IPL 2021: ಕೆಕೆಆರ್ ಹ್ಯಾಟ್ರಿಕ್ ಸೋಲಿನ ಬೆನ್ನಲ್ಲೇ 12 ಲಕ್ಷ ದಂಡ ಕಟ್ಟಿದ ನಾಯಕ ಮಾರ್ಗನ್..!
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಆಘಾತಕಾರಿ ಸೋಲು ಕಂಡ ಕೆಕೆಆರ್ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು, ನಾಯಕ ಇಯಾನ್ ಮಾರ್ಗನ್‌ಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಏ.22): 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದ ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ ನೈಟ್ ರೈಡರ್ಸ್ ಆ ಬಳಿಕ ಹ್ಯಾಟ್ರಿಕ್ ಸೋಲುಂಡು ಮುಖಭಂಗ ಅನುಭವಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಮಾಡಿದ ಒಂದು ಎಡವಟ್ಟಿಗೆ ಕೆಕೆಆರ್ ನಾಯಕ ಇಯಾನ್ ಮಾರ್ಗನ್ 12 ಲಕ್ಷ ರುಪಾಯಿ ದಂಡ ತೆತ್ತಿದ್ದಾರೆ.
ಹೌದು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದ ವೇಳೆ ಕೆಕೆಆರ್ ತಂಡ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕೆ ನಾಯಕ ಇಯಾನ್ ಮಾರ್ಗನ್‌ಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. 2021ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡದಿಂದ ಮೊದಲ ಬಾರಿಗೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆಯಾದಂತೆ ಆಗಿದೆ.
ಏಪ್ರಿಲ್ 21ರಂದು ಮುಂಬೈನ ವಾಂಖೇಡೆ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ನಡದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕೆ ಕೋಲ್ಕತ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್‌ಗೆ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ತನ್ನ ಪ್ರಕರಣೆಯಲ್ಲಿ ತಿಳಿಸಿದೆ. ಈ ಮೊದಲು ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ ಸಹಾ ತಮ್ಮ ತಂಡಗಳು ನಿಧಾನಗತಿ ಬೌಲಿಂಗ್ ಮಾಡಿದ ತಪ್ಪಿಗೆ 12 ಲಕ್ಷ ರುಪಾಯಿ ದಂಡ ತೆತ್ತಿದ್ದಾರೆ.
ಗಾಯದ ಮೇಲೆ ಬರೆ: ರೋಹಿತ್‌ಗೆ 12 ಲಕ್ಷ ರುಪಾಯಿ ದಂಡ
ಐಪಿಎಲ್‌ನಲ್ಲಿ ಯಾವುದೇ ತಂಡ ಎರಡನೇ ಬಾರಿಗೆ ಧಾನಗತಿ ಬೌಲಿಂಗ್ ಮಾಡಿದರೆ ತಂಡದ ನಾಯಕನಿಗೆ 24 ಲಕ್ಷ ರುಪಾಯಿ ದಂಡ ಹಾಗೂ ಉಳಿದ ಆಡುವ ಹನ್ನೊಂದರ ಬಳಗದಲ್ಲಿರುವ ಆಟಗಾರರಿಗೆ ಪಂದ್ಯದ ಸಂಭಾವನೆಯ 25% ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಮೂರನೇ ಬಾರಿಗೆ ತಂಡ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದರೆ ನಾಯಕನಿಗೆ 30 ಲಕ್ಷ ರುಪಾಯಿ ದಂಡ ಹಾಗೂ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಬೇಕಾಗುತ್ತದೆ. ಇದೇ ವೇಳೆ ಉಳಿದ ಆಟಗಾರರಿಗೆ ಪಂದ್ಯದ ಸಂಭಾವನೆಯ 50% ದಂಡವಾಗಿ ಪಾವತಿಸಬೇಕಾಗುತ್ತದೆ.