ಡೆಲ್ಲಿ ಕ್ಯಾಪಿಟಲ್ಸ್‌ಗೆ ಥ್ಯಾಂಕ್ಯೂ ಎಂದ ನೂತನ ನಾಯಕ ರಿಷಭ್ ಪಂತ್
ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದು, ಅವಕಾಶ ನೀಡಿದ ಮ್ಯಾನೇಜ್‌ಮೆಂಟ್‌ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಏ.01): ನೂತನವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿರುವ 23 ವರ್ಷದ ರಿಷಭ್ ಪಂತ್, ತಮ್ಮ ಮೇಲೆ ವಿಶ್ವಾಸವಿಟ್ಟು ನಾಯಕತ್ವ ನೀಡಿದ ಡೆಲ್ಲಿ ಆಡಳಿತ ಮಂಡಳಿಗೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿರುವುದು ನನ್ನ ಸೌಭಾಗ್ಯ. ನಾನು ಕಳೆದ ಕೆಲವು ವರ್ಷಗಳಿಂದ ಡೆಲ್ಲಿ ತಂಡದ ಭಾಗವಾಗಿದ್ದೇನೆ. ನನ್ನ ಮೇಲೆ ವಿಶ್ವಾಸವಿಟ್ಟ ಕೋಚ್ ರಿಕಿ ಪಾಂಟಿಂಗ್, ಸಹಾಯಕ ಸಿಬ್ಬಂದಿಗಳು, ಸಹ ಆಟಗಾರರು ಹಾಗೂ ಅಭಿಮಾನಿಗಳಿಗೆ ಧನ್ಯವಾದಗಳು. ಡೆಲ್ಲಿ ಕ್ಯಾಪಿಟಲ್ಸ್ ನನ್ನ ಮೇಲೆ ಇಟ್ಟ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ. ನಾನು ಪ್ರತಿಬಾರಿಯು 100% ಪ್ರದರ್ಶನ ತೋರಲು ಪ್ರಯತ್ನಿಸುತ್ತಿರುತ್ತೇನೆ. ಈ ಬಾರಿ ಟ್ರೋಫಿ ಗೆಲ್ಲುವ ವಿಶ್ವಾಸವಿದೆ. ಡೆಲ್ಲಿ ಅಭಿಮಾನಿಗಳೇ ಯಾವಾಗಲೂ ಹೀಗೆ ನಮ್ಮನ್ನು ಬೆಂಬಲಿಸುತ್ತಾ ಇರಿ ಎಂದು ರಿಷಭ್ ಪಂತ್ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿತ್ತಾದರೂ, ಮುಂಬೈ ವಿರುದ್ದ ಮುಗ್ಗರಿಸುವ ಮೂಲಕ ಪ್ರಶಸ್ತಿ ಗೆಲ್ಲುವ ಅವಕಾಶದಿಂದ ವಂಚಿತವಾಗಿತ್ತು.14ನೇ ಆವೃತ್ತಿಯ ಐಪಿಎಲ್‌ನಿಂದ ಶ್ರೇಯಸ್ ಅಯ್ಯರ್ ಹೊರಬಿದ್ದಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ನಾಯಕರಾಗಿ ರಿಷಭ್ ಪಂತ್ ನೇಮಕಗೊಂಡಿದ್ದಾರೆ. ಇತ್ತೀಚೆಗೆ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದ ಶ್ರೇಯಸ್, 4-5 ತಿಂಗಳು ಕ್ರಿಕೆಟ್‌ನಿಂದ ದೂರವಿರಬೇಕಿದೆ.
ತಂಡದ ನಾಯಕತ್ವಕ್ಕೆ ಅಜಿಂಕ್ಯ ರಹಾನೆ, ಆರ್.ಅಶ್ವಿನ್, ಸ್ಟೀವ್ ಸ್ಮಿತ್, ಪೃಥ್ವಿ ಶಾ ಹಾಗೂ ಪಂತ್ ನಡುವೆ ಪೈಪೋಟಿ ಇತ್ತು. ಕಳೆದ 5 ಆವೃತ್ತಿಗಳಲ್ಲಿ ಡೆಲ್ಲಿ ಪರವೇ ಆಡಿರುವ, ಇತ್ತೀಚೆಗೆ ಅತ್ಯುತ್ತಮ ಲಯದಲ್ಲಿರುವ ಪಂತ್‌ಗೆ ನಾಯಕತ್ವ ನೀಡಲು ತಂಡ ನಿರ್ಧರಿಸಿದೆ.
‘ಶ್ರೇಯಸ್ ನಾಯಕತ್ವದಲ್ಲಿ ತಂಡ ಉತ್ತಮ ಪ್ರದರ್ಶನ ತೋರಿತ್ತು. ಬ್ಯಾಟ್ಸ್‌ಮನ್ ಆಗಿ ತಾವೆಷ್ಟುಬಲಿಷ್ಠರು ಎಂದು ಸಾಬೀತುಪಡಿಸಿರುವ ಪಂತ್‌ಗೆ ನಾಯಕತ್ವದಲ್ಲೂ ತಮ್ಮ ಸಾಮರ್ಥ್ಯ ತೋರಲು ಇದು ಉತ್ತಮ ಅವಕಾಶ’ ಎಂದು ಡೆಲ್ಲಿ ತಂಡದ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಪಂತ್, ಐಪಿಎಲ್‌ನಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.