14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂರ್ಜ್‌ ಬೆಂಗಳೂರು ತಂಡ ಮತ್ತೊಂದು ಗೆಲುವು ಸಾಧಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ನಡೆದ ರೋಚಕ ಪಂದ್ಯದಲ್ಲಿ ಕೊಹ್ಲಿ ಪಡೆ ಒಂದು ರನ್‌ನಿಂದ ಗೆದ್ದುಬಿಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಹಮದಾಬಾದ್(ಏ.27): 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1 ರನ್‌ನಿಂದ ರೋಚಕ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಹಿಂದಿಕ್ಕಿ ಮತ್ತೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇಂದು (ಮಂಗಳವಾರ) ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 171 ರನ್ ದಾಖಲಿಸಿತು. 172 ರನ್ ಗುರಿ ಬೆನ್ನಟ್ಟಿದ ಡೆಲ್ಲಿ ಪ್ಯಾಪಿಟಲ್ಸ್ 20 ಓವರ್‌ಗಳಲ್ಲಿ 170 ರನ್‌ ಗಳಿಸಿತು. ಈ ಮೂಲಕ ಡೆಲ್ಲಿ ಕೇವಲ ಒಂದು ರನ್‌ನಿಂದ ಸೋಲೊಪ್ಪಿಕೊಂಡಿತು. 

ಪಂತ್ ಪಡೆ ಮೇಲೆ ಸ್ಫೋಟಿಸಿದ ಎಬಿಡಿ, ಆರ್‌ಸಿಬಿ ಅಬ್ಬರ! 

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್‌ಸಿಬಿ ಪರ ನಾಯಕ ವಿರಾಟ್ ಕೊಹ್ಲಿ 12, ದೇವದತ್ ಪಡಿಕ್ಕಲ್ 17, ರಜತ್ ಪಟಿದಾರ್ 31, ಗ್ಲೆನ್ ಮ್ಯಾಕ್ಸ್‌ವೆಲ್ 25, ಎಬಿ ಡಿ ವಿಲಿಯರ್ಸ್ 75 (42 ಎಸೆತ), ವಾಷಿಂಗ್ಟನ್ ಸುಂದರ್ 6 ರನ್‌ನೊಂದಿಗೆ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದು 171 ರನ್ ಗಳಿಸಿತ್ತು.

ಹೆಟ್ಮಿಯರ್ ಹೋರಾಟ ವ್ಯರ್ಥ: ಹೌದು, 172 ರನ್ ಗುರಿ ಬೆನ್ನಟ್ಟಿದ ಡೆಲ್ಲಿ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಸೋಲಿನ ದವಡೆಯಲ್ಲಿ ಸಿಲುಕಿಕೊಂಡಿತ್ತು. ಬಳಿಕ ನಾಯಕ ರಿಷಭ್ ಪಂತ್‌ಗೆ ಜೊತೆಯಾದ ಕೆರಿಬಿಯನ್ ಸ್ಪೋಟಕ ಬ್ಯಾಟ್ಸ್‌ಮನ್‌ ಹೆಟ್ಮೇಯರ್, ಆರ್‌ಸಿಬಿ ಬೌಲರ್‌ಗಳ ಮೇಲೆ ಬ್ಯಾಟಿಂಗ್‌ ಸವಾರಿ ಮಾಡಿದರು. ಅಬ್ಬರದ ಬೌಂಡರಿ ಸಿಕ್ಸರ್‌ ಬಾರಿಸುವುದರೊಂದಿಗೆ ಪಂದ್ಯದ ಗತಿಯನ್ನೇ ಬದಲಿಸಿದರು.ಆದ್ರೆ, ಕೊನೆಯಲ್ಲಿ ಕೊಹ್ಲಿ ಪಡೆ ಪಂದ್ಯವನ್ನು ಬಿಟ್ಟುಕೊಡಲಿಲ್ಲ.

ಹೆಟ್ಮಿಯರ್ ಕೇವಲ 25 ಎಸೆತಗಳಲ್ಲಿ 2 ಹಾಗೂ ಅಬ್ಬರದ 4 ಸಿಕ್ಸರ್‌ನೊಂದಿಗೆ 53 ರನ್‌ ಸಿಡಿಸಿದ್ರೆ, ಇನ್ನೂ ನಾಯಕ ರಿಷಬ್ ಪಂತ್ 48 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ ತಾಳ್ಮೆಯಾಟವಾಡಿದರು. ಆದ್ರೂ ಗೆಲುವು ಸಿಗಲಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ 21, ರಿಷಭ್ ಪಂತ್ 58, ಮಾರ್ಕಸ್ ಸ್ಟೋಯ್ನಿಸ್ 22, ಶಿಮ್ರನ್ ಹೆಟ್ಮೈಯರ್ 53 (25), ಶಿಖರ್ ಧವನ್ 6, ಸ್ಟೀವ್ ಸ್ಮಿತ್ 4 ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್ ಕಳೆದು 170 ರನ್ ಗಳಿಸಿ ತಲೆ ಬಾಗಿತು.