* ಐಪಿಎಲ್ 2021 ಭಾಗ 2 ಯುಎಇಗೆ ಸ್ಥಳಾಂತರ* ಮುಂಬೈ ಇಂಡಿಯನ್ಸ್‌ ಪರ ಮತ್ತೊಮ್ಮೆ ಕಣಕ್ಕಿಳಿಯುವ ವಿಶ್ವಾಸ ವ್ಯಕ್ತಪಡಿಸಿದ ಬೌಲ್ಟ್* ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ ವೇಳೆಯಲ್ಲಿ ಐಪಿಎಲ್‌ ಭಾಗ 2 ಟೂರ್ನಿ ಆಯೋಜನೆ

ಲಂಡನ್‌(ಜೂ.01): 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಭಾಗ-2 ಯುಎಇಗೆ ಸ್ಥಳಾಂತರಗೊಂಡಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ ವೇಳೆಯಲ್ಲಿ ಇನ್ನುಳಿದ ಐಪಿಎಲ್ ಪಂದ್ಯಗಳನ್ನು ನಡೆಸಲು ಬಿಸಿಸಿಐ ಸಿದ್ದತೆ ನಡೆಸುತ್ತಿದೆ. ಈ ಟೂರ್ನಿಯಲ್ಲಿ ಭಾಗವಹಿಸುವ ಕುರಿತಂತೆ ನ್ಯೂಜಿಲೆಂಡ್ ಹಾಗೂ ಮುಂಬೈ ಇಂಡಿಯನ್ಸ್‌ ತಂಡದ ಯಾರ್ಕರ್ ಸ್ಪೆಷಲಿಸ್ಟ್ ಟ್ರೆಂಟ್‌ ಬೌಲ್ಟ್ ತುಟಿಬಿಚ್ಚಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಐಪಿಎಲ್‌ ಟೂರ್ನಿಯ ಇನ್ನುಳಿದ ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲು ಬಿಸಿಸಿಐ ಈಗಿನಿಂದಲೇ ಸಿದ್ದತೆಯನ್ನು ಆರಂಭಿಸಿದೆ. ಇದರ ಬೆನ್ನಲ್ಲೇ ಐಪಿಎಲ್ ಭಾಗ-2 ಟೂರ್ನಿಯಲ್ಲಿ ಹಲವು ತಾರಾ ವಿದೇಶಿ ಆಟಗಾರರು ಪಾಲ್ಗೊಳ್ಳುವುದು ಅನುಮಾನ ಎನ್ನುವಂತಹ ಮಾತುಗಳು ಕೇಳಿ ಬಂದಿವೆ. ಹೀಗಿರುವಾಗಲೇ ಟ್ರೆಂಟ್ ಬೌಲ್ಟ್‌ ಮತ್ತೊಮ್ಮೆ ಮುಂಬೈ ಇಂಡಿಯನ್ಸ್‌ ಜೆರ್ಸಿ ತೊಡುವ ಮಾತುಗಳನ್ನಾಡಿದ್ದಾರೆ.

ಕಳೆದ ವರ್ಷ ನಾನು ಯುಎಇನಲ್ಲಿ ಚೆನ್ನಾಗಿ ಬೌಲಿಂಗ್‌ ಪ್ರದರ್ಶನ ಮಾಡಿದ್ದೆ. ಮತ್ತೊಮ್ಮೆ ಯುಎಇನಲ್ಲಿ ಆಡಲು ಎದುರು ನೋಡುತ್ತಿದ್ದೇನೆ. ಹೀಗಾಗಿ ಆಡಲು ನನಗೆ ಅವಕಾಶ ಸಿಕ್ಕರೆ, ಟೂರ್ನಿಯನ್ನು ಒಳ್ಳೆಯ ರೀತಿಯಲ್ಲೇ ಮುಗಿಸಲು ಎದುರು ನೋಡುತ್ತೇನೆ ಎಂದು ಟ್ರೆಂಟ್ ಬೌಲ್ಟ್ ಹೇಳಿದ್ದಾರೆ.

ವಿದೇಶಿ ಕ್ರಿಕೆಟಿಗರು ಗೈರಾದ್ರೂ ಐಪಿಎಲ್‌ ನಡೆಯುತ್ತೆ: ರಾಜೀವ್ ಶುಕ್ಲಾ

ಟ್ರೆಂಟ್‌ ಬೌಲ್ಟ್ ಐಪಿಎಲ್ ಭಾಗ-2ರಲ್ಲಿ ಭಾಗವಹಿಸುವುದು ಬಿಡುವುದು ನ್ಯೂಜಿಲೆಂಡ್ ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯನ್ನು ಅವಲಂಭಿಸಿದೆ. ನ್ಯೂಜಿಲೆಂಡ್ ತಂಡವು ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನ ವಿರುದ್ದ ಕ್ರಿಕೆಟ್ ಸರಣಿಯನ್ನು ಆಡಲಿದೆ. ಈ ಸರಣಿ ಇನ್ನೂ ರದ್ದಾಗಿಲ್ಲ. 

31 ವರ್ಷದ ಎಡಗೈ ವೇಗಿ ಸದ್ಯ ಮುಂಬೈ ಇಂಡಿಯನ್ಸ್‌ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಬುಮ್ರಾ ಹಾಗೂ ಬೌಲ್ಟ್ ಜೋಡಿ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ನಡುಕಹುಟ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ. ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಟ್ರೆಂಟ್‌ ಬೌಲ್ಟ್ 15 ಪಂದ್ಯಗಳನ್ನಾಡಿ 7.97ರ ಎಕನಮಿಯಲ್ಲಿ 25 ವಿಕೆಟ್‌ ವಿಕೆಟ್‌ ಕಬಳಿಸುವ ಮೂಲಕ ಮುಂಬೈ ಇಂಡಿಯನ್ಸ್‌ 5ನೇ ಬಾರಿಗೆ ಐಪಿಎಲ್ ಟ್ರೋಫಿ ಜಯಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು.