ನವದೆಹಲಿ(ಮೇ.07): ನೀವೂ ಒಪ್ಪಿ ಅಥವಾ ಒಪ್ಪದಿರಿ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಆಡಿದ ಕೆಲವೇ ಪಂದ್ಯದಲ್ಲಿ ಹೆಚ್ಚು ಸಂಚಲನ ಮೂಡಿಸಿದ ಆಟಗಾರನೆಂದರೆ ಅದು ಪಂಜಾಬ್‌ ಕಿಂಗ್ಸ್‌ನ ಆಲ್ರೌಂಡರ್ ಹರ್ಪ್ರೀತ್ ಬ್ರಾರ್.  

ಕೋವಿಡ್ ಕಾರಣದಿಂದಾಗಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದರೂ ಬ್ರಾರ್‌ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗುತ್ತಿರುವ ಚರ್ಚೆ ನಿಂತಿಲ್ಲ. ಕೆಲದಿನಗಳ ಹಿಂದಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಾಲೆಳೆದಿದ್ದ ಬ್ರಾರ್, ಇದೀಗ ಮಾಜಿ ನೀಲಿತಾರೆ ಮಿಯಾ ಖಲೀಫಾ ಜನ್ಮದಿನಕ್ಕೆ ಟ್ವಿಟರ್ ಮೂಲಕ ಶುಭಕೋರಿದ್ದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

25 ವರ್ಷದ ಎಡಗೈ ಸ್ಪಿನ್ನರ್ ಹರ್ಪ್ರೀತ್ ಬ್ರಾರ್ ಅವರನ್ನು ನೆಟ್ಟಿಗನೊಬ್ಬ, ನೀವು ಸಿಂಗ್ ಈಸ್ ಬ್ಲಿಂಗ್ ಅಕ್ಷರ್ ಕುಮಾರ್ ಅವರಂತೆಯೇ ಕಾಣುತ್ತೀರ ಎಂದು ಟ್ವೀಟ್‌ ಮಾಡಿದ್ದ. ಇದಕ್ಕೆ ತಕ್ಷಣ ಚುರುಕಾದ ಪ್ರತಿಕ್ರಿಯೆ ನೀಡಿದ ಹರ್ಪ್ರೀತ್ ಬ್ರಾರ್, ದುಡ್ಡಿಗಾಗಿ ನಾನು ಪೇಟಾ(ಟರ್ಬನ್) ಕಟ್ಟುವುದಿಲ್ಲ. ನಾನು ರೈತರನ್ನು ಬೆಂಬಲಿಸುತ್ತೇನೆ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ರಾಹುಲ್ ಬ್ಯಾಟಿಂಗ್, ಹರ್ಪ್ರೀತ್ ಬೌಲಿಂಗ್; RCBಗೆ ಶಾಕಿಂಗ್ ಸೋಲು!

ಹರ್ಪ್ರೀತ್ ಬ್ರಾರ್ ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಾಲೆಳೆಯುತ್ತಿದ್ದಂತೆ ಸಾಕಷ್ಟು ಅಭಿಮಾನಿಗಳು ಹಾಗೂ ಫಾಲೋವರ್ಸ್‌ ಪಂಜಾಬ್‌ ಕಿಂಗ್ಸ್ ಸ್ಪಿನ್ನರ್ ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಜಾಲಾಡಿದ್ದಾರೆ. ಈ ವೇಳೆ ಇದೇ ವರ್ಷ ಫೆಬ್ರವರಿ 14ರಂದು ಖ್ಯಾತ ಮಾಜಿ ನೀಲಿತಾರೆ ಮಿಯಾ ಖಲೀಫಾಗೆ ಜನ್ಮದಿನಕ್ಕೆ ಶುಭಕೋರಿದ ಟ್ವೀಟ್ ಗಮನಕ್ಕೆ ಬಂದಿದೆ. ಹರ್ಪ್ರೀತ್ ಬ್ರಾರ್ ತಮ್ಮ ಟ್ವೀಟ್‌ನಲ್ಲಿ ತಡವಾಗಿ ಜನ್ಮದಿನದ ಶುಭಾಶಯಗಳು ಮಿಯಾ ಖಲೀಫಾ ಎಂದು ಟ್ವೀಟ್‌ ಮಾಡಿದ್ದಾರೆ. 

ಈ ಟ್ವೀಟ್‌ ಬಗ್ಗೆ ಸಾಕಷ್ಟು ತಮಾಷೆ ಹಾಗೂ ಟೀಕೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದೇ ವೇಳೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಿರುದ್ದ ರೈತರು ಪ್ರತಿಭಟನೆ ಮಿಯಾ ಖಲೀಫಾ ಬೆಂಬಲ ಸೂಚಿಸಿದಕ್ಕೆ ಹರ್ಪ್ರೀತ್ ಬ್ರಾರ್ ಮಾಜಿ ನೀಲಿತಾರೆಯ ಜನ್ಮದಿನಕ್ಕೆ ಶುಭಕೋರಿರಬಹುದು ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ.

ಟಾಕ್‌ ಆಫ್‌ ದಿ ಟೌನ್‌ ಹರ್ಪ್ರೀತ್ ಬ್ರಾರ್: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ದದ ಪಂದ್ಯದಲ್ಲಿ ಹರ್ಪ್ರೀತ್ ಬ್ರಾರ್ ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಬ್ಯಾಟಿಂಗ್‌ನಲ್ಲಿ ಕೇವಲ 17 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 25 ರನ್‌ ಬಾರಿಸಿದ್ದ ಹರ್ಪ್ರೀತ್ ಬ್ರಾರ್, ಆ ಬಳಿಕ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿವಿಲಿಯರ್ಸ್‌ರನ್ನು ಬಲಿ ಪಡೆದು ಪಂಜಾಬ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.