ಚೆನ್ನೈ(ಏ.09):  ಕಳೆದ 13 ಆವೃತ್ತಿಗಳಲ್ಲಿ ಇರದ ಬಲಿಷ್ಠತೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸುತ್ತಿದೆ. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಎದುರಾಗಿದ್ದು, ಬಲಿಷ್ಠ ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ. ಮೊದಲ ಪಂದ್ಯವೇ ಫೈನಲ್ ಸ್ವರೂಪ ಪಡೆದುಕೊಂಡಿತ್ತು.  ರೋಚಕ ಹೋರಾಟದಲ್ಲಿ ರೋಹಿತ್ ಶರ್ಮಾ ಪಡೆಯನ್ನು ಮಣಿಸಿದ ಆರ್‌ಸಿಬಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಐಪಿಎಲ್‌ನಲ್ಲಿ 100; ಮುಂಬೈ ವಿರುದ್ಧ ವಿಶೇಷ ದಾಖಲೆ ಬರೆದ ಚಹಾಲ್!

ಮುಂಬೈ ಇಂಡಿಯನ್ಸ್ ತಂಡವನ್ನು 159 ರನ್‌ಗಳಿಗೆ ಕಟ್ಟಿಹಾಕಿದ ಆರ್‌ಸಿಬಿ ಸ್ಫೋಟಕ ಆರಂಭ ಪಡೆಯಲಿಲ್ಲ. ದೇವದತ್ ಪಡಿಕ್ಕಲ್ ಅನುಪಸ್ಥಿತಿಯಲ್ಲಿ ವಾಶಿಂಗ್ಟನ್ ಸುಂದರ್ ಆರಂಭಿಕನಾಗಿ ಕಣಕ್ಕಿಳಿದರು. ಆದರೆ ಸುಂದರ್ 10 ರನ್ ಸಿಡಿಸಿ ನಿರ್ಗಮಿಸಿದರು. ನಾಯಕ ವಿರಾಟ್ ಕೊಹ್ಲಿಹೋರಾಟ ಮುಂದವರಿಸಿದರು. ಆದರೆ ರಜತ್ ಪಾಟಿದಾರ್ 8 ರನ್ ಸಿಡಿಸಿ ಔಟಾದರು.

ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ವಿರಾಟ್ ಕೊಹ್ಲಿ ಹೋರಾಟ ಆರ್‌ಸಿಬಿ ತಂಡವನ್ನು ಗೆಲುವಿನ ಹಾದಿಯಲ್ಲಿ ಕೊಂಡೊಯ್ಯಿತು. ಆದರೆ ಕೊಹ್ಲಿ 33 ರನ್  ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್‌ವೆಲ್ 39 ರನ್ ಸಿಡಿಸಿ ನಿರ್ಗಮಿಸಿದರು. ಇಷ್ಟಾದರೂ ಆರ್‌ಸಿಬಿ ತಂಡದ ಅಭಿಮಾನಿಗಳಲ್ಲಿ ಯಾವುದೇ ಆತಂಕ ಎದುರಾಗಲಿಲ್ಲ. ಕಾರಣ ಎಬಿ ಡಿವಿಲಿಯರ್ಸ್.

ಡಿವಿಲಿಯರ್ಸ್ ಅಬ್ಬರಿಸಲು ಆರಂಭಿಸಿದರೆ, ಇತ್ತ ಶಹಬ್ಬಾಸ್ ಅಹಮ್ಮದ್ ವಿಕೆಟ್ ಕೈಚೆಲ್ಲಿದರು. ಡೆನಿಲ್ ಕ್ರಿಸ್ಟಿಯನ್ ಕೂಡ ಸಾಥ್ ನೀಡಲಿಲ್ಲ. ಡಿವಿಲಿಯರ್ಸ್‌ಗೆ ಏಕಾಂಗಿ ಹೋರಾಟ ನೀಡಬೇಕಾದ ಅನಿವಾರ್ಯತೆ ಎದುರಾಯಿತು. ಡಿವಿಲಿಯರ್ಸ್ ಅಬ್ಬರದಿಂದ ಆರ್‍‌ಸಿಬಿ ತಂಡಕ್ಕೆ 12 ಎಸೆತದಲ್ಲಿ 19 ರನ್ ಅವಶ್ಯಕತೆ ಇತ್ತು.

ಡಿವಿಲಿಯರ್ಸ್ ಹೊಡಿ ಬಡಿ ಆಟಕ್ಕೆ ಮುಂಬೈ ಘಟಾನುಘಟಿ ಬೌಲರ್ಸ್ ಸುಸ್ತಾದರು. ಅಂತಿಮ 8 ಎಸೆತದಲ್ಲಿ 8 ರನ್‌ಗಳು ಬೇಕಿತ್ತು. ಆದರೆ ಕೈಲ್ ಜ್ಯಾಮಿಸನ್ ರನೌಟ್ ಆರ್‌ಸಿಬಿ ತಂಡದ ಆತಂಕ ಮತ್ತಷ್ಟು ಹೆಚ್ಚಿಸಿತು.  3 ಎಸೆತದಲ್ಲಿ 3 ರನ್ ಬೇಕಿರುವಾಗ ಅನಗತ್ಯ ರನ್ ಕದಿಯಲು ಹೋದ ಡಿವಿಲಿಯರ್ಸ್ ರನೌಟ್‌ಗೆ ಬಲಿಯಾದರು. 

ಡಿವಿಲಿಯರ್ಸ್ 27 ಎಸೆತದಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 48 ರನ್ ಸಿಡಿಸಿ ಔಟಾದರು. ಅಷ್ಟರಲ್ಲೇ ಆರ್‌ಸಿಬಿ ಸೋಲಿನ ಸುಳಿಗೆ ಸಿಲುಕಿತು. ಮೊಹಮ್ಮದ್ ಸಿರಾಜ್ 1 ರನ್ ಹಾಗೂ ಹರ್ಷಲ್ ಪಟೇಲ್ ಗೆಲುವಿನ ರನ್ ಸಿಡಿಸೋ ಮೂಲಕ ಆರ್‌ಸಿಬಿ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.