ಚೆನ್ನೈ(ಏ.10):  14ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಬಲಿಷ್ಠ ತಂಡ ಅನ್ನೋದನ್ನು ಸಾಬೀತು ಪಡಿಸಿದೆ. ಈ ಬಾರಿ ತನ್ನ ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದೆ.  ಚೆನ್ನೈ ನೀಡಿದ 189 ರನ್ ಟಾರ್ಗೆಟನ್ನು ಡೆಲ್ಲಿ ಕ್ಯಾಪಿಟಲ್ಸ್ ಕೇವಲ 2 ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ತಲುಪಿದೆ.

189 ರನ್ ಟಾರ್ಗೆಟ್ ಪಡೆದ ಡೆಲ್ಲಿ ತಂಡ ಯಾವ ಹಂತದಲ್ಲೂ ಆತಂಕ್ಕೆ ಒಳಗಾಗಲಿಲ್ಲ. ಕಾರಣ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಆರಂಭಿಕ ಜೊತೆಯಾಟ ಡೆಲ್ಲಿ ತಂಡದ ಹಾದಿ ಸುಗಮಗೊಳಿಸಿತು. ಮೊದಲ ವಿಕೆಟ್‌ಗೆ ಈ ಜೋಡಿ 138 ರನ್ ಸಿಡಿಸಿತು. ಪೃಥ್ವಿ ಶಾ 38 ಎಸೆತದಲ್ಲಿ 72 ರನ್ ಸಿಡಿಸಿದರು.

ದಿಟ್ಟ ಪ್ರದರ್ಶನ ನೀಡಿದ ಶಿಖರ್ ಧವನ್ 54 ಎಸೆತದಲ್ಲಿ 85 ರನ್ ಚಚ್ಚಿದರು. ಧವನ್ ಹಾಗೂ ಪೃಥ್ವಿ ಶಾ ಬ್ಯಾಟಿಂಗ್ ಪದರ್ಶನಕ್ಕೆ ಚೆನ್ನೈ ಸುಸ್ತಾಯಿತು. ಆರಂಭಿಕರನ್ನು ಡ್ವೇನ್ ಬ್ರಾವೋ ಹಾಗೂ ಶಾರ್ದೂಲ್ ಠಾಕೂರ್ ಪೆವಿಲಿಯನ್ ಕಳುಹಿಸಿದರು. ಇದರ ಲಾಭ ಚೆನ್ನೈ ತಂಡಕ್ಕೆ ಆಗಲಿಲ್ಲ. ಕಾರಣ ಅಷ್ಟರಲ್ಲಾಗಲೇ ಡೆಲ್ಲಿ ಗೆಲುವಿನ ಹಾದಿ ಸುಗಮಗೊಂಡಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಅಂತಿಮ 12 ಎಸೆತದಲ್ಲಿ 7 ರನ್ ಅವಶ್ಯಕತೆ ಇತ್ತು. ರಿಷಬ್ ಪಂತ್ ಹಾಗೂ ಮಾರ್ಕಸ್ ಸ್ಟೊಯ್ನಿಸ್ ಜೊತೆಯಾಟದಿಂದ ಡೆಲ್ಲಿ 18.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿತಲುಪಿತು. 8 ವಿಕೆಟ್ ಭರ್ಜರಿ ಗೆಲುವು ದಾಖಿಲಿಸಿದ ಡೆಲ್ಲಿ 14ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿತು.