ಸನ್‌ರೈಸರ್ಸ್ ಹೈದರಾಬಾದ್‌ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 6ನೇ ಸೋಲು ಕಂಡಿದೆ. ವಾರ್ನರ್‌ ಬದಲಿಗೆ ವಿಲಿಯಮ್ಸನ್‌ಗೆ ಹೈದರಾಬಾದ್ ತಂಡದ ಪಟ್ಟ ಕಟ್ಟಿದರೂ ಅದೃಷ್ಟ ಬದಲಾಗಲಿಲ್ಲ. ರಾಜಸ್ಥಾನ ರಾಯಲ್ಸ್ 55 ರನ್‌ಗಳ ಅಂತರದ ಭಾರೀ ಜಯ ದಾಖಲಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಮೇ.02): ದಿಢೀರ್ ನಾಯಕತ್ವ ಬದಲಾವಣೆ ಸನ್‌ರೈಸರ್ಸ್ ಹೈದರಾಬಾದ್‌ ಕೈ ಹಿಡಿದಿಲ್ಲ. ರಾಜಸ್ಥಾನ ರಾಯಲ್ಸ್‌ ವಿರುದ್ದ ಕೇನ್‌ ವಿಲಿಯಮ್ಸನ್‌ ನೇತೃತ್ವದ ಸನ್‌ರೈಸರ್ಸ್‌ ಹೈದರಾಬಾದ್‌ ಬರೋಬ್ಬರಿ 55 ರನ್‌ ಅಂತರದ ಹೀನಾಯ ಸೋಲು ಕಾಣುವುದರ ಮೂಲಕ ಟೂರ್ನಿಯಲ್ಲಿ 6ನೇ ಮುಖಭಂಗ ಅನುಭವಿಸಿದೆ.

ಹೌದು, ರಾಜಸ್ಥಾನ ರಾಯಲ್ಸ್ ನೀಡಿದ್ದ 221 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಸನ್‌ರೈಸರ್ಸ್‌ ಸ್ಪೋಟಕ ಆರಂಭ ಪಡೆಯಿತಾದರೂ, ಆ ಲಯವನ್ನು ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಮೊದಲ ಪವರ್‌ ಪ್ಲೇನಲ್ಲಿ ಜಾನಿ ಬೇರ್‌ಸ್ಟೋವ್ ಹಾಗೂ ಆರಂಭಿಕನಾಗಿ ಬಡ್ತಿ ಪಡೆದ ಮನೀಶ್ ಪಾಂಡೆ 57 ರನ್‌ಗಳ ಜತೆಯಾಟವಾಡಿದರು. ಪಾಂಡೆ 31 ರನ್‌ ಬಾರಿಸಿ ಮುಷ್ತಾಫಿಜುರ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರೆ, ಬೇರ್‌ಸ್ಟೋವ್ 30 ರನ್‌ ಬಾರಿಸಿ ತೆವಾಟಿಯಾ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

Scroll to load tweet…

ಕೈಕೊಟ್ಟ ಮಧ್ಯಮ ಕ್ರಮಾಂಕ: ಸನ್‌ರೈಸರ್ಸ್‌ ಉತ್ತಮ ಆರಂಭ ಪಡೆಯಿತಾದರೂ ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷಿತ ರನ್ ಬರಲಿಲ್ಲ. ಮಧ್ಯಮ ಕ್ರಮಾಂಕದ ಯಾವೊಬ್ಬ ಬ್ಯಾಟ್ಸ್‌ಮನ್‌ ಸಹ 20ಕ್ಕೂ ಅಧಿಕ ರನ್‌ ಬಾರಿಸಲಿಲ್ಲ. ನಾಯಕ ವಿಲಿಯಮ್ಸನ್ 20 ರನ್‌ ಬಾರಿಸಿದರೆ, ವಿಜಯ್ ಶಂಕರ್ 8, ಕೇದಾರ್ ಜಾಧವ್ 19, ಮೊಹಮ್ಮದ್ ನಬೀ 17 ಹಾಗೂ ಅಬ್ದುಲ್ ಸಮದ್ 10 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು.

ಐಪಿಎಲ್ 2021: ಜೋಸ್ ಬಟ್ಲರ್ ಶತಕ, ಸನ್‌ರೈಸರ್ಸ್‌ಗೆ ಕಠಿಣ ಗುರಿ

ರಾಜಸ್ಥಾನ ರಾಯಲ್ಸ್ ಪರ ಕ್ರಿಸ್ ಮೋರಿಸ್ ಹಾಗೂ ಮುಷ್ತಾಫಿಜುರ್ ರೆಹಮಾನ್ ತಲಾ 3 ವಿಕೆಟ್ ಕಬಳಿಸುವ ಮೂಲಕ ಸನ್‌ರೈಸರ್ಸ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ ರಾಯಲ್ಸ್ ತಂಡ ಆರಂಭಿಕ ಆಘಾತದ ಹೊರತಾಗಿಯೂ ಜೋಸ್ ಬಟ್ಲರ್(124) ಬಾರಿಸಿದ ಚೊಚ್ಚಲ ಐಪಿಎಲ್ ಶತಕ ಹಾಗೂ ನಾಯಕ ಸಂಜು ಸ್ಯಾಮ್ಸನ್ ಬಾರಿಸಿದ ಸಮಯೋಚಿತ 48 ರನ್‌ಗಳ ನೆರವಿನಿಂದ 220 ರನ್‌ ಕಲೆಹಾಕಿತ್ತು.

ಸಂಕ್ಷಿಪ್ತ ಸ್ಕೋರ್

ರಾಜಸ್ಥಾನ ರಾಯಲ್ಸ್: 220//3
ಜೋಸ್ ಬಟ್ಲರ್: 124
ರಶೀದ್ ಖಾನ್: 24/1

ಸನ್‌ರೈಸರ್ಸ್‌ ಹೈದರಾಬಾದ್: 165/8
ಮನೀಶ್ ಪಾಂಡೆ: 31
ಮುಷ್ತಾಫಿಜುರ್ ರೆಹಮಾನ್: 20/3