14ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ದಿನದಿಂದ ದಿನಕ್ಕೆ ಕೊರೋನಾ ಕಂಟಕವಾಗಿ ಪರಿಣಮಿಸುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಮುಂಬೈ(ಏ.06): 14ನೇ ಆವೃತ್ತಿಯ ಐಪಿಎಲ್‌ ಆರಂಭಕ್ಕೆ ಇನ್ನು ಕೇವಲ 3 ದಿನಗಳು ಮಾತ್ರ ಬಾಕಿ ಇದ್ದು, ಟೂರ್ನಿಗೆ ಕೊರೋನಾತಂಕ ಹೆಚ್ಚುತ್ತಲೇ ಇದೆ. ಪಂದ್ಯಗಳ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್‌ ಸ್ಪೋರ್ಟ್ಸ್‌ ಸಂಸ್ಥೆಯ 15 ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 

ಮುಂಬೈನ ಹೋಟೆಲ್‌ನಲ್ಲಿ ನಿರ್ಮಿಸಿದ್ದ ಬಯೋ ಬಬಲ್‌ನಲ್ಲಿದ್ದ ಕ್ಯಾಮೆರಾಮೆನ್‌, ಪ್ರೊಡ್ಯೂಸರ್‌ ಸೇರಿ ಇತರ ಸಿಬ್ಬಂದಿ ಸೋಂಕಿತರಾಗಿದ್ದು, ಅವರನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿದೆ. ಪಂದ್ಯಗಳ ಪ್ರಸಾರಕ್ಕೆ ಸ್ಟಾರ್‌ ವಾಹಿನಿಗೆ ಮಾನವ ಸಂಪನ್ಮೂಲದ ಕೊರತೆ ಎದುರಾಗುವ ಭೀತಿ ಶುರುವಾಗಿದೆ. ಇತ್ತೀಚೆಗಷ್ಟೇ ವಾಂಖೇಡೆ ಕ್ರೀಡಾಂಗಣದ 10 ಮಂದಿ ಮೈದಾನ ಸಿಬ್ಬಂದಿ, ಕೆಲ ಈವೆಂಟ್‌ ಮ್ಯಾನೇಜರ್‌ಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು.

IPL 2021: ಆರ್‌ಸಿಬಿಯ ಈ ತಂಡ ಐಪಿಎಲ್‌ ಚಾಂಪಿಯನ್‌ ಪಟ್ಟ ಅಲಂಕರಿಸಬಹುದು..!

ಮುಂಬೈನಲ್ಲಿ ಐಪಿಎಲ್‌ ಪಂದ್ಯಗಳಿಗಿಲ್ಲ ಅಡ್ಡಿ

ಮುಂಬೈ: ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ, ಭಾನುವಾರವಷ್ಟೇ ಮಹಾರಾಷ್ಟ್ರ ಸರ್ಕಾರ ವೀಕೆಂಡ್‌ ಲಾಕ್‌ಡೌನ್‌ ಜಾರಿಗೊಳಿಸಿತ್ತು. ಶುಕ್ರವಾರ ಸಂಜೆ 8ರಿಂದ ಸೋಮವಾರ ಬೆಳಗ್ಗೆ ವರೆಗೂ ಅನೇಕ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಆದರೆ ಐಪಿಎಲ್‌ ಪಂದ್ಯಗಳನ್ನು ನಡೆಸಲು ಯಾವುದೇ ಅಡ್ಡಿಯಿಲ್ಲ ಎಂದು ಮಹಾರಾಷ್ಟ್ರದ ಸಚಿವ ನವಾಬ್‌ ಮಲಿಕ್‌ ಸ್ಪಷ್ಟಪಡಿಸಿದ್ದಾರೆ. 

ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಕೊರೋನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಸೂಚಿಸಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ರಾತ್ರಿ 8 ಗಂಟೆಯ ನಂತರ ತಂಡಗಳು ಅಭ್ಯಾಸಕ್ಕೆ ಪ್ರಯಾಣಿಸಲು, ಅಭ್ಯಾಸ ನಡೆಸಲು ಸಹ ಅನುಮತಿ ನೀಡಲಾಗಿದೆ.