* ಮುಂದುವರೆದ ಅಶ್ವಿನ್-ಮಾರ್ಗನ್ ವಾಕ್ಸಮರ* ಕ್ರೀಡಾಸ್ಪೂರ್ತಿ ಪಾಠ ಮಾಡಿದ ಮಾರ್ಗನ್‌ಗೆ ಅಶ್ವಿನ್ ಕ್ಲಾಸ್* ನೈತಿಕತೆಯ ಪಾಠ ಹೇಳುವ ಹಕ್ಕು ಮಾರ್ಗನ್‌ಗಿಲ್ಲವೆಂದ ಆಫ್ ಸ್ಪಿನ್ನರ್
ದುಬೈ(ಅ.01): ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಹಾಗೂ ಕೆಕೆಆರ್ ತಂಡದ ನಾಯಕ ಇಯಾನ್ ಮಾರ್ಗನ್ (Eoin Morgan) ನಡುವಿನ ಮಾತಿನ ಚಕಮಕಿ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ
ಕೋಲ್ಕತ ನೈಟ್ ರೈಡರ್ಸ್ (KKR) ತಂಡದ ನಾಯಕ ಇಯಾನ್ ಮಾರ್ಗನ್ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿರುವ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಸ್ಪಿನ್ನರ್ ಆರ್.ಅಶ್ವಿನ್, ನಾನು ಕ್ರಿಕೆಟ್ ನಿಯಮದಂತೆ ಆಡಿದ್ದೇನೆ. ಸರಿಯಾದುದನ್ನೇ ಮಾಡಿದ್ದೇನೆ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ರನ್ ಗಳಿಸುವ ವೇಳೆ ರಿಷಭ್ ಪಂತ್‌ಗೆ ಬಾಲ್ ಬಡಿದಿದ್ದನ್ನು ನೋಡಿಲ್ಲ. ಒಂದು ವೇಳೆ ನೋಡಿದ್ದರೂ ನಾನು ರನ್‌ಗಾಗಿ ಓಡುತ್ತಿದ್ದೆ. ಮಾರ್ಗನ್ ಹೇಳಿದಂತೆ ನಾನು ಕ್ರಿಕೆಟ್‌ಗೆ ಯಾವುದೇ ಅವಮಾನ ಮಾಡಿಲ್ಲ’ ಎಂದಿದ್ದಾರೆ. ‘ಕ್ರೀಡಾ ಸ್ಫೂರ್ತಿ ಎಲ್ಲರಿಗೂ ಒಂದೇ. ಅದು ಬೇರೆ ಬೇರೆ ರೀತಿ ಇರುವುದಿಲ್ಲ. ನಾನು ಜಗಳ ಮಾಡಿಲ್ಲ. ನನಗೆ ನನ್ನ ಶಿಕ್ಷಕರು ಹಾಗೂ ಪೋಷಕರು ಕಲಿಸಿದಂತೆಯೇ ನಾನು ನನ್ನ ಪರವಾಗಿ ನಿಂತಿದ್ದೇನೆ. ನಿಮ್ಮ ಮಕ್ಕಳಿಗೂ ಅದನ್ನು ಕಲಿಸಿಕೊಡಿ. ಮೊರ್ಗನ್ ಹಾಗೂ ಟಿಮ್ ಸೌಥಿಯ ಕ್ರಿಕೆಟ್‌ನಲ್ಲಿ ಅವರು ಯಾವುದು ಸರಿ, ಯಾವುದು ತಪ್ಪು ಎಂಬುದರ ಬಗ್ಗೆ ಇತರರಿಗೆ ಕಲಿಸಿಕೊಡಬಹುದು. ಆದರೆ ನೈತಿಕತೆಯ ಪಾಠ ಹೇಳಿಕೊಡುವ ಹಕ್ಕು ಅವರಿಗೆ ಇಲ್ಲ’ ಎಂದು ಕಿಡಿಕಾರಿದ್ದಾರೆ.
ಮಂಗಳವಾರ ಕೆಕೆಆರ್-ಡೆಲ್ಲಿ ಪಂದ್ಯದಲ್ಲಿ ರನ್ ಗಳಿಸುವ ಸಂದರ್ಭ ಕೆಕೆಆರ್‌ನ ತ್ರಿಪಾಠಿ ಫೀಲ್ಡ್ ಮಾಡಿ ಎಸೆದ ಚೆಂಡು ರಿಷಭ್ ಪಂತ್‌ಗೆ ಬಡಿದು ಕ್ಷೇತ್ರರಕ್ಷಕನಿಂದ ದೂರ ಹೋಯಿತು. ಈ ವೇಳೆ ಅಶ್ವಿನ್ ಒಂದು ಹೆಚ್ಚುವರಿ ರನ್ ಕಸಿದರು. ಈ ಪ್ರಸಂಗ ಕೆಕೆಆರ್ ನಾಯಕ ಇಯಾನ್ ಮೊರ್ಗನ್‌ಗೆ ಸಿಟ್ಟು ತರಿಸಿತು. ಅಶ್ವಿನ್ ಹಾಗೂ ಮೊರ್ಗನ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದಾದ ಬಳಿಕ ಮಾರ್ಗನ್‌ರನ್ನು ಶೂನ್ಯಕ್ಕೆ ಔಟ್ ಮಾಡಿದ್ದ ಅಶ್ವಿನ್ ಜೋರಾಗಿ ಕಿರುಚಾಡುತ್ತಾ ಸಂಭ್ರಮಿಸಿದ್ದರು.
IPL 2021 ಅಶ್ವಿನ್ vs ಮಾರ್ಗನ್ ‘ಕ್ರೀಡಾ ಸ್ಫೂರ್ತಿ’ ಕಿತ್ತಾಟ!
ಅಶ್ವಿನ್ ಅವರ ಈ ನಡೆಯ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆಗಳು ವ್ಯಕ್ತವಾಗಿದ್ದವು. ಆಸೀಸ್ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್, ಈ ರೀತಿಯ ಘಟನೆ ನಡೆಯಬಾರದಿತ್ತು. ಅಶ್ವಿನ್ ಅವರ ನಡೆ ಒಪ್ಪುವಂತಹದ್ದಲ್ಲ. ಇಯಾನ್ ಇನ್ನೂ ಸರಿಯಾದ ತಿರುಗೇಟನ್ನು ನೀಡಬೇಕಿತ್ತು ಎಂದು ಟ್ವೀಟ್ ಮಾಡಿದ್ದರು.
ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, 2019ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಘಟನೆಯನ್ನು ನೆನಪಿಸಿಕೊಂಡು ಇಯಾನ್ ಮಾರ್ಗನ್ ಕಾಲೆಳೆದಿದ್ದಾರೆ. ‘2019ರ ವಿಶ್ವಕಪ್ ಫೈನಲ್‌ನಲ್ಲಿ ಫೀಲ್ಡರ್ ಎಸೆದ ಚೆಂಡು ಬೆನ್ ಸ್ಟೋಕ್ಸ್ (Ben Stokes) ಬ್ಯಾಟ್‌ಗೆ ಬಡಿದು ಬೌಂಡರಿಗೆ ಹೋದಾಗ, ಮಾರ್ಗನ್ ಪಿಚ್ ಮೇಲೆ ಕೂತು ಪ್ರತಿಭಟಿಸಿದರು. ವಿಶ್ವಕಪ್ ಎತ್ತಿಹಿಡಿಯಲು ನಿರಾಕರಿಸಿದರು’ ಎಂದು ವ್ಯಂಗ್ಯವಾಡಿದ್ದರು.
