ನವದೆಹಲಿ(ಏ.28): ಸತತ 4 ಗೆಲುವು ಸಾಧಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಚೆನ್ನೈ ಸೂಪರ್‌ ಕಿಂಗ್ಸ್‌, ಬುಧವಾರ ಆರಂಭಗೊಳ್ಳಲಿರುವ ದೆಹಲಿ ಚರಣದಲ್ಲಿ ಸನ್‌ರೈಸ​ರ್ಸ್‌ ಹೈದರಾಬಾದ್‌ ವಿರುದ್ಧ ಸೆಣಸಲಿದೆ. 

ಮೊದಲ 5 ಪಂದ್ಯಗಳನ್ನೂ ಮುಂಬೈನಲ್ಲೇ ಆಡಿದ ಧೋನಿ ಪಡೆ, ದೆಹಲಿಯಲ್ಲೂ ಶುಭಾರಂಭ ಮಾಡಿ ಸತತ 5ನೇ ಗೆಲುವು ದಾಖಲಿಸಲು ಎದುರು ನೋಡುತ್ತಿದೆ. ಇನ್ನು 5 ಪಂದ್ಯಗಳಲ್ಲಿ 4ರಲ್ಲಿ ಸೋಲು ಕಂಡಿರುವ ಸನ್‌ರೈಸ​ರ್ಸ್‌ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಿಂದ ಮೇಲೇಳುವ ಎದುರು ನೋಡುತ್ತಿದೆ.

ಒಂದು ಕಡೆ ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಭರ್ಜರಿ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಧೋನಿ ನೇತೃತ್ವದ ಸಿಎಸ್‌ಕೆ ತಂಡ ಮತ್ತೊಮ್ಮೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಎದುರು ನೋಡುತ್ತಿದೆ. ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೂಪರ್‌ ಓವರ್‌ನಲ್ಲಿ ಆಘಾತಕಾರಿ ಸೋಲು ಕಂಡಿರುವ ಸನ್‌ರೈಸರ್ಸ್‌ ಶತಾಯಗತಾಯ ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ.

IPL 2021 ಹೆಟ್ಮೇಯರ್ ಹೋರಾಟ ವ್ಯರ್ಥ: ಆರ್​ಸಿಬಿಗೆ 1ರನ್​ಗಳ ರೋಚಕ ಜಯ

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ಡು ಪ್ಲೆಸಿ, ಋುತುರಾಜ್‌, ರೈನಾ, ರಾಯುಡು, ಧೋನಿ(ನಾಯಕ), ಜಡೇಜಾ, ಸ್ಯಾಮ್‌ ಕರ್ರನ್‌, ಬ್ರಾವೋ, ಶಾರ್ದೂಲ್‌, ದೀಪಕ್‌, ಎನ್‌ಗಿಡಿ.

ಸನ್‌ರೈಸ​ರ್ಸ್‌: ವಾರ್ನರ್‌(ನಾಯಕ), ಬೇರ್‌ಸ್ಟೋವ್‌, ವಿಲಿಯಮ್ಸನ್‌, ಪಾಂಡೆ, ಕೇದಾರ್‌, ಶಂಕರ್‌, ಅಭಿಷೇಕ್‌, ಸುಚಿತ್‌, ರಶೀದ್‌, ಖಲೀಲ್‌, ಕೌಲ್‌.

ಸ್ಥಳ: ದೆಹಲಿ
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್