IPL 2022 ಬರೋಬ್ಬರಿ 8 ಸಿಕ್ಸರ್, ರಸೆಲ್ ಅಬ್ಬರದಿಂದ ಕೆಕೆಆರ್‌ಗೆ ಭರ್ಜರಿ ಗೆಲುವು!
ಕೆಕೆಆರ್ ಹಾಗೂ ಪಂಜಾಬ್ ನಡುವಿನ ರೋಚಕ ಪಂದ್ಯ
ಆ್ಯಂಡ್ರೆ ರಸೆಲ್ ಅಬ್ಬರಕ್ಕೆ ಸೋತು ಸುಣ್ಣವಾದ ಪಂಜಾಬ್
31 ಎಸೆತದಲ್ಲಿ 70 ರನ್ ಸಿಡಿಸಿದ ಆ್ಯಂಡ್ರೆ ರಸೆಲ್
ಮುಂಬೈ(ಏ.01): ಒಂದಲ್ಲ, ಎರಡಲ್ಲ, ಬರೋಬ್ಬರಿ 8 ಸಿಕ್ಸರ್..ಇದು ಪಂಜಾಬ್ ಕಿಂಗ್ಸ್ ವಿರುದ್ಧ ಆ್ಯಂಡ್ರೆ ರಸೆಲ್ ಮಸಲ್ ಪವರ್. ಆ್ಯಂಡ್ರೆ ರಸೆಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಕೋಲ್ಕತಾ ನೈಟ್ ರೈಡರ್ಸ್ 6 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ರಸೆಲ್ 31 ಎಸೆತದಲ್ಲಿ ಅಜೇಯ 70 ರನ್ ಸಿಡಿಸುವ ಮೂಲಕ ಕೆಕೆಆರ್ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
ಗೆಲುವಿನ ಟಾರ್ಗೆಟ್ 138 ರನ್ ಮಾತ್ರ. ಉಮೇಶ್ ಯಾದವ್ ಬೌಲಿಂಗ್ ನೆರವಿನಿಂದ ಕೆಕೆಆರ್ ಸುಲಭ ಗುರಿ ಪಡೆದಿತ್ತು. ಆದರೆ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಕೋಲ್ಕತಾ ನೈಟ್ ರೈಡರ್ಸ್ ಕೂಡ ಆತಂಕ ಎದುರಿಸಿತು. ಅಜಿಂಕ್ಯ ರಹಾನೆ 12 ರನ್ ಸಿಡಿಸಿ ಔಟಾದರು. ಕಾಗಿಸೋ ರಬಾಡ ದಾಳಿಗೆ ರಹಾನೆ ವಿಕೆಟ್ ಕೈಚೆಲ್ಲಿದರು. ಆದರೆ ರಸೆಲ್ ಹೋರಾಟದಿಂದ ಕೆಕೆಆರ್ ಸುಲಭ ಗೆಲುವು ದಾಖಲಿಸಿತು.
IPL 2022: ಆಯುಷ್ ಬದೋನಿ ರಾತ್ರೋ ರಾತ್ರಿ ಹೀರೋ ಆಗಿದ್ದೇಗೆ..?
ವೆಂಕಟೇಶ್ ಅಯ್ಯರ್ ಕೇವಲ 3 ರನ್ ಸಿಡಿಸಿ ನಿರ್ಗಮಿಸಿದರು. ತಂಡಕ್ಕೆ ಆಸರೆಯಾಗಿದ್ದ ನಾಯಕ ಶ್ರೇಯಸ್ ಅಯ್ಯರ್ ದಿಟ್ಟ ಹೋರಾಟ ನೀಡುವ ಸೂಚನೆ ನೀಡಿದರು. ಆದರೆ ಅಯ್ಯರ್ 15 ಎಸೆತದಲ್ಲಿ 25 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ನಿತೀಶ್ ರಾಣಾ ಡಕೌಟ್ ಆದರು. ಈ ಮೂಲಕ 51 ರನ್‌ಗಳಗೆ ಕೋಲ್ಕತಾ ನೈಟ್ ರೈರ್ಸ್ ಪ್ರಮುಖ 4 ವಿಕೆಟ್ ಕಳೆದುಕೊಂಡಿತು.
ಆ್ಯಂಡ್ರೆ ರಸೆಲ್ ಹಾಗೂ ಸ್ಯಾಮ್ ಬಿಲ್ಲಿಂಗ್ಸ್ ನಡುವಿನ ಜೊತೆಯಾಟ ಕೋಲ್ಕತಾ ನೈಟ್ ರೈಡರ್ಸ್ ತಂಡದ ಗೆಲುವಿನ ಹಾದಿ ಸುಗಮಗೊಳಿಸಿತು. ರಸೆಲ್ ಬೌಂಡರಿ ಸಿಕ್ಸರ್ ಮೂಲಕ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಬಿಲ್ಲಿಂಗ್ಸ್ ಉತ್ತಮ ಸಾಥ್ ನೀಡಿದರು.
