* ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಿಂದು ರಾಜಸ್ಥಾನ ರಾಯಲ್ಸ್ ಸವಾಲು* ಈಗಾಗಲೇ ಪ್ಲೇ ಆಫ್ ಹಂತಕ್ಕೆ ಲಗ್ಗೆಯಿಟ್ಟಿರುವ ಸಿಎಸ್‌ಕೆ ತಂಡ* ರಾಜಸ್ಥಾನ ರಾಯಲ್ಸ್ ತಂಡಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ
ಅಬುಧಾಬಿ(ಅ.02): ಈಗಾಗಲೇ ಪ್ಲೇ-ಆಫ್ ಪ್ರವೇಶಿಸಿರುವ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings), ಶನಿವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ಉಳಿದುಕೊಳ್ಳಲು ಎದುರು ನೋಡುತ್ತಿದೆ. ಪ್ಲೇ-ಆಫ್‌ನಲ್ಲಿ ಕ್ವಾಲಿಫೈಯರ್ 1 ಪಂದ್ಯಕ್ಕೆ ಅರ್ಹತೆ ಪಡೆದು ಗೆದ್ದರೆ ನೇರವಾಗಿ ಫೈನಲ್‌ಗೆ ಪ್ರವೇಶ ಸಿಗಲಿದೆ. ಹೀಗಾಗಿ ಚೆನ್ನೈ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲೇ ಉಳಿದುಕೊಳ್ಳುವ ಗುರಿ ಹೊಂದಿದೆ.
ಮತ್ತೊಂದೆಡೆ ಸತತ 3 ಪಂದ್ಯಗಳಲ್ಲಿ ಸೋತು ಲೀಗ್ ಹಂತದಲ್ಲೇ ಹೊರಬೀಳುವ ಆತಂಕಕ್ಕೆ ಸಿಲುಕಿರುವ ರಾಜಸ್ಥಾನ ರಾಯಲ್ಸ್ (Rajasthan Royals)ಗೆ ಇದು ನಿರ್ಣಾಯಕ ಪಂದ್ಯ. ಈ ಪಂದ್ಯದಲ್ಲಿ ಸೋತರೆ ಸಂಜು ಸ್ಯಾಮ್ಸನ್ (Sanju Samson) ಪಡೆ ಪ್ಲೇ-ಆಫ್ ರೇಸ್‌ನಿಂದ ಹೊರಬೀಳಲಿದೆ. ಈಗಾಗಲೇ ಪ್ಲೇ-ಆಫ್‌ಗೇರುವ 3 ತಂಡಗಳು ಯಾವ್ಯಾವು ಎನ್ನುವುದು ಹೆಚ್ಚೂ ಕಡಿಮೆ ನಿರ್ಧಾರವಾಗಿದೆ.
IPL 2021 ಡೆಲ್ಲಿ ಎದುರು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಮುಂಬೈ ಇಂಡಿಯನ್ಸ್
ಇನ್ನುಳಿದ ಒಂದು ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೆಯುತ್ತಿದ್ದು, ನೆಟ್ ರನ್‌ರೇಟ್‌ನ ಆಧಾರದಲ್ಲಿ 4ನೇ ಸ್ಥಾನ ನಿರ್ಧಾರವಾಗುವ ಸಾಧ್ಯತೆಯೇ ಹೆಚ್ಚು. ರಾಜಸ್ಥಾನ ಕಳಪೆ ನೆಟ್ ರನ್‌ರೇಟ್ ಹೊಂದಿರುವ ಕಾರಣ, ಅಂತಿಮ 2 ಪಂದ್ಯಗಳಲ್ಲಿ ಗೆದ್ದರೂ ಅಗ್ರ 4ರಲ್ಲಿ ಸ್ಥಾನ ಸಿಗುವುದು ಕಷ್ಟವಾಗಲಿದೆ. ಹೀಗಾಗಿ, ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.
ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 11 ಪಂದ್ಯಗಳನ್ನಾಡಿ 9 ಗೆಲುವು ಹಾಗೂ 2 ಸೋಲುಗಳೊಂದಿಗೆ 18 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನೊಂದೆಡೆ ರಾಜಸ್ಥಾನ ರಾಯಲ್ಸ್ ತಂಡವು 11 ಪಂದ್ಯಗಳನ್ನಾಡಿ 4 ಗೆಲುವು ಹಾಗೂ 7 ಸೋಲುಗಳೊಂದಿಗೆ 8 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸುರೇಶ್ ರೈನಾ (Suresh Raina) ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುತ್ತಿದ್ದಾರೆ. ಗಾಯಕ್ವಾಡ್ ಹಾಗೂ ಫಾಫ್ ಡು ಪ್ಲೆಸಿಸ್ ಸಿಎಸ್‌ಕೆ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಾಯುಡು, ಮೋಯಿನ್ ಅಲಿ, ಜಡೇಜಾ, ಧೋನಿ ಹಾಗೂ ಬ್ರಾವೋ ಮಿಂಚುತ್ತಿದ್ದಾರೆ. ಬೌಲಿಂಗ್‌ನಲ್ಲಿ ಸಿಎಸ್‌ಕೆ ಪಡೆ ಉತ್ತಮ ಆಯ್ಕೆಗಳನ್ನು ಹೊಂದಿದೆ. ಇದಕ್ಕೆ ವಿಪರೀತ ಎನ್ನುವಂತೆ ರಾಜಸ್ಥಾನ ರಾಯಲ್ಸ್ ಇನ್ನೂ ತನ್ನ ಕಾಂಬಿನೇಷನ್ ಸೆಟ್ ಮಾಡಿಕೊಳ್ಳುವಲ್ಲಿ ಎಡವುತ್ತಿದೆ.
ಸ್ಥಳ: ಅಬುಧಾಬಿ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
