ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂಗೆ ಹೋಲಿಸಿದರೆ, ದೆಹಲಿ ಪಿಚ್ ಕ್ರಿಕೆಟ್ ಆಡಲು ಹೇಳಿ ಮಾಡಿಸಿದಂತಿದೆ ಎಂದು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಏ.30): ರಾಜಸ್ಥಾನ ರಾಯಲ್ಸ್‌ ವಿರುದ್ಧ ಗುರುವಾರ ಗೆಲುವು ಸಾಧಿಸಿದ ಬಳಿಕ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾ, ಚೆನ್ನೈ ಪಿಚ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. 

ಪ್ರಶಸ್ತಿ ವಿತರಣಾ ಸಮಾರಂಭದ ವೇಳೆ ಮಾತನಾಡಿದ ರೋಹಿತ್‌, ‘ದೆಹಲಿ ಕ್ರೀಡಾಂಗಣದ ಪಿಚ್‌ ಉತ್ತಮ ಗುಣಮಟ್ಟದಾಗಿರಲಿದೆ ಎಂದು ನಮ್ಮ ಆಟಗಾರರಿಗೆ ತಿಳಿದಿತ್ತು. ಈ ಪಿಚ್‌ ಚೆನ್ನೈನಂತಲ್ಲ ಎಂದು ಮೊದಲೇ ತಿಳಿದುಕೊಂಡಿದ್ದೆವು’ ಎಂದರು. ಚೆನ್ನೈ ಪಿಚ್‌ ಬಗ್ಗೆ ರಾಜಸ್ಥಾನ ರಾಯಲ್ಸ್‌ ತಂಡದ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ ಸಹ ಕೆಲ ದಿನಗಳ ಹಿಂದೆ ಟೀಕೆ ಮಾಡಿದ್ದರು.

ಐಪಿಎಲ್ 2021‌: ರಾಯಲ್ಸ್ ಎದುರು ಭರ್ಜರಿ ಗೆಲುವು ಸಾಧಿಸಿದ ಮುಂಬೈ

ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಐದು ಪಂದ್ಯಗಳನ್ನಾಡಿದ ರೋಹಿತ್ ಶರ್ಮಾ ನೇತೃತ್ವದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಕೇವಲ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿತ್ತು. ಚೆನ್ನೈ ಆವೃತ್ತಿಯ ಕೊನೆಯ ಎರಡು ಪಂದ್ಯಗಳಲ್ಲೂ ಸೋಲಿನ ಮುಖಭಂಗ ಅನುಭವಿಸಿದ್ದ ಮುಂಬೈ ಇಂಡಿಯನ್ಸ್, ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ದ 7 ವಿಕೆಟ್‌ಗಳ ಗೆಲುವು ದಾಖಲಿಸಿತ್ತು.