ಟೂರ್ನಿಯಲ್ಲಿ ಮೊದಲೆರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಹ್ಯಾಟ್ರಿಕ್‌ ಗೆಲುವಿನ  ಕನವರಿಕೆಯಲ್ಲಿದ್ದು, ಚೆನ್ನೈನಲ್ಲಿಂದು ಕೋಲ್ಕತ ನೈಟ್‌ ರೈಡರ್ಸ್‌ ತಂಡವನ್ನು ಎದುರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಚೆನ್ನೈ(ಏ.18): ಪ್ರಸಕ್ತ ಐಪಿಎಲ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿ ಮೊದಲೆರಡು ಪಂದ್ಯಗಳಲ್ಲಿ ಸತತ ಜಯ ಸಾಧಿಸಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಹ್ಯಾಟ್ರಿಕ್‌ ಜಯದ ವಿಶ್ವಾಸದಲ್ಲಿದೆ. ಇದರೊಂದಿಗೆ ಐಪಿಎಲ್‌ನಲ್ಲಿ ಚೊಚ್ಚಲ ಬಾರಿಗೆ ಮೊದಲ ಮೂರು ಪಂದ್ಯಗಳನ್ನು ಗೆದ್ದು, ಹೊಸ ಇತಿಹಾಸ ಬರೆವ ತವಕದಲ್ಲಿದೆ.

ಉದ್ಘಾಟನಾ ಪಂದ್ಯದಲ್ಲಿ ಮುಂಬೈ ವಿರುದ್ಧ ಕೊನೆ ಎಸೆತದಲ್ಲಿ 2 ವಿಕೆಟ್‌ಗಳ ಜಯ ಸಾಧಿಸಿದ್ದ ಆರ್‌ಸಿಬಿ, 2ನೇ ಪಂದ್ಯದಲ್ಲಿ 149 ರನ್‌ಗಳನ್ನು ಡಿಫೆಂಡ್‌ ಮಾಡಿಕೊಳ್ಳುವ ಮೂಲಕ ಸನ್‌ರೈಸ​ರ್ಸ್‌ ಹೈದರಾಬಾದ್‌ ವಿರುದ್ಧ ರೋಚಕ ಗೆಲುವನ್ನು ತನ್ನದಾಗಿಸಿಕೊಂಡಿತ್ತು. ಗ್ಲೆನ್‌ ಮ್ಯಾಕ್ಸ್‌ವೆಲ್‌ ಫಾರಂಗೆ ಮರಳಿರುವುದು ಆರ್‌ಸಿಬಿ ಬಲವನ್ನು ಹೆಚ್ಚಿಸಿದ್ದರೆ, ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್‌ ತಂಡದ ಆಧಾರಸ್ತಂಭಗಳಾಗಿದ್ದಾರೆ. ದೇವದತ್‌ ಪಡಿಕ್ಕಲ್‌ ತಂಡವನ್ನು ಕೂಡಿಕೊಂಡಿರುವುದು ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಆದರೆ, ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಆಟ ಮೂಡದೇ ಇರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಸುಲಭ ಗುರಿ ಚೇಸ್ ಮಾಡಲು ಹೈದರಾಬಾದ್ ವಿಫಲ; ಮುಂಬೈಗೆ 13 ರನ್ ಗೆಲುವು!

ಬೌಲಿಂಗ್‌ನಲ್ಲಿ ಆರ್‌ಸಿಬಿ ಬೌಲರ್‌ಗಳು ಮಿಂಚುತ್ತಿದ್ದು, ಸನ್‌ರೈಸ​ರ್ಸ್‌ ವಿರುದ್ಧ 149 ರನ್‌ ಡಿಫೆಂಡ್‌ ಮಾಡಿಕೊಂಡಿದ್ದೇ ಇದಕ್ಕೆ ಸಾಕ್ಷಿ. ಮೊಹಮ್ಮದ್‌ ಸಿರಾಜ್‌, ವಾಷಿಂಗ್ಟನ್‌ ಸುಂದರ್‌, ಯಜುವೇಂದ್ರ ಚಹಲ್‌, ಹರ್ಷಲ್‌ ಪಟೇಲ್‌, ಶಾಬಾಜ್‌ ಅಹಮದ್‌ ಬೌಲಿಂಗ್‌ ವಿಭಾಗದ ಪ್ರಮುಖ ಅಸ್ತ್ರಗಳಾಗಿದ್ದಾರೆ.

