* ಶಾರ್ಜಾ ಮೈದಾನದಲ್ಲಿಂದು ಸನ್‌ರೈಸರ್ಸ್‌ ಹೈದರಾಬಾದ್‌ಗೆ ಪಂಜಾಬ್‌ ಸವಾಲು* ಶತಾಯಗತಾಯ ಗೆಲ್ಲಲೇಬೇಕಾದ ಒತ್ತಡದಲ್ಲಿ ರಾಹುಲ್ ಪಡೆ* ಇಂದಾದರೂ ಗೆಲುವಿನ ಹಳಿಗೆ ಮರಳುತ್ತಾ ಸನ್‌ರೈಸರ್ಸ್‌ ಹೈದರಾಬಾದ್‌?

ಶಾರ್ಜಾ(ಸೆ.25): ಶನಿವಾರ ನಡೆಯಲಿರುವ 2ನೇ ಐಪಿಎಲ್‌(IPL 2021) ಪಂದ್ಯದಲ್ಲಿ ಸನ್‌ರೈಸ​ರ್ಸ್‌ ಹೈದರಾಬಾದ್‌ ಹಾಗೂ ಪಂಜಾಬ್‌ ಕಿಂಗ್ಸ್‌(Punjab Kings) ಸೆಣಸಲಿವೆ. ಎರಡೂ ತಂಡಗಳು ಹಿಂದಿನ ಪಂದ್ಯದಲ್ಲಿ ಸೋಲುಂಡಿದ್ದವು. ಈ ಪಂದ್ಯ ಎರಡೂ ತಂಡಗಳಿಗೆ ನಿರ್ಣಾಯಕವೆನಿಸಿದ್ದು, ಸೋತರೆ ಸನ್‌ರೈಸ​ರ್ಸ್‌ ಪ್ಲೇ-ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ. ಇನ್ನು ಪಂಜಾಬ್‌ ಕಿಂಗ್ಸ್‌ ಸೋತರೆ ಪ್ಲೇ-ಆಫ್‌ ರೇಸ್‌ನಿಂದ ಬಹುತೇಕ ಹೊರಬಿದ್ದಂತೆ.

ಸನ್‌ರೈಸ​ರ್ಸ್‌ ಹೈದರಾಬಾದ್(Sunrisers Hyderabad) ಈಗಾಗಲೇ ಆಡಿರುವ 8 ಪಂದ್ಯಗಳಲ್ಲಿ 7ರಲ್ಲಿ ಸೋತಿದೆ. ಇನ್ನೊಂದು ಸೋಲು ತಂಡವನ್ನು ಪ್ಲೇ-ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಹಾಕಲಿದೆ. ಮತ್ತೊಂದೆಡೆ ಪಂಜಾಬ್‌ 9 ಪಂದ್ಯಗಳಲ್ಲಿ 6ರಲ್ಲಿ ಸೋತಿದೆ. ಬಾಕಿ ಇರುವ 5 ಪಂದ್ಯಗಳಲ್ಲಿ 5ರಲ್ಲೂ ಗೆದ್ದರೆ ಪ್ಲೇ-ಆಫ್‌ನಲ್ಲಿ ಸ್ಥಾನ ಸಿಗಬಹುದು.

ಐಪಿಎಲ್‌ ಇತಿಹಾಸದಲ್ಲಿ ಇದುವರೆಗೂ ಉಭಯ ತಂಡಗಳು 17 ಬಾರಿ ಮುಖಮುಖಿಯಾಗಿದ್ದು, ಈ ಪೈಕಿ ಸನ್‌ರೈಸರ್ಸ್ ಹೈದರಾಬಾದ್‌ ಸ್ಪಷ್ಟ ಮೇಲುಗೈ ಸಾಧಿಸಿದೆ. 17 ಪಂದ್ಯಗಳ ಪೈಕಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವು 12 ಬಾರಿ ಗೆಲುವು ದಾಖಲಿಸಿದ್ದರೆ, ಪಂಜಾಬ್ ಕಿಂಗ್ಸ್ ತಂಡವು ಕೇವಲ 5 ಬಾರಿ ಮಾತ್ರ ಗೆಲುವಿನ ರುಚಿ ಕಂಡಿದೆ 

IPL 2021 DC vs RR ಇಂದೇ ಪ್ಲೇ-ಆಫ್‌ಗೆ ಡೆಲ್ಲಿ ಕ್ಯಾಪಿಟಲ್ಸ್‌ ಲಗ್ಗೆ?

ಇಂದಿನ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದಲ್ಲಿ 2 ಬದಲಾವಣೆಗಳನ್ನು ನಿರೀಕ್ಷೆ ಮಾಡಲಾಗಿದೆ. ಸ್ಪಿನ್ನರ್ ಆದಿಲ್ ರಶೀದ್ ಬದಲಿಗೆ ಆಲ್ರೌಂಡರ್ ಕ್ರಿಸ್ ಜೋರ್ಡನ್ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. ಅದೇ ರೀತಿ ಇಶಾನ್ ಪೊರೆಲ್ ಬದಲಿಗೆ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. 