ಆ್ಯಂಡ್ರೆ ರಸೆಲ್ ಅಬ್ಬರಿಂದ ಕೋಲ್ಕತಾ ನೈಟ್ ರೈಡರ್ಸ್ 14.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆ್ಯಂಡ್ರೆ ರೆಸೆಲ್ 31 ಎಸೆತದಲ್ಲಿ ಅಜೇಯ 70 ರನ್ ಸಿಡಿಸಿದರು. ಸ್ಯಾಮ್ ಬಿಲ್ಲಿಂಗ್ಸ್ 23 ಎಸೆತದಲ್ಲಿ ಅಜೇಯ 24 ರನ್ ಸಿಡಿಸಿದರು.
ಚೆನ್ನೈ ಬೌಲಿಂಗ್ ಚಿತ್ರಾನ್ನ, ಐಪಿಎಲ್ ಇತಿಹಾಸದ 4ನೇ ಯಶಸ್ವಿ ಚೇಸಿಂಗ್ ನಡೆಸಿದ ಕೆಎಲ್ ರಾಹುಲ್ ಟೀಮ್!
ರಸೆಲ್ 31 ಎಸೆತದಲ್ಲಿ 8 ಸಿಕ್ಸರ್ ಹಾಗೂ 2 ಬೌಂಡರಿ ಸಿಡಿಸಿದರು. ಆರಂಭಿಕ ಆಘಾತ ಅನುಭವಿಸಿದರೂ ರಸೆಲ್ ಮಸಲ್ ಪವರ್ ಕೋಲ್ಕತಾ ತಂಡ 14.3 ಓವರ್‌ಗಳಲ್ಲಿ ಪಂದ್ಯ ಮುಗಿಸಿತು. ಈ ಮೂಲಕ 3 ಪಂದ್ಯದಲ್ಲಿ 2 ಗೆಲುವು ಸಾಧಿಸಿದ ಕೆಕೆಆರ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಉಮೇಶ್ ಯಾದವ್ ದಾಳಿಗೆ ತತ್ತರಿಸಿತ್ತು. ಕೋಲ್ಕತಾ ನೈಟ್ ರೈಡರ್ಸ್ ಅದ್ಭುತ ಬೌಲಿಂಗ್ ದಾಳಿಯಿಂದ ಪಂಜಾಬ್ 18.2 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲೌಟ್ ಆಗಿತ್ತು.
ನಾಯಕ ಮಯಾಂಕ್ ಅಗರ್ವಾಲ್ 1, ಶಿಖರ್ ಧವನ್ 16 ರನ್ ಸಿಡಿಸಿ ಔಟಾದರು.ಭಾನುಕ ರಾಜಪಕ್ಸ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 9 ಎಸೆತದಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಮೂಲಕ 31 ರನ್ ಸಿಡಿಸಿದರು. ಲಿಯಾಮ್ ಲಿವಿಂಗ್ ಸ್ಟೋನ್ 19 ರನ್ ಗಳಿಸಿ ಔಟಾದರು. ರಾಜ್ ಬಾವಾ 11 ರನ್ ಸಿಡಿಸಿ ನಿರ್ಗಮಿಸಿದರು.
ಶಾರುಖ್ ಖಾನ್ ಡಕೌಟ್ ಆದರೆ ಹರ್ಪ್ರೀತ್ ಬ್ರಾರ್ 14 ರನ್ ಕಾಣಿಕೆ ನೀಡಿದರು. ರಾಹುಲ್ ಚಹಾರ್ ಡಕೌಟ್‌ಗೆ ಬಲಿಯಾದರು. ಅಂತಿಮ ಹಂತದಲ್ಲಿ ಕಾಗಿಸೋ ರಬಾಡ ಅಬ್ಬರಿಸಿದರು. 4 ಬೌಂಡರಿ 1 ಸಿಕ್ಸರ್ ಮೂಲಕ 16 ಎಸೆತದಲ್ಲಿ 25 ರನ್ ಸಿಡಿಸಿ ಔಟಾದರು. ಅರ್ಶದೀಪ್ ಸಿಂಗ್ ರನೌಟ್‌ಗೆ ಬಲಿಯಾದರೆ, ಒಡೆನ್ ಸ್ಮಿತ್ ಅಜೇಯ 9 ರನ್ ಸಿಡಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ 137 ರನ್‌ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.