ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌, ರಾಜಸ್ಥಾನ ರಾಯಲ್ಸ್ ವಿರುದ್ದ 7 ವಿಕೆಟ್‌ಗಳ ಗೆಲುವು ದಾಖಲಿಸುವ ಮೂಲಕ ಜಯದ ಹಳಿಗೆ ಮರಳಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಏ.29): ಕ್ವಿಂಟನ್‌ ಡಿ ಕಾಕ್‌ ಬಾರಿಸಿದ ಅಜೇಯ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ವಿರುದ್ದ ಮುಂಬೈ ಇಂಡಿಯನ್ಸ್‌ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಮತ್ತೆ ಗೆಲುವಿನ ಹಳಿಗೆ ಮರಳುವಲ್ಲಿ ಹಾಲಿ ಚಾಂಪಿಯನ್ ಯಶಸ್ವಿಯಾಗಿದೆ.

ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ರಾಜಸ್ಥಾನ ರಾಯಲ್ಸ್ ನೀಡಿದ್ದ 172 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ಗೆ ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿ ಕಾಕ್ ಉತ್ತಮ ಆರಂಭ ಒದಗಿಸಿಕೊಟ್ಟಿತು. ಮೊದಲ ವಿಕೆಟ್‌ಗೆ ಈ ಜೋಡಿ 6 ಓವರ್‌ಗೆ 49 ರನ್‌ಗಳ ಜತೆಯಾಟವಾಡಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕ್ರಿಸ್ ಮೋರಿಸ್ ಯಶಸ್ವಿಯಾದರು. ರೋಹಿತ್ ಶರ್ಮಾ 14 ರನ್ ಬಾರಿಸಿ ಚೇತನ್ ಸಕಾರಿಯಾಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ 16 ರನ್‌ ಬಾರಿಸಿ ಮೋರಿಸ್‌ಗೆ ಎರಡನೇ ಬಲಿಯಾದರು.

ಮಿನುಗಿದ ಡಿ ಕಾಕ್‌-ಕೃನಾಲ್‌: ಸೂರ್ಯಕುಮಾರ್ ವಿಕೆಟ್ ಪತನದ ಬಳಿಕ ಜತೆಯಾದ ಡಿ ಕಾಕ್ ಹಾಗೂ ಕೃನಾಲ್ ಪಾಂಡ್ಯ 3ನೇ ವಿಕೆಟ್‌ಗೆ 63 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಕೃನಾಲ್ ಪಾಂಡ್ಯ 26 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 39 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ನೆಲಕಚ್ಚಿ ಆಡಿದ ಕ್ವಿಂಟನ್ ಡಿ ಕಾಕ್ 50 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 70 ರನ್ ಬಾರಿಸಿದರೆ, ಪೊಲ್ಲಾರ್ಡ್‌ 16 ರನ್ ಚಚ್ಚಿ ತಂಡವನ್ನು ಗೆಲುವಿನ ದಡ ಸೇರಿಸಿದರು.