ಐಪಿಎಲ್ 2021: ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿಗೆ ಕೋವಿಡ್ 19 ದೃಢ..!
ಕೋವಿಡ್ ಅಬ್ಬರಕ್ಕೆ 14ನೇ ಅವೃತ್ತಿಯ ಐಪಿಎಲ್ ಟೂರ್ನಿ ಅರ್ಧದಲ್ಲಿಯೇ ರದ್ದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಇದರ ಬೆನ್ನಲ್ಲೇ ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಅಹಮದಾಬಾದ್(ಮೇ.05): ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ, ಬಯೋ ಬಬಲ್‌ನೊಳಗೆ ಕೋವಿಡ್ 19 ಸೋಂಕಿಗೆ ಒಳಗಾದವರ ಪಟ್ಟಿಗೆ ಹೊಸ ಸೇರ್ಪಡೆ ಎನಿಸಿದ್ದಾರೆ. ಸಿಎಸ್‌ಕೆ ಬೌಲಿಂಗ್ ಕೋಚ್ ಲಕ್ಷ್ಮಿಪತಿ ಬಾಲಾಜಿಗೆ ಕೋವಿಡ್ 19 ಸೋಂಕು ದೃಢಪಟ್ಟು ದಿನಕಳೆಯುವುದರೊಳಗಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಮೊದಲ ಕೋವಿಡ್ ಟೆಸ್ಟ್‌ನಲ್ಲಿ ಮೈಕ್ ಹಸ್ಸಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇದನ್ನು ಖಚಿತಪಡಿಸಿಕೊಳ್ಳಲು ಹಸ್ಸಿ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗಲೂ ವರದಿ ಪಾಸಿಟಿವ್ ಬಂದಿದೆ. ಹಸ್ಸಿ ನೀಡಿದ ಸ್ಯಾಂಪಲ್‌ನಲ್ಲಿ ಪಾಸಿಟಿವ್ ಬಂದಿದೆ. ಪುನಃ ಪರೀಕ್ಷೆ ನಡೆಸಲು ಸ್ಯಾಂಪಲ್ ಕಳಿಸಿದಾಗಲು ವರದಿ ಪಾಸಿಟಿವ್ ಬಂದಿದೆ ಎಂದು ಐಪಿಎಲ್ ಮೂಲಗಳು ಪಿಟಿಐಗೆ ತಿಳಿಸಿವೆ ಎಂದು ವರದಿಯಾಗಿದೆ.
ಅಹಮದಾಬಾದ್ ಹಾಗೂ ಡೆಲ್ಲಿಯ ಬಯೋ ಬಬಲ್‌ನೊಳಗೆ ಕೋವಿಡ್ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಮೊದಲಿಗೆ ಕೋಲ್ಕತ ನೈಟ್ ರೈಡರ್ಸ್‌ನ ಆಟಗಾರರಾದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ ಅವರಿಗೆ ಕೋವಿಡ್ ತಗುಲಿರುವುದು ದೃಢಪಟ್ಟಿತ್ತು. ಇದಾದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್ ಕೋಚ್, ಲಕ್ಷ್ಮಿಪತಿ ಬಾಲಾಜಿ, ಸಿಇಒ ಕಾಶಿ ವಿಶ್ವನಾಥ್ ಹಾಗೂ ಸಿಬ್ಬಂದಿಯೊಬ್ಬರಲ್ಲಿ ಕೋವಿಡ್ ಪತ್ತೆಯಾಗಿತ್ತು.
ಐಪಿಎಲ್ ರದ್ದು: ಈ ಸಲ ಕಪ್ ಕೊರೋನಾದ್ದು!
ಇನ್ನು ಮಂಗಳವಾರ(ಮೇ.05)ದಂದು ಡೆಲ್ಲಿ ಕ್ಯಾಪಿಟಲ್ಸ್ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ದಿಮಾನ್ ಸಾಹಗೆ ಕೋವಿಡ್ ಪತ್ತೆಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.
ಆಟಗಾರರು, ವೀಕ್ಷಕ ವಿವರಣೆಗಾರರು ಸೇರಿದಂತೆ 40ಕ್ಕೂ ಅಧಿಕ ಆಸ್ಟ್ರೇಲಿಯಾದ ಮಂದಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಆಸ್ಟ್ರೇಲಿಯಾ ಸರ್ಕಾರವು ಭಾರತದಿಂದ ಬರುವ ವಿಮಾನಗಳಿಗೆ ನಿಷೇಧ ಹೇರಿದೆ. ಹೀಗಾಗಿ ಆಸ್ಟ್ರೇಲಿಯಾದ ಆಟಗಾರರು ಮಾಲ್ಡೀವ್ಸ್‌ಗೆ ತೆರಳಿ ಅಲ್ಲಿಂದ ಅಸ್ಟ್ರೇಲಿಯಾಗೆ ಹಾರಲು ಸಿದ್ದತೆ ನಡೆಸುತ್ತಿದ್ದಾರೆ. ಹೀಗಿದ್ದೂ, ಮೈಕ್ ಹಸ್ಸಿ ಐಸೋಲೇಷನ್‌ನಲ್ಲಿ ಇರಲಿದ್ದು, ಕೋವಿಡ್ 19 ವರದಿ ನೆಗೆಟಿವ್ ಬರುವವರೆಗೂ ಭಾರತದಲ್ಲೇ ಉಳಿಯಲಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
"