ಐಪಿಎಲ್ 2021: ಆಟಗಾರರ ಹರಾಜಿಗೆ ಡೇಟ್ ಫಿಕ್ಸ್..?
14ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ನಡೆಯಲಿರುವ ಮಿನಿ ಹರಾಜು ಯಾವಾಗ ಎನ್ನುವ ಗುಟ್ಟನ್ನು ಬಿಸಿಸಿಐ ಉನ್ನತ ಮೂಲಗಳು ಬಿಟ್ಟುಕೊಟ್ಟಿವೆ. ಹಾಗಾದ್ರೆ ಯವಾಗ ಐಪಿಎಲ್ ಹರಾಜು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ನವದೆಹಲಿ(ಜ.23): 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜು ಪ್ರಕ್ರಿಯೆ ಫೆಬ್ರವರಿ 18ರಂದು ನಡೆಯುವ ಸಾಧ್ಯತೆಯಿದೆ. ಹರಾಜು ಪ್ರಕ್ರಿಯೆಯನ್ನು ಎಲ್ಲಿ ನಡೆಸಬೇಕು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
3 ದಿನಗಳ ಹಿಂದಷ್ಟೇ ಎಲ್ಲ 8 ತಂಡಗಳು ತಾವು ಉಳಿಸಿಕೊಳ್ಳಲು ಇಚ್ಛಿಸುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದವು. ಹರಾಜಿನಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಸೇರಿದಂತೆ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಆಟಗಾರರು ಪಾಲ್ಗೊಳ್ಳಲಿದ್ದಾರೆ.
ಗ್ಲೆನ್ ಮ್ಯಾಕ್ಸ್‌ವೆಲ್ ಖರೀದಿಗೆ RCB ಸೇರಿದಂತೆ ಈ 3 ತಂಡಗಳಿಂದ ಪೈಪೋಟಿ..?
ಇದೇ ವೇಳೆ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ನಡೆಸಬೇಕೆ ಇಲ್ಲವೇ ಕಳೆದ ಆವೃತ್ತಿಯಂತೆ ಯುಎಇಗೆ ಸ್ಥಳಾಂತರಿಸಬೇಕೆ ಎನ್ನುವುದನ್ನೂ ಸಹ ಇನ್ನೂ ನಿರ್ಧರಿಸಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತ್ರ ಹಲವು ಬಾರಿ 2021ರ ಐಪಿಎಲ್ ಭಾರತದಲ್ಲೇ ನಡೆಯಲಿದೆ ಎಂದು ಹೇಳಿದ್ದಾರೆ.