IPL 2021 ಕನ್ನಡಿಗರ ಹೃದಯಗೆದ್ದ ಕೆಕೆಆರ್ ವೇಗಿ ಪ್ರಸಿದ್ಧ್ ಕೃಷ್ಣ ಮಾತು..!
ಕೆಕೆಆರ್ ಮಾರಕ ವೇಗಿ ಪ್ರಸಿದ್ಧ್ ಕೃಷ್ಣ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯಕ್ಕೂ ಮುನ್ನ ಕನ್ನಡದಲ್ಲೇ ಸಂದರ್ಶನ ನೀಡುವ ಮೂಲಕ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಏ.12): 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 3ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಕೋಲ್ಕತ ನೈಟ್‌ರೈಡರ್ಸ್ ತಂಡ 10 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಕನ್ನಡದ ವೇಗಿ ಪ್ರಸಿದ್ಧ್ ಕೃಷ್ಣ 2 ವಿಕೆಟ್ ಕಬಳಿಸಿ ಕೆಕೆಆರ್ ಪರ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
ಹೌದು, ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ, ಮೊದಲ ಪಂದ್ಯದಲ್ಲೇ ದಾಖಲೆಯ 4 ವಿಕೆಟ್ ಕಬಳಿಸಿ ಮಿಂಚಿದ್ದ ಪ್ರಸಿದ್ಧ್ ಕೃಷ್ಣ, ಇದೀಗ ಐಪಿಎಲ್‌ನಲ್ಲೂ ತಮ್ಮ ಖದರ್ ಮತ್ತೊಮ್ಮೆ ಅನಾವರಣ ಮಾಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಹಾಗೂ ಮೊಹಮ್ಮದ್ ನಭಿ ವಿಕೆಟ್ ಕಬಳಿಸಿ ಕೆಕೆಆರ್ ಗೆಲುವಿನಲ್ಲಿ ಪ್ರಸಿದ್ಧ್ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದರು.
IPL 2021: ಮನೀಶ್ ಪಾಂಡೆ ಹೋರಾಟ ವ್ಯರ್ಥ; ಕೆಕೆಆರ್‌ಗೆ 10 ರನ್ ರೋಚಕ ಗೆಲುವು!
ಕನ್ನಡಿಗರ ಮನಗೆದ್ದ ಪ್ರಸಿದ್ಧ್:
ಟೀಂ ಇಂಡಿಯಾ ಯುವ ವೇಗಿ ಪ್ರಸಿದ್ಧ್ ಕೃಷ್ಣ ತಮ್ಮ ಅಮೋಘ ಪ್ರದರ್ಶನದ ಮೂಲಕ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದರೆ, ಮತ್ತೊಂದೆಡೆ ಪಂದ್ಯ ಆರಂಭಕ್ಕೂ ಮುನ್ನ ಸ್ಟಾರ್ ಸ್ಪೋರ್ಟ್ಸ್ ನಡೆಸಿದ ಸಂದರ್ಶನದಲ್ಲಿ ಕನ್ನಡದಲ್ಲೇ ಉತ್ತರಿಸುವ ಮೂಲಕ ಕನ್ನಡಿಗರ ಮನ ಗೆಲ್ಲುವಲ್ಲಿ ನೀಳಕಾಯದ ವೇಗಿ ಪ್ರಸಿದ್ಧ್ ಕೃಷ್ಣ ಯಶಸ್ವಿಯಾಗಿದ್ದಾರೆ.
ಸಂದರ್ಶನದ ಆಯ್ದ ಸಾರಾಂಶ ಇಲ್ಲಿದೆ ನೋಡಿ:
ಸಂದರ್ಶಕ: ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಬಳಿಕ ನಿಮ್ಮಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ?
ಪ್ರಸಿದ್ಧ್: ಕ್ರಿಕೆಟ್ ಸೇಮ್ ಇದೆ ಎಂದು ನನಗನಿಸುತ್ತಿದೆ. ಆ ಪ್ರದರ್ಶನ ತೋರಿದ್ದ ಬಗ್ಗೆ ನನಗೆ ಖುಷಿ ಇದೆ. ಇದೀಗ ಐಪಿಎಲ್‌ನಲ್ಲೂ ಅದೇ ರೀತಿಯ ಪ್ರದರ್ಶನ ನೀಡಬೇಕು ಎಂದುಕೊಂಡಿದ್ದೇನೆ
ಸಂದರ್ಶಕ: ಆಗ ಮಾರ್ಗನ್ ಇಂಗ್ಲೆಂಡ್ ನಾಯಕರಾಗಿದ್ದರು, ಆ ಸರಣಿಯಲ್ಲಿ ಭಾರತ ನೀವು ಉತ್ತಮ ಪ್ರದರ್ಶನ ನೀಡಿದ್ದೀರ. ಅದಾದ ಬಳಿಕವೂ ನೀವು ಮಾರ್ಗನ್ ಜತೆ ಚರ್ಚೆ ನಡೆಸುತ್ತಿದ್ದೀರಾ?
ಪ್ರಸಿದ್ಧ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯ ವೇಳೆಯೂ ಮಾರ್ಗನ್ ಜತೆ ಮಾತನಾಡುತ್ತಿದ್ದೆವು. ಇಲ್ಲಿ ಐಪಿಎಲ್ ವೇಳೆಯೂ ನಾವು ಚನ್ನಾಗಿಯೇ ಮಾತುಕತೆಗಳನ್ನಾಡುತ್ತಿದ್ದೇವೆ.
ಸಂದರ್ಶಕ: ಕಳೆದ ವರ್ಷದ ಐಪಿಎಲ್‌ಗೆ ಹೋಲಿಸಿದರೆ ಮಾನಸಿಕವಾಗಿ ಹಾಗೆಯೇ ದೈಹಿಕವಾಗಿ ಯಾವೆಲ್ಲಾ ಕೌಶಲ್ಯಗಳು ನಿಮ್ಮಲ್ಲಿ ಬದಲಾವಣೆಗಳಾಗಿವೆ?
ಪ್ರಸಿದ್ದ್: ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಇನ್ನುಳಿದಂತೆ ನನಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎನ್ನುವುದನ್ನು ನೀವೇ ಹೇಳಬೇಕು.
ಸಂದರ್ಶಕ: ಯಾವ ತಂಡವೂ ತವರಿನಲ್ಲಿ ಪಂದ್ಯವನ್ನಾಡುತ್ತಿಲ್ಲ. ಆದರೆ ಕೆಕೆಆರ್ ತಂಡವು 5 ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡಲಿದೆ. ಇದರ ಬಗ್ಗೆ ನೀವೇನಂತೀರಾ?
ಪ್ರಸಿದ್ಧ್: ಬೆಂಗಳೂರಿನಲ್ಲಿ ನಾನು ತುಂಬಾ ಮ್ಯಾಚ್‌ಗಳನ್ನು ಆಡಿದ್ದೇನೆ. ಕನಿಷ್ಟ ಕಳೆದ 10 ವರ್ಷಗಳಿಂದ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡುತ್ತಿದ್ದೇನೆ. ಕೊನೆಯ 5 ಪಂದ್ಯಗಳನ್ನು ಅಲ್ಲಿ ಆಡುವುದರಿಂದ ನನಗೆ ಅನುಕೂಲವಾಗಲಿದೆ. ತಂಡದ ಪರ ಚೆನ್ನಾಗಿ ಆಡಲು ಎದುರು ನೋಡುತ್ತೇನೆ.