Asianet Suvarna News Asianet Suvarna News

ಐಪಿಎಲ್ 2021: ಕೆಕೆಆರ್ ಎದುರು ಜಯದ ಕನವರಿಕೆಯಲ್ಲಿ ಆರ್‌ಸಿಬಿ

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೋಲ್ಕತ ನೈಟ್ ರೈಡರ್ಸ್‌ ಸವಾಲನ್ನು ಎದುರಿಸಲಿದ್ದು, ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

IPL 2021 RCB take on Kolkata Knight Riders in Ahmedabad kvn
Author
Ahmedabad, First Published May 3, 2021, 10:23 AM IST

ಅಹಮದಾಬಾದ್(ಮೇ.03)‌: ತಾರಾ ಆಟಗಾರರಿಂದ ಕೂಡಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಲಯ ಕಂಡುಕೊಳ್ಳುವ ತವಕದಲ್ಲಿದ್ದು, ಸೋಮವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್ ವಿರುದ್ಧದ ಸೆಣಸಲಿದೆ. ಉಭಯ ತಂಡಗಳ ನಡುವೆ ಈ ಆವೃತ್ತಿಯಲ್ಲಿ ಇದು 2ನೇ ಮುಖಾಮುಖಿ. ಮೊದಲ ಪಂದ್ಯದಲ್ಲಿ 38 ರನ್‌ಗಳಿಂದ ಗೆದ್ದಿದ್ದ ಕೊಹ್ಲಿ ಪಡೆ, ಮತ್ತೊಂದು ಭರ್ಜರಿ ಗೆಲುವು ಸಾಧಿಸಲು ಕಾಯುತ್ತಿದೆ.

ಮೊದಲ 4 ಪಂದ್ಯಗಳ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಆರ್‌ಸಿಬಿ ಕಳೆದ 3 ಪಂದ್ಯಗಳಲ್ಲಿ 2ರಲ್ಲಿ ಸೋತಿದೆ. ಮೊಹಮದ್‌ ಸಿರಾಜ್‌ ಡೆಲ್ಲಿ ವಿರುದ್ಧ ಕೊನೆ ಓವರಲ್ಲಿ 14 ರನ್‌ ರಕ್ಷಿಸಿಕೊಳ್ಳದೆ ಹೋಗಿದ್ದರೆ ಸತತ 3 ಸೋಲುಗಳನ್ನು ಕಾಣುತ್ತಿತ್ತು. ತಂಡದ ಸೋಲಿಗೆ ಬ್ಯಾಟ್ಸ್‌ಮನ್‌ಗಳ ವೈಫಲ್ಯವೇ ಪ್ರಮುಖ ಕಾರಣ ಎನ್ನುವುದು ಎದ್ದು ಕಾಣುತ್ತಿದೆ. ಹೀಗಾಗಿ ಕೊಹ್ಲಿ, ದೇವದತ್‌ ಪಡಿಕ್ಕಲ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಎಬಿ ಡಿ ವಿಲಿಯ​ರ್ಸ್ ಮೇಲೆ ಭಾರೀ ನಿರೀಕ್ಷೆ ಇದೆ. ಆರ್‌ಸಿಬಿ ಬೌಲರ್‌ಗಳು ಸ್ಥಿರತೆ ಕಾಯ್ದುಕೊಳ್ಳಬೇಕಿದ್ದು, ಕುಗ್ಗಿರುವ ಕೆಕೆಆರ್‌ ವಿರುದ್ಧದ ಪಂದ್ಯ ಆರ್‌ಸಿಬಿ ಬೌಲರ್‌ಗಳಿಗೆ ಉತ್ತಮ ಅವಕಾಶ ಎನಿಸಿದೆ.

ಧವನ್ ಆಟಕ್ಕೆ ಶರಣಾದ ಪಂಜಾಬ್ ಕಿಂಗ್ಸ್, ಡೆಲ್ಲಿಗೆ 7 ವಿಕೆಟ್ ಭರ್ಜರಿ ಗೆಲುವು!

ಒತ್ತಡದಲ್ಲಿ ಕೆಕೆಆರ್‌: ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಸೋತಿರುವ ಕೆಕೆಆರ್‌, ಆಡಿರುವ ಒಟ್ಟು 7 ಪಂದ್ಯಗಳಲ್ಲಿ 5ರಲ್ಲಿ ಸೋತು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ತಂಡ ಪ್ಲೇ-ಆಫ್‌ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಸತತವಾಗಿ ಗೆಲ್ಲಬೇಕಿದೆ. ಪ್ಲೇ-ಆಫ್‌ಗೇರಲು ಕನಿಷ್ಠ 7ರಿಂದ 8 ಪಂದ್ಯಗಳಲ್ಲಿ ಗೆಲ್ಲಬೇಕಿದೆ. ಹೀಗಾಗಿ, ಕೇವಲ 2 ಗೆಲುವು ಕಂಡಿರುವ ಕೆಕೆಆರ್‌, ಬಾಕಿ ಇರುವ 7 ಪಂದ್ಯಗಳಲ್ಲಿ ಕನಿಷ್ಠ 5ರಿಂದ 6ರಲ್ಲಿ ಗೆಲ್ಲಲೇಬೇಕಿದೆ.

ಎಲ್ಲಾ ಮೂರೂ ವಿಭಾಗಗಳಲ್ಲಿ ಕೆಕೆಆರ್‌ ವೈಫಲ್ಯ ಕಾಣುತ್ತಿದೆ. ಸೂಕ್ತ ಆಡುವ ಹನ್ನೊಂದರ ಬಳಗದ ಆಯ್ಕೆಯಲ್ಲಿ ಎಡವುತ್ತಿರುವ ತಂಡ, ಬ್ಯಾಟಿಂಗ್‌ ಕ್ರಮಾಂಕದಲ್ಲೂ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿದೆ.

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಪಡಿಕ್ಕಲ್‌, ಕೊಹ್ಲಿ(ನಾಯಕ), ರಜತ್‌, ಮ್ಯಾಕ್ಸ್‌ವೆಲ್‌, ಡಿ ವಿಲಿಯ​ರ್ಸ್, ಶಾಬಾಜ್‌, ಜೇಮಿಸನ್‌, ಸ್ಯಾಮ್ಸ್‌, ಹರ್ಷಲ್‌, ಸಿರಾಜ್‌, ಚಹಲ್‌.

ಕೆಕೆಆರ್‌: ಗಿಲ್‌, ನಿತೀಶ್‌ ರಾಣಾ, ತ್ರಿಪಾಠಿ, ಮೊರ್ಗನ್‌(ನಾಯಕ), ಕಾರ್ತಿಕ್‌, ರಸೆಲ್‌, ಶಕೀಬ್‌, ಕಮಿನ್ಸ್‌, ವರುಣ್‌, ಶಿವಂ ಮಾವಿ, ಪ್ರಸಿದ್ಧ್ ಕೃಷ್ಣ.

ಸ್ಥಳ: ಅಹಮದಾಬಾದ್‌
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್
 

Follow Us:
Download App:
  • android
  • ios