ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮೊದಲ ಪಂದ್ಯದಲ್ಲೇ ಸೋಲಿನ ಕಹಿಯುಂಡಿದ್ದು, ಎರಡನೇ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ. ಹೀಗಿರುವಾಗಲೇ ಎರಡನೇ ಪಂದ್ಯದಲ್ಲಿ ಡಿ ಕಾಕ್‌ ಲಭ್ಯತೆಯ ಕುರಿತಂತೆ ಜಹೀರ್ ಖಾನ್ ತುಟಿ ಬಿಚ್ಚಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಚೆನ್ನೈ(ಏ.12): 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ದ 2 ವಿಕೆಟ್‌ಗಳ ರೋಚಕ ಸೋಲು ಕಂಡಿದೆ. ಇದೀಗ ಏಪ್ರಿಲ್‌ 13ರಂದು ಕೆಕೆಆರ್ ವಿರುದ್ದ ನಡೆಯಲಿರುವ ಎರಡನೇ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳಲು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್‌ ಎದುರು ನೋಡುತ್ತಿದೆ.

ಹೀಗಿರುವಾಗಲೇ ಮುಂಬೈ ಇಂಡಿಯನ್ಸ್‌ ತಂಡದ ಡೈರೆಕ್ಟರ್ ಆಫ್ ಕ್ರಿಕೆಟ್‌ ಆಪರೇಷನ್‌ ಜಹೀರ್ ಖಾನ್‌ ಎರಡನೇ ಪಂದ್ಯಕ್ಕೆ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ ಕಾಕ್‌ ಲಭ್ಯತೆ ಬಗ್ಗೆ ತುಟಿ ಬಿಚ್ಚಿದ್ದಾರೆ. ಆರ್‌ಸಿಬಿ ವಿರುದ್ದದ ಪಂದ್ಯದ ವೇಳೆ ಡಿ ಕಾಕ್‌ ಕಡ್ಡಾಯ ಕ್ವಾರಂಟೈನ್‌ನಲ್ಲಿದ್ದರಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಡಿ ಕಾಕ್‌ ಅನುಪಸ್ಥಿತಿಯಲ್ಲಿ ಕ್ರಿಸ್‌ ಲಿನ್‌ ಮುಂಬೈ ಇಂಡಿಯನ್ಸ್‌ ಪರ ಇನಿಂಗ್ಸ್‌ ಆರಂಭಿಸಿ 49 ರನ್ ಚಚ್ಚಿದ್ದರು.

IPL 2021 ಕನ್ನಡಿಗರ ಹೃದಯಗೆದ್ದ ಕೆಕೆಆರ್ ವೇಗಿ ಪ್ರಸಿದ್ಧ್ ಕೃಷ್ಣ ಮಾತು..!

ಇದೀಗ ಮುಂಬೈ ಇಂಡಿಯನ್ಸ್‌ ಎರಡನೇ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಬರಲು ತುದಿಗಾಲಿನಲ್ಲಿ ನಿಂತಿದೆ. ಇದರ ಬೆನ್ನಲ್ಲೆ ಜಹೀರ್ ಖಾನ್‌ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಡಿ ಕಾಕ್‌ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಪರ ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದ್ದಾರೆ. ಕ್ವಿಂಟನ್‌ ಡಿ ಕಾಕ್ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದು, ಭಾನುವಾರ(ಏ.11)ದಿಂದಲೇ ಅಭ್ಯಾಸ ನಡೆಸಲಾರಂಭಿಸಿದ್ದಾರೆ. ಎರಡನೇ ಪಂದ್ಯಕ್ಕೆ ಡಿ ಕಾಕ್‌ ಲಭ್ಯವಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ಹೇಳಿದ್ದಾರೆ.