ಐಪಿಎಲ್ ಮೇಲೂ ಕರೋನಾ ಕೆಂಗಣ್ಣು; ಶುರುವಾಯ್ತು ಆತಂಕ..!
ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ಹೆಮ್ಮಾರಿ ವಕ್ರದೃಷ್ಠಿ ಇದೀಗ 14ನೇ ಆವೃತ್ತಿಯ ಐಪಿಎಲ್ ಮೇಲೂ ಬಿದ್ದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಏ.04): ದೇಶದೆಲ್ಲೆಡೆ ಅತ್ಯಂತ ವೇಗವಾಗಿ ವ್ಯಾಪಿಸುತ್ತಿರುವ ಮಹಾಮಾರಿ ಕೊರೋನಾ ಸೋಂಕಿನ ಕೆಂಗಣ್ಣು ಇದೀಗ ಐಪಿಎಲ್ ಮೇಲೆ ಬಿದ್ದಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗತೊಡಗಿದೆ.
14ನೇ ಆವೃತ್ತಿಯ ಐಪಿಎಲ್‌ಗೆ ಇನ್ನು ಐದು ದಿನಗಳು ಮಾತ್ರ ಬಾಕಿ ಉಳಿದಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರಮುಖ ಆಟಗಾರ ಅಕ್ಷರ್ ಪಟೇಲ್, ಮುಂಬೈನ ವಾಂಖೆಡೆ ಕ್ರೀಡಾಂಗಣದ 10 ಸಿಬ್ಬಂದಿ, 6 ಮಂದಿ ಈವೆಂಟ್ ಮ್ಯಾನೇಜರ್‌ಗಳು ಹಾಗೂ ಚೆನ್ನೈ ಸೂಪರ್‌ಕಿಂಗ್ಸ್‌ನ ಮೀಡಿಯಾ ಕಂಟೆಂಟ್ ರೈಟರ್‌ಗೆ ಕೊರೋನಾ ಸೋಂಕು ಹಬ್ಬಿರುವುದು ದೃಢಪಟ್ಟಿದೆ.
ಕ್ರೀಡಾಂಗಣದ ಸಿಬ್ಬಂದಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಏ.10ರಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಬೇಕಿರುವ ಪಂದ್ಯಕ್ಕೆ ಆತಂಕ ಶುರುವಾಗಿದೆ. ಈ ಆವೃತ್ತಿಯಲ್ಲಿ ವಾಖೆಂಡೆ ಕ್ರೀಡಾಂಗಣ ಏ.10ರಿಂದ 25ರ ತನಕ 10 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಒಂದೊಮ್ಮೆ ಸೋಂಕು ಮಿತಿ ಮೀರಿದರೆ ಇಂದೋರ್ ಹಾಗೂ ಹೈದರಾಬಾದ್ ಅನ್ನು ಬದಲಿ ಸ್ಥಳವಾಗಿ ಕಾಯ್ದಿರಿಸಲಾಗಿದೆ.
IPL 2021: ಡೆಲ್ಲಿಗೆ ಮತ್ತೊಂದು ಶಾಕ್, ಸ್ಟಾರ್ ಆಟಗಾರಿಗೆ ಕೊರೋನಾ ಸೋಂಕು..!
ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಪೂರ್ವ ನಿಗದಿಯಂತೆ ಮುಂಬೈನಲ್ಲೇ ಪಂದ್ಯಗಳನ್ನು ಆಡಲಿಸಲು ಬಿಸಿಸಿಐ ಹೆಚ್ಚು ಆಸಕ್ತಿ ಹೊಂದಿದೆ. ಹೈದರಾಬಾದ್ ಅನ್ನು ಮೀಸಲು ಸ್ಥಳವಾಗಿ ಕಾಯ್ದಿರಿಸಿರುವುದು ನಿಜ. ಆದರೆ, ಇಷ್ಟು ಕಡಿಮೆ ಅವಧಿಯಲ್ಲಿ ಪಂದ್ಯ ಸ್ಥಳಾಂತರ ಮಾಡುವುದು, ಬಯೋಬಬುಲ್ ವಲಯ ಸೃಷ್ಟಿಸುವುದು ಕಷ್ಟಸಾಧ್ಯ. ಆದಕಾರಣ ಸುರಕ್ಷಿತವಾಗಿ ಮುಂಬೈನಲ್ಲೇ ಪಂದ್ಯಗಳನ್ನು ಆಡಿಸುವುದಾಗಿ ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನಲ್ಲಿ ಯಾವುದೇ ತಂಡವು ವಾಖೆಂಡೆಗೆ ಭೇಟಿ ನೀಡಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಆಟಗಾರರು ಬ್ರಬೋರ್ನ್ ಕ್ರೀಡಾಂಗಣ ಮತ್ತು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಕೆಕೆಆರ್ ತಂಡವು ನವಿ ಮುಂಬೈನಲ್ಲಿ ಅಭ್ಯಾಸ ನಿರತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.