* ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ವೇಗಿ ಸಂದೀಪ್ ಶರ್ಮಾ* ಬಾಲ್ಯ ಕಾಲದ ಗೆಳತಿ ತಾಷಾ ಸಾತ್ವಿಕ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೇಗಿ* 2018ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ
ನವದೆಹಲಿ(ಆ.20): ಟೀಂ ಇಂಡಿಯಾ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗಿ ಸಂದೀಪ್ ಶರ್ಮಾ ತಮ್ಮ ಬಹುಕಾಲದ ಗೆಳತಿ ತಾಷಾ ಸಾತ್ವಿಕ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಈ ಜೋಡಿಗೆ ಶುಭ ಹಾರೈಸಿದೆ.
ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಈ ಜೋಡಿಯ ಫೋಟೋದೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ, ಸನ್‌ರೈಸರ್ಸ್ ಕುಟುಂಬಕ್ಕೆ ಹೊಸ ಸೇರ್ಪಡೆ. ಮಿಸ್ಟರ್ & ಮಿಸಸ್ ಶರ್ಮಾಗೆ ಅಭಿನಂದನೆಗಳು ಜೀವನಪರ್ಯಂತ ಜತೆಯಾಗಿರಿ ಎಂದು ಟ್ವೀಟ್ ಮೂಲಕ ಶುಭ ಹಾರೈಸಿದೆ.
ತಾಷಾ ಸಾತ್ವಿಕ್ ವೃತ್ತಿಯಲ್ಲಿ ಆಭರಣ ವಿನ್ಯಾಸಕಾರ್ತಿಯಾಗಿದ್ದಾರೆ. ಮದುವೆ ಫೋಟೋದಲ್ಲಿ ವೇಗಿ ಸಂದೀಪ್ ಶರ್ಮಾ ಬಿಳಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರೆ, ತಾಷಾ ಆರೆಂಜ್ ಬಣ್ಣದ ಸೀರೆ ಹಾಗೂ ಆಭರಣದಲ್ಲಿ ಕಂಗೊಳಿಸಿದ್ದಾರೆ. 2018ರಲ್ಲೇ ಈ ಜೋಡಿ ಉಂಗುರ ಬದಲಾಯಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಸಂದೀಪ್ ಶರ್ಮಾ ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ತಮ್ಮ ನಿಶ್ಚಿತಾರ್ಥ ವಿಚಾರವನ್ನು ಖಚಿತಪಡಿಸಿದ್ದರು.
ಆಸ್ಟ್ರೇಲಿಯಾದ ಈ ಇಬ್ಬರು ಆರ್‌ಸಿಬಿ ಕ್ರಿಕೆಟಿಗರು ಐಪಿಎಲ್ ಭಾಗ-2 ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ..!
ಸಂದೀಪ್ ಶರ್ಮಾ ಕ್ರಿಕೆಟ್ ಜೀವನ ಪಟಿಯಾಲಾದ ಸರ್ಕಾರಿ ಶಾಲೆಯಿಂದಲೇ ಆರಂಭವಾಯಿತು. 2013ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಸಂದೀಪ್ ಶರ್ಮಾ ಇಲ್ಲಿಯವರೆಗೆ 95 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಸಂದೀಪ್ ಶರ್ಮಾ ಸದ್ಯ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಇದುವರೆಗೂ ಒಟ್ಟು 95 ಐಪಿಎಲ್ ಪಂದ್ಯಗಳನ್ನಾಡಿ 7.8ರ ಎಕನಮಿಯಲ್ಲಿ ರನ್ ನೀಡಿ 110 ವಿಕೆಟ್ ಕಬಳಿಸಿದ್ದಾರೆ. ಐಪಿಎಲ್‌ನಲ್ಲಿ 100+ ವಿಕೆಟ್ ಕಬಳಿಸಿದ 6ನೇ ಭಾರತೀಯ ವೇಗದ ಬೌಲರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಇನ್ನು ಸಂದೀಪ್ ಶರ್ಮಾ 2015ರಲ್ಲಿ ಜಿಂಬಾಬ್ವೆ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.
