ಮುಂಬೈ(ಮೇ.18): 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಸೂಪರ್ ಓವರ್‌ನಿಂದ ಹಿಡಿದು ಕೊನೆಯ ಓವರ್‌ನ ಕೊನೆಯ ಎಸೆತದವರೆಗೂ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ ಪಂದ್ಯಗಳಿಗೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. 

ಈ ಎಲ್ಲಾ ಪಂದ್ಯಗಳ ಪೈಕಿ ಮೇ 1ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್-ಮುಂಬೈ ಇಂಡಿಯನ್ಸ್‌ ಪಂದ್ಯವನ್ನು ದಾಖಲೆಯ ಪ್ರಮಾಣದ ಜನ ವೀಕ್ಷಣೆ ಮಾಡಿದ್ದಾರೆ. ಬಾರ್ಕ್ ಸಂಸ್ಥೆ ವರದಿ ಪ್ರಕಾರ ಈ ಪಂದ್ಯವು ಒಟ್ಟಾರೆ 11.2 ಶತಕೋಟಿ ನಿಮಿಷ ವೀಕ್ಷಣೆಯಾಗಿದೆ. ತನ್ಮೂಲಕ 2021ನೇ ಸಾಲಿನಲ್ಲಿ ಅತಿಹೆಚ್ಚು ಸಲ ವೀಕ್ಷಣೆಯಾದ ಪಂದ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನು ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯು  35.7 ಕೋಟಿ ಜನರ ತಲುಪಿದ ಈವರೆಗಿನ ದಾಖಲೆಯಾಗಿತ್ತು. ಆದರೆ ಭಾರತದಲ್ಲಿ ಕೇವಲ 29 ಪಂದ್ಯ ನಡೆದು ಆ ಬಳಿಕ ಸ್ಥಗಿತಗೊಂಡಿರುವ ಐಪಿಎಲ್ ಟೂರ್ನಿಯನ್ನು 36.7 ಕೋಟಿಯನ್ನು ತಲುಪಿದ ದಾಖಲೆ ಬರೆದಿದೆ.

ಐಪಿಎಲ್ 2021: 'ಆಸ್ಟ್ರೇಲಿಯಾ ಆಟಗಾರರನ್ನು ಸುರಕ್ಷಿತವಾಗಿ ಕಳಿಸಿಕೊಟ್ಟಿದ್ದಕ್ಕೆ ಥ್ಯಾಂಕ್ಯೂ'

ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್‌, ಆರಂಭಿಕ ಬ್ಯಾಟ್ಸ್‌ಮನ್‌ ಫಾಫ್‌ ಡುಪ್ಲೆಸಿಸ್‌, ಮೋಯಿನ್ ಅಲಿ ಹಾಗೂ ಅಂಬಟಿ ರಾಯುಡು ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಕೇವಲ 4 ವಿಕೆಟ್ ಕಳೆದುಕೊಂಡು 218 ರನ್‌ ಬಾರಿಸಿತ್ತು. ಇನ್ನು ಕಠಿಣ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ ಕೀರನ್ ಪೊಲ್ಲಾರ್ಡ್‌ ಏಕಾಂಗಿ ಹೋರಾಟದ ನೆರವಿನಿಂದ ಕೊನೆಯ ಎಸೆತದಲ್ಲಿ ಹಾಲಿ ಚಾಂಪಿಯನ್‌ಗೆ ರೋಚಕ ಗೆಲುವು ತಂದಿತ್ತಿದ್ದರು.

ಬಯೋ ಬಬಲ್‌ನೊಳಗೆ ಕೋವಿಡ್ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಮೇ 04ರಂದು ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona