Asianet Suvarna News Asianet Suvarna News

IPL 2021 ಫೈನಲ್‌ನಲ್ಲಿ ಸ್ಪೈಡರ್‌ ಕ್ಯಾಮ್‌ ವಿವಾದ: ಡೆಡ್ ಬಾಲ್ ಏನು? ಎತ್ತ?

* ವಿವಾದಕ್ಕೆ ಕಾರಣವಾಯ್ತು ಐಪಿಎಲ್‌ ಫೈನಲ್‌ನಲ್ಲಿ ರಾಯುಡು ಹಿಡಿದ ಕ್ಯಾಚ್‌

* ಚೆಂಡು ಸ್ಪೈಡರ್ ಕ್ಯಾಮ್‌ಗೆ ಬಡಿದಿದ್ದರಿಂದ ಅಂಪೈರ್ ಆ ಎಸೆತವನ್ನು ಡೆಡ್‌ ಬಾಲ್ ಎಂದು ಘೋಷಣೆ

* ಡೆಡ್ ಬಾಲ್ ನಿಯಮ ಏನೆಲ್ಲಾ ಹೇಳುತ್ತೆ ಅಂತ ನಿಮಗೆ ಗೊತ್ತಾ?

IPL 2021 final Spider Camera Saga All Cricket Fans Need to Know Dead Ball Rules kvn
Author
Bengaluru, First Published Oct 16, 2021, 10:07 AM IST

ದುಬೈ(ಅ.16): ಕ್ರಿಕೆಟ್‌ನಲ್ಲಿ ತಂತ್ರಜ್ಞಾನ ಬಳಕೆಯಿಂದ ಎಷ್ಟು ಪ್ರಯೋಜನವಿದೆಯೋ ಕೆಲವೊಮ್ಮೆ ಅಷ್ಟೇ ಸಮಸ್ಯೆಯೂ ಆಗಲಿದೆ. ಟೀವಿ ವೀಕ್ಷಕರಿಗೆ ವಿಭಿನ್ನ ಅನುಭವ ನೀಡಬೇಕು ಎನ್ನುವ ಉದ್ದೇಶದಿಂದ ಕ್ರೀಡಾಂಗಣಗಳಲ್ಲಿ ಸ್ಪೈಡರ್‌ ಕ್ಯಾಮ್‌ (Spider Camara) ಎಂದರೆ ಕ್ರೀಡಾಂಗಣದ ಮೇಲ್ಛಾವಣಿಗೆ ಕಟ್ಟಿರುವ, ಮೈದಾನದ ಯಾವ ಮೂಲೆಗೆ ಬೇಕಿದ್ದರೂ ಸಂಚರಿಸಬಲ್ಲ ಕ್ಯಾಮೆರಾವನ್ನು ಬಳಸಲಾಗುತ್ತದೆ. ಈ ಸ್ಪೈಡರ್‌ ಕ್ಯಾಮ್‌ನ ಕೇಬಲ್‌ಗೆ ಚೆಂಡು ತಗುಲಿ, ಔಟ್‌ ಆಗಿದ್ದರೂ ಬ್ಯಾಟ್ಸ್‌ಮನ್‌ಗೆ ಜೀವದಾನ ದೊರೆತ ಪ್ರಸಂಗ ಶುಕ್ರವಾರ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ನಡೆಯಿತು.

ಬೃಹತ್‌ ಗುರಿ ಬೆನ್ನತ್ತುತ್ತಿದ್ದ ಕೋಲ್ಕತ ನೈಟ್‌ರೈಡ​ರ್ಸ್‌ (Kolkata Knight Riders) ಉತ್ತಮ ಆರಂಭ ಪಡೆದುಕೊಂಡಿತು. ವಿಕೆಟ್‌ ಕೀಳಲು ಹಾತೊರೆಯುತ್ತಿದ್ದ ಚೆನ್ನೈಗೆ 10ನೇ ಓವರ್‌ನಲ್ಲಿ ಅವಕಾಶ ದೊರೆಯಿತು. ರವೀಂದ್ರ ಜಡೇಜಾ (Ravindra Jadeja) ಎಸೆತದಲ್ಲಿ ಶುಭ್‌ಮನ್‌ ಗಿಲ್‌ (Shubman Gill) ಬಾರಿಸಿದ ಚೆಂಡು ಬಹಳ ಎತ್ತರಕ್ಕೆ ಸಂಚರಿಸಿ ಕೆಳಕ್ಕೆ ಬೀಳುವಾಗ ಅಂಬಟಿ ರಾಯುಡು ಕ್ಯಾಚ್‌ ಹಿಡಿದರು. ಚೆನ್ನೈ ವಿಕೆಟ್‌ ಪಡೆದ ಸಂಭ್ರಮದಲ್ಲಿದ್ದಾಗ ಮೈದಾನದಲ್ಲಿದ್ದ ಅಂಪೈರ್‌ಗಳು 3ನೇ ಅಂಪೈರ್‌ರನ್ನು ಸಂಪರ್ಕಿಸಿ, ಔಟ್‌ ಹೌದೋ ಇಲ್ಲವೋ ಎನ್ನುವ ಬಗ್ಗೆ ಗೊಂದಲ ಪರಿಹರಿಸಿಕೊಳ್ಳಲು ಮುಂದಾದರು.

IPL 2021; ಚಾಂಪಿಯನ್ ಕಿರೀಟ ಮುಡಿಗೇರಿಸಿದ CSK; ಧೋನಿ ಸೈನ್ಯಕ್ಕೆ 4ನೇ ಟ್ರೋಫಿ!

ಚೆಂಡು ಕೆಳಕ್ಕೆ ಬೀಳುವ ಮೊದಲು ಸ್ಪೈಡರ್‌ ಕ್ಯಾಮ್‌ನ ಕೇಬಲ್‌ಗೆ ತಗುಲಿದ ಕಾರಣ, ಆ ಎಸೆತವನ್ನು ‘ಡೆಡ್‌ ಬಾಲ್‌’ (Dead Ball) ಎಂದರೆ ಎಸೆತ ಪರಿಗಣನೆಗೆ ಇಲ್ಲ ಎಂದು ತೀರ್ಮಾನಿಸಲಾಯಿತು. ಗಿಲ್‌ಗೆ ಜೀವದಾನ ದೊರೆಯಿತು. ಈ ನಿಮಿಷದ ಬಗ್ಗೆ, ಸ್ಪೈಡರ್‌ ಕ್ಯಾಮ್‌ ಬಳಕೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆ ನಡೆದಿದ್ದಲ್ಲದೇ, ಅನೇಕರಿಂದ ಟೀಕೆ ಸಹ ವ್ಯಕ್ತವಾಯಿತು.

ಡೆಡ್ ಬಾಲ್‌ ನಿಯಮಗಳೇನು..?

* ನಿಯಮಬದ್ದವಲ್ಲದ ಎಸೆತಗಳನನ್ನು ಅಂಪೈರ್ ಡೆಡೆ ಬಾಲ್ ಎಂದು ಘೋಷಿಸುತ್ತಾರೆ. 

* ಒಂದು ವೇಳೆ ಬ್ಯಾಟ್ಸ್‌ಮನ್‌ ಬೌಲಿಂಗ್‌ ಎದುರಿಸಲು ಸಿದ್ದನಿಲ್ಲದೇ ಇದ್ದಾಗಲೂ ಬೌಲಿಂಗ್ ಮಾಡಿದರೆ ಅದನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತದೆ.

