ಚೆನ್ನೈ(ಏ.14): ಮುಂಬೈ ಇಂಡಿಯನ್ಸ್‌ ಎದುರು ಆಘಾತಕಾರಿ ಸೋಲು ಕಂಡ ಬಗ್ಗೆ ಕೋಲ್ಕತ ನೈಟ್ ರೈಡರ್ಸ್‌ ತಂಡದ ಸಹ ಮಾಲೀಕ ಶಾರುಖ್‌ ಖಾನ್‌ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

ಹೌದು, ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ದ ಇಯಾನ್‌ ಮಾರ್ಗನ್ ನೇತೃತ್ವದ ಕೋಲ್ಕತ ನೈಟ್‌ ರೈಡರ್ಸ್‌ ತಂಡವು 10 ರನ್‌ಗಳ ಆಘಾತಕಾರಿ ಸೋಲು ಕಂಡಿತು. ರಸೆಲ್‌, ಶಕೀಬ್‌, ಕಾರ್ತಿಕ್‌ ಹಾಗೂ ಕಮಿನ್ಸ್ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರಿದ್ದೂ ಕೊನೆಯ 30 ಎಸೆತಗಳಲ್ಲಿ ಕೆಕೆಆರ್‌ 31 ರನ್‌ ಬಾರಿಸಲು ವಿಫಲವಾಯಿತು. ಕೆಕೆಆರ್ ತಂಡದ ಈ ದಯಾನೀಯ ವೈಫಲ್ಯಕ್ಕೆ ಸಹ ಮಾಲೀಕ ಶಾರುಖ್ ಖಾನ್‌ ಟ್ವೀಟ್‌ ಮೂಲಕ ಬೇಸರ ವ್ಯಕ್ತಪಡಿಸಿದ್ದು, ಅಭಿಮಾನಿಗಳ ಕ್ಷಮೆ ಕೋರಿದ್ದಾರೆ.

IPL 2021: ಸುಲಭ ಟಾರ್ಗೆಟ್ ಚೇಸ್ ಮಾಡಲು ಕೆಕೆಆರ್ ವಿಫಲ; ಮುಂಬೈಗೆ ಮೊದಲ ಗೆಲುವು!

ತಂಡದ ಪ್ರದರ್ಶನ ಬೇಸರ ತರಿಸಿತು, ಕೆಕೆಆರ್‌ನ ಎಲ್ಲಾ ಅಭಿಮಾನಿಗಳ ಬಳಿ ಕ್ಷಮೆ ಕೇಳುತ್ತಿದ್ದೇನೆ ಎಂದು ಬಾಲಿವುಡ್‌ ಬಾದ್‌ಶಾ ಶಾರುಖ್‌ ಖಾನ್‌ ಟ್ವೀಟ್‌ ಮಾಡಿದ್ದಾರೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕೆಕೆಆರ್ ತಂಡವು ರಸೆಲ್‌ ಮಿಂಚಿನ ದಾಳಿಯ ನೆರವಿನಿಂದ ಬಲಿಷ್ಠ ಮುಂಬೈ ಇಂಡಿಯನ್ಸ್‌ ತಂಡವನ್ನು 152 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕೆಕೆಆರ್‌ ಆರಂಭಿಕ ಬ್ಯಾಟ್ಸ್‌ಮನ್‌ ನಿತೀಶ್‌ ರಾಣಾ ಆಕರ್ಷಕ ಅರ್ಧಶತಕದ ಹೊರತಾಗಿಯೂ ಕೊನೆಯಲ್ಲಿ ನಾಟಕೀಯ ಕುಸಿತ ಕಾಣುವ ಮೂಲಕ ಹಾಲಿ ಚಾಂಪಿಯನ್‌ ಮುಂಬೈಗೆ ಶರಣಾಗಿದೆ.