* ಡೆಲ್ಲಿ ವರ್ಸಸ್ ಹೈದರಾಬಾದ್ ನಡುವಿನ ಪಂದ್ಯಕ್ಕೆ ಕ್ಷಣಗಣನೆ* ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದೆ ಸನ್‌ರೈಸರ್ಸ್ ಹೈದರಾಬಾದ್ ತಂಡ* ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳಲು ತುದಿಗಾಲಿನಲ್ಲಿ ಇಂತಿದೆ ಡೆಲ್ಲಿ ಕ್ಯಾಪಿಟಲ್ಸ್
ದುಬೈ(ಸೆ.22): ಐಪಿಎಲ್ 14ನೇ ಆವೃತ್ತಿಯ ಪ್ಲೇ-ಆಫ್ ರೇಸ್‌ನಲ್ಲಿ ಉಳಿಯುವ ಸಣ್ಣ ವಿಶ್ವಾಸವಿರಿಸಿಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್(Sunrisers Hyderabad) ತಂಡ, ಭಾಗ-2ರಲ್ಲಿ ತನ್ನ ಅಭಿಯಾನ ಆರಂಭಿಸಲು ಸಿದ್ಧವಾಗಿದೆ. ಆಡಿರುವ 7 ಪಂದ್ಯಗಳಲ್ಲಿ 6ರಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿರುವ ಹೈದರಾಬಾದ್‌ಗೆ ಮೊದಲ ಪಂದ್ಯದಲ್ಲೇ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ಎದುರಾಗಲಿದೆ.
ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಈಗಾಗಲೇ ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಈ ಪಂದ್ಯ ಗೆದ್ದರೆ ಮೊದಲ ಸ್ಥಾನಕ್ಕೇರುವುದರ ಜೊತೆಗೆ ಪ್ಲೇ-ಆಫ್‌ನಲ್ಲಿ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಳ್ಳಲಿದೆ. ಸನ್‌ರೈಸರ್ಸ್ ಪ್ಲೇ-ಆಫ್ ಆಸೆ ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಬಾಕಿ ಇರುವ 7 ಪಂದ್ಯಗಳಲ್ಲೂ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಲಿದೆ. ಅಗ್ರ 4ರಲ್ಲಿ ಸ್ಥಾನಕ್ಕಾಗಿ ಪೈಪೋಟಿ ಹೆಚ್ಚಿರುವ ಕಾರಣ, ಉತ್ತಮ ನೆಟ್ ರನ್‌ರೇಟ್ ಸಹ ಕಾಪಾಡಿಕೊಳ್ಳಬೇಕು. ಒಂದೊಮ್ಮೆ ಈ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಪಡೆ ಸೋತರೆ ಪ್ಲೇ-ಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಂತೆಯೇ ಲೆಕ್ಕ.
IPL 2021:ಅಂತಿಮ ಹಂತದಲ್ಲಿ ಪಂದ್ಯ ಕೈಚೆಲ್ಲಿದ ಪಂಜಾಬ್, ರಾಜಸ್ಥಾನಕ್ಕೆ 2 ರನ್ ರೋಚಕ ಗೆಲುವು!
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಸ್ಟೀವ್ ಸ್ಮಿತ್, ಹೆಟ್ಮೇಯರ್, ಸ್ಟೋಯ್ನಿಸ್ ಹೀಗೆ ಘಟಾನುಘಟಿ ಬ್ಯಾಟ್ಸ್‌ಮನ್‌ಗಳ ದಂಡೇ ಇದೆ. ರಬಾಡ, ನೋಕಿಯ, ಅಶ್ವಿನ್‌ರಂತಹ ಅನುಭವಿ ಬೌಲರ್‌ಗಳೂ ಇದ್ದಾರೆ. ಸನ್‌ರೈಸರ್ಸ್ ವಿಲಿಯಮ್ಸನ್, ವಾರ್ನರ್, ಪಾಂಡೆ, ರಶೀದ್ ಖಾನ್ ಮೇಲೆ ಹೆಚ್ಚು ಅವಲಂಬಿತಗೊಂಡಿದೆ.
ಸಂಭವನೀಯ ಆಟಗಾರರ ಪಟ್ಟಿ
ಡೆಲ್ಲಿ: ಪೃಥ್ವಿ ಶಾ, ಧವನ್, ಅಯ್ಯರ್, ಸ್ಮಿತ್/ಹೆಟ್ಮೇಯರ್, ಪಂತ್(ನಾಯಕ), ಸ್ಟೋಯ್ನಿಸ್, ಅಶ್ವಿನ್, ಅಕ್ಷರ್, ರಬಾಡ, ನೋಕಿಯ, ಆವೇಶ್ ಖಾನ್.
ಸನ್‌ರೈಸರ್ಸ್: ವಾರ್ನರ್, ಸಾಹ, ವಿಲಿಯಮ್ಸನ್(ನಾಯಕ), ಪಾಂಡೆ, ಶಂಕರ್, ನಬಿ/ಹೋಲ್ಡರ್, ಸಮದ್, ರಶೀದ್, ಭುವನೇಶ್ವರ್, ಸಂದೀಪ್, ಖಲೀಲ್.
ಸ್ಥಳ: ದುಬೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