* ಚೆಂಡು ಅಂತಿಮವಾಗಿ ವಿಕೆಟ್‌  ಕೀಪರ್ ಅಥವಾ ಬೌಲರ್‌ ಕೈ ಸೇರಿದ ಬಳಿಕ, ಬ್ಯಾಟ್ಸ್‌ಮನ್‌ ಸಹಜವಾಗಿಯೇ ರನ್‌ ಓಡುವಂತಿಲ್ಲ. 

* ಚೆಂಡು ಬೌಂಡರಿ ಅಥವಾ ಸಿಕ್ಸರ್‌ ಗೆರೆ ದಾಟಿದ ನಂತರ ಬ್ಯಾಟ್ಸ್‌ಮನ್‌ ಮತ್ತೆ ಹೆಚ್ಚುವರಿ ರನ್‌ ಓಡುವಂತಿಲ್ಲ.

* ಬ್ಯಾಟ್ಸ್‌ಮನ್ ಬಾರಿಸಿದ ಚೆಂಡು ಅಂಪೈರ್ ಅವರಿಗೆ ತಗುಲಿದರೆ ಅದನ್ನು ಡೆಡ್‌ ಬಾಲ್ ಎಂದು ಪರಿಗಣಿಸಲಾಗುತ್ತದೆ.

* ಕ್ಷೇತ್ರ ರಕ್ಷಕ ಅಥವಾ ವಿಕೆಟ್‌ ಕೀಪರ್ ಮೈದಾನದಲ್ಲಿಟ್ಟ ಹೆಲ್ಮೆಟ್‌ಗೆ ಬಡಿದರೆ ಅದನ್ನು ಡೆಡ್‌ ಬಾಲ್ ಎನ್ನಲಾಗುತ್ತದೆ. 

* ಆಟಗಾರರಿಗೆ ಗಾಯವಾದಗ ಅಥವಾ ನಿಯಮಬದ್ದವಲ್ಲದ ಆಟ ಕಂಡು ಬಂದಾಗ ಅಂಪೈರ್ ಮಧ್ಯ ಪ್ರವೇಶಿಸಿ ಆ ಎಸೆತವನ್ನು ಡೆಡ್ ಬಾಲ್ ಎಂದು ಘೋಷಿಸುತ್ತಾರೆ.

ಚೆನ್ನೈ ಸೂಪರ್ ಕಿಂಗ್ಸ್‌ 4ನೇ ಬಾರಿಗೆ ಚಾಂಪಿಯನ್‌

14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ ನೈಟ್‌ ರೈಡರ್ಸ್‌ ವಿರುದ್ದ 27 ರನ್‌ಗಳ ಅಂತರದ ಗೆಲುವು ಸಾಧಿಸುವ ಮೂಲಕ ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ 4 ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. 

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 192 ರನ್‌ ಕಲೆಹಾಕಿತ್ತು. ಫಾಫ್ ಡು ಪ್ಲೆಸಿಸ್‌ 86 ರನ್‌ ಬಾರಿಸಿದರೆ, ಉತ್ತಪ್ಪ 31, ಗಾಯಕ್ವಾಡ್ 32 ಹಾಗೂ ಮೋಯಿನ್ ಅಲಿ ಅಜೇಯ 37 ರನ್ ಚಚ್ಚುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು. 

ಇನ್ನು ಸವಾಲಿನ ಮೊತ್ತ ಬೆನ್ನತ್ತಿದ ಕೆಕೆಆರ್ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಶುಭ್‌ಮನ್‌ ಗಿಲ್‌(51) ಹಾಗೂ ವೆಂಕಟೇಶ್ ಅಯ್ಯರ್(50) ರನ್‌ ಬಾರಿಸಿದರಾದರೂ ಆ ಬಳಿಕ ನಾಟಕೀಯ ಕುಸಿತ ಕಂಡ ಇಯಾನ್ ಮಾರ್ಗನ್ ಪಡೆ 165 ರನ್‌ ಗಳಿಸಲಷ್ಟೇ ಶಕ್ತವಾಯಿತು.
 

Follow Us:
Download App:
  • android
  • ios