಗಿದೆ. ಇನ್ನು ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್‌ ಮೂರೇ ದಿನಕ್ಕೆ ಮುಕ್ತಾಯಗೊಂಡ ಬಳಿಕ ಭಾರತ ತಂಡದ ಆಟಗಾರರು ಬೆಂಗಳೂರಿನಿಂದ ನೇರವಾಗಿ ಮುಂಬೈಗೆ ತೆರಳಿದ್ದು, ತಮ್ಮ ತಮ್ಮ ಐಪಿಎಲ್‌ ತಂಡಗಳನ್ನು ಕೂಡಿಕೊಂಡಿದ್ದಾರೆ. ಮಂಗಳವಾರ ಮುಂಬೈ ತಂಡದ ನಾಯಕ ರೋಹಿತ್‌ ಶರ್ಮಾ(Rohit Sharma), ತಾರಾ ವೇಗಿ ಜಸ್‌ಪ್ರೀತ್‌ ಬುಮ್ರಾ (Jasprit Bumrah) ತಂಡ ಕೂಡಿಕೊಂಡರು. ಆರ್‌ಸಿಬಿ ಮಾಜಿ ನಾಯಕ ವಿರಾಟ್‌ ಕೊಹ್ಲಿ ಸಹ ತಂಡ ಸೇರಿಕೊಂಡಿದ್ದಾರೆ ಎನ್ನಲಾಗಿದೆ.

10 ದಿನಗಳ ಹಿಂದೆಯೇ ಸೂರತ್‌ನಲ್ಲಿ ಅಭ್ಯಾಸ ಶಿಬಿರ ಆರಂಭಿಸಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌, ಮುಂಬೈಗೆ ಆಗಮಿಸಿ ನೆಟ್ಸ್‌ನಲ್ಲಿ ಬೆವರಿಳಿಸುತ್ತಿದೆ. ಮುಂಬೈ ತಂಡವೂ ಮಂಗಳವಾರ ಅಭ್ಯಾಸ ಶಿಬಿರಕ್ಕೆ ಚಾಲನೆ ನೀಡಿತು. ರಾಜಸ್ಥಾನ ರಾಯಲ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌, ಕೆಕೆಆರ್‌, ಸನ್‌ರೈಸರ್ಸ್‌, ಹೊಸದಾಗಿ ಸೇರ್ಪಡೆಗೊಂಡಿರುವ ಗುಜರಾತ್‌ ಹಾಗೂ ಲಖನೌ ತಂಡಗಳು ಸಹ ಕಠಿಣ ಅಭ್ಯಾಸದಲ್ಲಿ ನಿರತವಾಗಿವೆ.

IPL 2022: ಸಹಾಯಕ ಕೋಚ್ ಆಗಿ ಡೆಲ್ಲಿ ಕ್ಯಾಪಿಟಲ್ಸ್ ಕೂಡಿಕೊಂಡ ಶೇನ್ ವಾಟ್ಸನ್‌..!

ಹೊಸ ಜೆರ್ಸಿಗಳೊಂದಿಗೆ ಕಣಕ್ಕೆ

ಈ ಬಾರಿ ಐಪಿಎಲ್‌ನಲ್ಲಿ ಬಹುತೇಕ ತಂಡಗಳು ಹೊಸ ವಿನ್ಯಾಸದ ಜೆರ್ಸಿಗಳೊಂದಿಗೆ ಕಣಕ್ಕಿಳಿಯಲಿವೆ. ಪ್ರಮುಖವಾಗಿ ರಾಜಸ್ಥಾನ, ಡೆಲ್ಲಿ, ಆರ್‌ಸಿಬಿ ತಂಡಗಳ ಜೆರ್ಸಿಗಳ ವಿನ್ಯಾಸ ಬದಲಾಗಿದೆ. ಲಖನೌ ಹಾಗೂ ಗುಜರಾತ್‌ ತಂಡಗಳು ಜೆರ್ಸಿ ಅನಾವರಣಗೊಳಿಸಿದ್ದು, ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳ ಮನಸೆಳೆದಿವೆ.

ಮೊದಲ ಪಂದ್ಯಕ್ಕೆ ಸೂರ್ಯಕುಮಾರ್ ಯಾದವ್ ಅಲಭ್ಯ?

ನವದೆಹಲಿ: ಮುಂಬೈ ಇಂಡಿಯನ್ಸ್‌ ತಾರಾ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಮಾ.27ರ ಆರಂಭಿಕ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಇತ್ತೀಚೆಗೆ ವೆಸ್ಟ್‌ಇಂಡೀಸ್‌ ವಿರುದ್ಧದ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್‌ ಕೈ ಬೆರಳಿಗೆ ಗಾಯವಾಗಿತ್ತು. ‘ಸದ್ಯ ಸೂರ್ಯ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿದ್ದರೂ ಆರಂಭಿಕ ಪಂದ್ಯಕ್ಕೆ ಗೈರಾಗುವ ಸಾಧ್ಯತೆಯಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಮುಂಬೈನ 2ನೇ ಪಂದ್ಯ ಎ.2ಕ್ಕೆ ರಾಜಸ್ಥಾನ ವಿರುದ್ಧ ನಿಗದಿಯಾಗಿದ್ದು, ಅದಕ್ಕೂ ಮೊದಲು ಅವರು ಫಿಟ್‌ ಆಗುವ ನಿರೀಕ್ಷೆ ಇದೆ.

ಫಿಟ್ನೆಸ್‌ ಟೆಸ್ಟ್‌ ಪಾಸಾದರಷ್ಟೇ ಐಪಿಎಲ್‌ಗೆ ಹಾರ್ದಿಕ್‌ ಪಾಂಡ್ಯ?

ಗುಜರಾತ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಅವರಿಗೆ ಐಪಿಎಲ್‌ನಲ್ಲಿ ಆಡುವುದಕ್ಕೂ ಮುನ್ನ ಫಿಟ್ನೆಸ್‌ ಪರೀಕ್ಷೆಯಲ್ಲಿ ಪಾಸಾಗುವಂತೆ ಬಿಸಿಸಿಐ (BCCI) ತಾಕೀತು ಮಾಡಿದೆ. ಬೆಂಗಳೂರಿನ ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿರುವ ಅವರಿಗೆ ಕನಿಷ್ಠ 10 ಓವರ್‌ ಬೌಲ್‌ ಮಾಡಬೇಕು, ಯೋ-ಯೋ ಟೆಸ್ಟ್‌ನಲ್ಲಿ (Yo Yo Test) ಉತ್ತೀರ್ಣರಾಗಬೇಕು. ಆಗ ಮಾತ್ರ ಐಪಿಎಲ್‌ನಲ್ಲಿ ಆಡಲು ಅನುಮತಿ ನೀಡುವುದಾಗಿ ಎನ್‌ಸಿಎ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಬಿಸಿಸಿಐ ಕೇಂದ್ರ ಗುತ್ತಿಗೆ ಹೊಂದಿರುವ ಆಟಗಾರರು ಐಪಿಎಲ್‌ನಲ್ಲಿ ಆಡುವ ಮೊದಲು ಫಿಟ್ನೆಸ್‌ ಪರೀಕ್ಷೆಯಲ್ಲಿ ಪಾಸಾಗುವುದು ಕಡ್ಡಾಯ.
 

Follow Us:
Download App:
  • android
  • ios