ಸನ್‌ರೈಸರ್ಸ್‌ಗೆ ನಟರಾಜನ್ ಬದಲು ಉಮ್ರಾನ್ ಮಲಿಕ್:

ದುಬೈ: ಕೊರೋನ ಸೋಂಕಿತ ವೇಗಿ ಟಿ.ನಟರಾಜನ್‌(T Natarajan) ಬದಲಿಗೆ ಸನ್‌ರೈಸ​ರ್ಸ್‌ ಹೈದರಾಬಾದ್‌ ಕಾಶ್ಮೀರದ 21 ವರ್ಷದ ವೇಗಿ ಉಮ್ರಾನ್‌ ಮಲಿಕ್‌ರನ್ನು ತಂಡ್ಕೆ ಸೇರಿಸಿಕೊಂಡಿದೆ. ಮಲಿಕ್‌ ತಂಡದ ನೆಟ್‌ ಬೌಲರ್‌ ಆಗಿದ್ದರು. ಮಲಿಕ್‌ ಜಮ್ಮು-ಕಾಶ್ಮೀರ ಪರ ಒಂದು ಟಿ20, ಒಂದು ಲಿಸ್ಟ್‌ ‘ಎ’ ಪಂದ್ಯವನ್ನಾಡಿದ್ದಾರೆ. ನಟರಾಜನ್‌ 10 ದಿನಗಳ ಕಾಲ ಐಸೋಲೇಷನ್‌ನಲ್ಲಿ ಇರಬೇಕಿದೆ.

ಮಧ್ಯಮ ವೇಗಿ ಉಮ್ರಾನ್‌ ಮಲಿಕ್‌ರನ್ನು ಅಲ್ಪಾವಧಿಗೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಹೈದರಾಬಾದ್‌ ತಂಡಕ್ಕೆ ನೆಟ್‌ಬೌಲರ್‌ ಆಗಿ ಆಯ್ಕೆಯಾಗಿದ್ದ ಮಲಿಕ್‌ ಮುಂದಿನ ಕೆಲ ಪಂದ್ಯಗಳಲ್ಲಿ ನಟರಾಜನ್‌ ಬದಲಿಗರಾಗಿ ಆಯ್ಕೆಗೆ ಲಭ್ಯವಿರಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ವಿರುದ್ಧದ ಪಂದ್ಯಕ್ಕೂ ಮುನ್ನ ಸೋಂಕು ಕಾಣಿಸಿಕೊಂಡು ಸದ್ಯ ಐಸೋಲೇಸನ್‌ನಲ್ಲಿರುವ ನಟರಾಜನ್‌ ಸಂಪೂರ್ಣ ಗುಣಮುಖರಾಗಿ ತಂಡಕ್ಕೆ ಮರಳುವವರೆಗೆ ಮಲಿಕ್‌ ತಂಡದಲ್ಲಿರಲಿದ್ದು, ಬಳಿಕ ಮತ್ತೆ ನೆಟ್‌ಬೌಲರ್‌ ಆಗಿ ಮುಂದುವರೆಯಲಿದ್ದಾರೆ. ಮಲಿಕ್‌ ಜಮ್ಮು ಕಾಶ್ಮೀರದ ಪರ ಏಕೈಕ ಟಿ20 ಹಾಗೂ ಲಿಸ್ಟ್‌ ಎ ಪಂದ್ಯವಾಡಿದ್ದು, ಒಟ್ಟು ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಸಂಭವನೀಯ ಆಟಗಾರರ ಪಟ್ಟಿ

ಪಂಜಾಬ್ ಕಿಂಗ್ಸ್‌‌: ಕೆ.ಎಲ್‌ ರಾಹುಲ್‌(ನಾಯಕ), ಮಯಾಂಕ್‌ ಅಗರ್‌ವಾಲ್, ಏಯ್ಡನ್‌ ಮಾರ್ಕ್ರಮ್‌, ನಿಕೋಲಸ್‌ ಪೂರನ್‌, ದೀಪಕ್‌ ಹೂಡಾ, ಫ್ಯಾಬಿಯನ್ ಆ್ಯಲೆನ್‌, ಕ್ರಿಸ್ ಜೋರ್ಡನ್‌‌, ಹರ್ಪ್ರೀತ್‌ ಬ್ರಾರ್‌, ಅಶ್‌ರ್‍ದೀಪ್ ಸಿಂಗ್‌, ಮೊಹಮ್ಮದ್ ಶಮಿ, ರವಿ ಬಿಷ್ಣೋಯಿ‌.

ಸನ್‌ರೈಸರ್ಸ್‌ ಹೈದರಾಬಾದ್: ಡೇವಿಡ್ ವಾರ್ನರ್‌, ವೃದ್ದಿಮಾನ್ ಸಾಹ, ಕೇನ್‌ ವಿಲಿಯಮ್ಸನ್‌(ನಾಯಕ), ಮನೀಶ್ ಪಾಂಡೆ, ಕೇದಾರ್ ಜಾಧವ್‌, ಅಬ್ದುಲ್‌ ಸಮದ್‌, ಜೇಸನ್‌ ಹೋಲ್ಡರ್‌, ರಶೀದ್‌ ಖಾನ್, ಭುವನೇಶ್ವರ್‌ ಕುಮಾರ್, ಸಂದೀಪ್‌ ಶರ್ಮಾ, ಖಲೀಲ್‌ ಅಹಮ್ಮದ್.

ಸ್ಥಳ: ಶಾರ್ಜಾ

ಪಂದ್ಯ ಆರಂಭ: ಸಂಜೆ 7.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