ನವದೆಹಲಿ(ಏ.14): ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮಾರಕ ವೇಗಿ ಆ್ಯನ್ರಿಚ್ ನೊಕಿಯೆಗೆ ಕೋವಿಡ್‌ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ದಕ್ಷಿಣ ಆಫ್ರಿಕಾ ವೇಗಿ ಆ್ಯನ್ರಿಚ್ ನೊಕಿಯೆ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದದ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಆ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್‌ 7 ವಿಕೆಟ್‌ಗಳಿಂದ ಜಯಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು.

ದಕ್ಷಿಣ ಆಫ್ರಿಕಾ ವೇಗಿಗಳಾದ ಆ್ಯನ್ರಿಚ್ ನೊಕಿಯೆ ಹಾಗೂ ಕಗಿಸೋ ರಬಾಡ ಪಾಕಿಸ್ತಾನ ವಿರುದ್ದದ ಸೀಮಿತ ಓವರ್‌ಗಳ ಸರಣಿಯನ್ನು ಅರ್ಧದಲ್ಲೇ ತೊರೆದು ಏಪ್ರಿಲ್ 06ರಂದು ಮುಂಬೈಗೆ ಬಂದಿಳಿದಿದ್ದರು. ಈ ಇಬ್ಬರು ಆಟಗಾರರು ಕ್ವಾರಂಟೈನ್‌ನಲ್ಲಿದ್ದಿದ್ದರಿಂದ ಏಪ್ರಿಲ್‌ 10ರಂದು ಚೆನ್ನೈ ವಿರುದ್ದ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಲ್ಗೊಂಡಿರಲಿಲ್ಲ.

IPL 2021 ಗಾಯದ ಮೇಲೆ ಬರೆ; ರಾಜಸ್ಥಾನ ರಾಯಲ್ಸ್‌ನಿಂದ ಬೆನ್ ಸ್ಟೋಕ್ಸ್‌ ಔಟ್‌

14ನೇ ಆವೃತ್ತಿಯ ಐಪಿಎಲ್‌ ಆಡಲು ಭಾರತಕ್ಕೆ ಬಂದಿಳಿಯುವ ಮುನ್ನ ಪಾಕಿಸ್ತಾನ ವಿರುದ್ದದ ಮೊದಲೆರಡು ಏಕದಿನ ಪಂದ್ಯದಲ್ಲಿ ಆ್ಯನ್ರಿಚ್ ನೊಕಿಯೆ 7 ವಿಕೆಟ್‌ ಕಬಳಿಸಿ ಮಿಂಚಿದ್ದರು. ಇನ್ನು ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆ್ಯನ್ರಿಚ್ ನೊಕಿಯೆ ಕೇವಲ 16 ಪಂದ್ಯಗಳನ್ನಾಡಿ 22 ವಿಕೆಟ್‌ ಕಬಳಿಸಿ ಗಮನ ಸೆಳೆದಿದ್ದರು. ಇನ್ನು ರಾಜಸ್ಥಾನ ರಾಯಲ್ಸ್‌ ವಿರುದ್ದದ ಪಂದ್ಯದಲ್ಲಿ ಆ್ಯನ್ರಿಚ್ ನೊಕಿಯೆ 156.22 ಕಿ.ಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದರು.