ಆಲ್ರೌಂಡರ್ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಪಂಜಾಬ್ ವಿರುದ್ಧದ ಭರ್ಜರಿ ಗೆಲುವಿನಿಂದ ಡೆಲ್ಲಿ ಈ ಬಡ್ತಿ ಪಡೆದಿದೆ. ಆದರೆ ನಾಯಕನಾಗಿ ಆಟವಾಡಿ ಅಜೇಯ 99 ರನ್ ಸಿಡಿಸಿದ ಮಯಾಂಕ್ ಹೋರಾಟ ವ್ಯರ್ಥವಾಗಿದೆ.

ಅಹಮ್ಮದಾಬಾದ್(ಮೇ.02): ಪಂಜಾಬ್ ಕಿಂಗ್ಸ್ ವಿರುದ್ಧ ಶಿಖರ್ ಧವನ್ ಅಬ್ಬರ, ಪೃಥ್ವಿ ಶಾ ಹಾಗೂ ಸ್ಟೀವ್ ಸ್ಮಿತ್ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ ಡೆಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಗೆಲುವಿಗೆ 167 ರನ್ ಟಾರ್ಗೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆಯಿತು. ಶಿಖರ್ ಧವನ್ ಹಾಗೂ ಪೃಥ್ವಿ ಶಾ ಮೊದಲ ವಿಕೆಟ್‌ಗೆ 63 ರನ್ ಜೊತೆಯಾಟ ನೀಡಿದರು. ಶಾ 39 ರನ್ ಸಿಡಿಸಿ ಔಟಾದರು. ನಂತರ ಬಂದ್ ಸ್ಟೀವ್ ಸ್ಮಿತ್ ಉತ್ತಮ ಸಾಥ್ ನೀಡಿದರು.

ಧವನ್ ಹೋರಾಟ ಮುಂದುವರಿಸಿದರು. ಆಕರ್ಷ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇತ್ತ ಸ್ಮಿತ್ 24 ರನ್ ಸಿಡಿಸಿ ಔಟಾದರೆ, ನಾಯಕ ರಿಷಪ್ ಪಂತ್ 14 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಡಲ್ಲಿ ಯಾವ ಹಂತದಲ್ಲೂ ಆತಂಕ ಎದರಿಸಲಿಲ್ಲ.

ಶಿಮ್ರೋನ್ ಹೆಟ್ಮೆಯರ್ ಜೊತೆ ಸೇರಿದ ಧವನ್ ಡೆಲ್ಲಿ ತಂಡದ ಗೆಲುವು ಖಚಿತಪಡಿಸಿದರು. ಧವನ್ ಅಜೇಯ 69 ರನ್ ಸಿಡಿಸಿದರೆ, ಹೆಟ್ಮೆಯರ್ ಅಜೇಯ 16 ರನ್ ಸಿಡಿಸಿದರು. ಈ ಮೂಲಕ ಡೆಲ್ಲಿ 17.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.