ಒತ್ತಡದಲ್ಲಿ ಕೆಕೆಆರ್‌:

ಮುಂಬೈ ಇಂಡಿಯನ್ಸ್‌ ವಿರುದ್ಧ ಕೈಯಲ್ಲಿದ್ದ ಪಂದ್ಯವನ್ನು ಕಳೆದುಕೊಂಡ ಕೆಕೆಆರ್‌ ಒತ್ತಡದಲ್ಲಿದೆ. ಬ್ಯಾಟಿಂಗ್‌, ಬೌಲಿಂಗ್‌ ಎರಡೂ ವಿಭಾಗದಲ್ಲಿ ವೈಫಲ್ಯ ಕಂಡಿರುವ ಇಯಾನ್‌ ಮಾರ್ಗನ್‌ ಪಡೆ, ಪುಟಿದೇಳುವ ಲೆಕ್ಕಾಚಾರದಲ್ಲಿದೆ. ಆರಂಭಿಕ ದಾಂಡಿಗ ನಿತೇಶ್‌ ರಾಣಾ ಭರ್ಜರಿ ಫಾರಂನಲ್ಲಿದ್ದರೆ, ತಾರಾ ಬ್ಯಾಟ್ಸ್‌ಮನ್‌ ಆ್ಯಂಡ್ರೂ ರಸೆಲ್‌ ವೈಫಲ್ಯ ಕೆಕೆಆರ್‌ ಅನ್ನು ತತ್ತಿರಿಸುವಂತೆ ಮಾಡಿದೆ. ಶುಭಮನ್‌ ಗಿಲ್‌, ಮಾರ್ಗನ್‌ ಸಾಮರ್ಥ್ಯಕ್ಕೆ ತಕ್ಕ ಆಟವಾಡಬೇಕಿದೆ. ವರುಣ್‌ ಚಕ್ರವರ್ತಿ ವಿಕೆಟ್‌ ಪಡೆಯುವುದರಲ್ಲಿ ವಿಫಲವಾಗುತ್ತಿದ್ದರೆ, ಪ್ರಸಿದ್ಧ ಕೃಷ್ಣ, ಪ್ಯಾಟ್‌ ಕಮಿನ್ಸ್‌ ದುಬಾರಿ ಆಗುತ್ತಿರುವುದು ಕೆಕೆಆರ್‌ ಗೆಲುವಿಗೆ ಅಡ್ಡವಾಗಿದೆ. ಒಟ್ಟಾರೆ ಗೊಂದಲದ ಗೂಡಾಗಿರುವ ಕೆಕೆಆರ್‌, ಅಸಾಧಾರಣ ಫಾರಂನಲ್ಲಿರುವ ಆರ್‌ಸಿಬಿ ನಡುವಿನ ಸೂಪರ್‌ ಸಂಡೇ ಕಾದಾಟಕ್ಕೆ ಚೆಪಾಕ್‌ ಅಂಗಳ ಸಾಕ್ಷಿಯಾಗಲಿದೆ.

ಪಿಚ್‌ ರಿಪೋರ್ಟ್: ಚೆಪಾಕ್‌ ಅಂಗಳ ನಿಧಾನ ಗತಿಯ ಪಿಚ್‌ ಆಗಿದ್ದು, ಸರಾಸರಿ 150ರಿಂದ 160 ರನ್‌ ನಿರೀಕ್ಷಿಸಲಾಗಿದೆ. ಮೊದಲು ಬ್ಯಾಟ್‌ ಮಾಡುವ ತಂಡ 170ಕ್ಕಿಂತ ಅಧಿಕ ರನ್‌ ಬಾರಿಸಿದರೆ, ಜಯ ಸುಲಭವಾಗಲಿದೆ. ಆರ್‌ಸಿಬಿ 149 ರನ್‌ ಕಾಪಾಡಿಕೊಂಡಿದ್ದು, ಇದಕ್ಕೆ ಸಾಕ್ಷಿ.

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಕೊಹ್ಲಿ, ಪಡಿಕ್ಕಲ್‌, ಶಾಬಾಜ್‌, ಮ್ಯಾಕ್ಸ್‌ವೆಲ್‌, ಡಿ ವಿಲಿಯ​ರ್‍ಸ್, ವಾಷಿಂಗ್‌ಟನ್‌ ಸುಂದರ್‌, ಡ್ಯಾನ್‌ ಕ್ರಿಶ್ಚಿಯನ್‌, ಜೆಮಿಸನ್‌, ಹರ್ಷಲ್‌ ಪಟೇಲ್‌, ಸಿರಾಜ್‌, ಚಹಲ್‌

ಕೆಕೆಆರ್: ನಿತೇಶ್‌ ರಾಣಾ, ಶುಭಮನ್‌ ಗಿಲ್‌, ರಾಹುಲ್‌ ತ್ರಿಪಾಠಿ, ಮಾರ್ಗನ್‌, ಶಕೀಬ್‌, ದಿನೇಶ್‌ ಕಾರ್ತಿಕ್‌, ರಸೆಲ್‌, ಪ್ಯಾಟ್‌ ಕಮಿನ್ಸ್‌, ಹರ್ಭಜನ್‌/ಕುಲ್ದೀಪ್‌, ವರುಣ್‌, ಪ್ರಸಿದ್ಧ್

ಸ್ಥಳ: ಚೆನ್ನೈ
ಪಂದ್ಯ ಆರಂಭ: ಮಧ್ಯಾಹ್ನ 3.30
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್